ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆ ಜಾರಿಯಿಂದ ಆಗಿರುವ ