ದಕ್ಷಿಣ ರಾಜ್ಯಗಳ ಮೇಲೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆರೋಪ ಮತ್ತು ಹಿಂದಿ ಹೇರಿಕೆ ವಿರುದ್ಧದ ಹೋರಾಟಗಳು ನಡೆಯುತ್ತಿವೆ. ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು, ಕರ್ನಾಟಕದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದೇ ಹೊತ್ತಿನಲ್ಲಿ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಜಿಟಲ್ ಫಲಕಗಳಲ್ಲಿ ಹಿಂದಿಯನ್ನು ತೆಗೆದು, ಕನ್ನಡದಲ್ಲಿ ಮಾಹಿತಿ ನೀಡಲಾಗುತ್ತಿದೆ. ಏರ್‌ಪೋರ್ಟ್‌ನಲ್ಲಿ ಕನ್ನಡ ಫಲಕಗಳ ಅಳವಡಿಕೆಗೆ ಭಾರೀ ಮೆಚ್ಚುಗೆ, ಶ್ಲಾಘನೆ ವ್ಯಕ್ತವಾಗುತ್ತಿದೆ.
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಿಮಾನಗಳ ಆಗಮನ, ನಿರ್ಗಮನ ಸೇರಿದಂತೆ ಇನ್ನಿತರೆ ಮಾಹಿತಿ ನೀಡುವ ಡ್ಯಾಶ್‌ಬೋರ್ಡ್‌ಗಳಲ್ಲಿ ಹಿಂದಿಯನ್ನು ತೆಗೆಯಲಾಗಿದೆ. ಹಿಂದಿ ಬದಲಿಗೆ ಕನ್ನಡದಲ್ಲಿ ಮಾಹಿತಿ ನೀಡಲಾಗುತ್ತಿದೆ. ಸದ್ಯ, ವಿಮಾನ ನಿಲ್ದಾಣದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾಹಿತಿಯನ್ನು ಪ್ರಕಟಿಸಲಾಗುತ್ತಿದೆ. ಕನ್ನಡ ಅಳವಡಿಕೆ ಬಗ್ಗೆ ಕನ್ನಡಿಗರು ಶ್ಲಾಘಿಸುತ್ತಿರುವ ಹೊರತಾಗಿಯೂ ಅನ್ಯ ರಾಜ್ಯದವರು, ಅದರಲ್ಲೂ ಉತ್ತರ ಭಾರತದ ರಾಜ್ಯಗಳ ಪ್ರಯಾಣಿಕರು ಹಿಂದಿಯನ್ನು ಕೈಬಿಟ್ಟಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡೇತರರಿಗೆ ಮಾಹಿತಿ ಪಡೆಯಲು ಸಮಸ್ಯೆಯಾಗುತ್ತದೆ ಎಂದು ಹೇಳುತ್ತಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಪ್ರಕಟವಾಗುತ್ತಿದ್ದ ವೇಳಾಪಟ್ಟಿಯಲ್ಲಿ ಕನ್ನಡ ಭಾಷೆ ಬಳಸಿರುವ ಬಗ್ಗೆ ಟ್ವೀಟ್ ಮಾಡಿರುವ ನೆಟ್ಟಿಗರರೊಬ್ಬರು, “ಬೆಂಗಳೂರಿನ ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಒಂದು ಅಚ್ಚರಿ ಕಾದಿತ್ತು. ಎಲ್ಲ ಡಿಜಿಟಲ್ ಬೋರ್ಡ್‌ಗಳಲ್ಲಿ ವಿಮಾನಗಳ ಆಗಮನ-ನಿರ್ಗಮನದ ಕುರಿತ ಮಾಹಿತಿಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರವೇ ನೀಡಲಾಗುತ್ತಿತ್ತು” ಎಂದು ಅಚ್ಚರಿ ಮತ್ತು ಹರ್ಷ ವ್ಯಕ್ತಪಡಿಸಿದ್ದಾರೆ.
ಇಂದು ಬೆಂಗಳೂರಿನ ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ T1 terminal ನಲ್ಲಿ ಒಂದು ಅಚ್ಚರಿ ಕಾದಿತ್ತು 😃
— ಗೌತಮ್ ಗಣೇಶ್ | Goutham Ganesh (@gouthamganeshmh) April 12, 2025
ಎಲ್ಲಾ Digital ಬೋರ್ಡುಗಳಲ್ಲಿ ವಿಮಾನಗಳ ಹಾರಾಟದ ಮಾಹಿತಿ, ವಿಮಾನಗಳ ಬರುವ ಮತ್ತು ಹೊರಡುವ ವೇಳಪಟ್ಟಿ ಮತ್ತಿತರ ಮಾಹಿತಿಗಳು ಬರೀ English ಹಾಗು ಕನ್ನಡದಲ್ಲಿತ್ತು ! ✨✈️#TwoLanguagePolicy@BLRAirport pic.twitter.com/FbaJhX5O7r
“ಕನ್ನಡ ನಾಡಿನಲ್ಲಿ ಕನ್ನಡ ಬಳಕೆ, ಉತ್ತೇಜನ ತಪ್ಪಲ್ಲ. ಇಲ್ಲಿ ಕನ್ನಡವೇ ಸಾರ್ವಭೌಮ. ಹಿಂದಿಯನ್ನು ಬಳಸದಿರುವ ಕ್ರಮ ಸರಿಯಾಗಿದೆ” ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಿಂದಿ ತೆಗೆದಿರುವ ಕುರಿತು ಆಕ್ಷೇಪಗಳೂ ವ್ಯಕ್ತವಾಗಿವೆ. “ಪ್ರಾದೇಶಿಕ ಭಾಷೆಯನ್ನು ಉತ್ತೇಜಿಸುವುದು ಮುಖ್ಯವಾದರೂ, ಪ್ರಮುಖ ಅಂತರರಾಷ್ಟ್ರೀಯ ದ್ವಾರದಲ್ಲಿ ಹಿಂದಿಯನ್ನು ಬಳಸದೇ ಇರುವುದು ತಪ್ಪು ಸಂದೇಶ ರವಾನಿಸುತ್ತದೆ. ಪ್ರವಾಸಿಗರು, ವಲಸಿಗರು ಹಾಗೂ ಇತರ ರಾಜ್ಯಗಳ ಪ್ರಯಾಣಿಕರ ಮೇಲೆ ಪರಿಣಾಮ ಬೀರಬಹುದು” ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಹೊರ ರಾಜ್ಯದ ಬಾನೋಡ ನಿಲ್ದಾಣದಲ್ಲಿ ಕನ್ನಡ ಇರೊಲ್ಲ. ಕನ್ನಡಿಗರು ಇಂಗ್ಲಿಷ್ ಮೂಲಕ ಹೊರಗನ್ನು ಕಾಣುತ್ತಾರೆ.
ಹಾಗೇ ಬೆಂಗಳೂರು.
ಇಲ್ಲಿ ಇಡೀ ಜಗತ್ತಿನ ಕೊಂಡಿನುಡಿ ಇಂಗ್ಲಿಷ್ ಜೊತೆ ಇಲ್ಲಿನ ನುಡಿಇದೆ.
ಇಡೀ ಜಗತ್ತಿನ ಕೊಂಡಿನುಡಿ ಇಂಗ್ಲೀಷ್ ಇರುವಾಗ, ಬಾರತಕ್ಕೆ ಕೊಂಡಿನುಡಿಯನ್ನಾಗಿ ಹಿಂದಿ ಹೇರುವುದು ಬೇಕಿಲ್ಲದ ನಡೆ.
ದೊಡ್ಡ ಬೆಕ್ಕು, ಚಿಕ್ಕಬೆಕ್ಕು ತಿರುಗಾಡಲು ದೊಡ್ಡಕಿಂಡಿಇರುವಾಗ, ಚಿಕ್ಕಬೆಕ್ಲಿಗೇಂತ ದೊಡ್ಡಕಿಂಡಿ ಪಕ್ಕದಲ್ಲಿ ಚಿಕ್ಕಕಿಂಡಿ ಮಾಡುವುದು ಹೆಡ್ಡತನ.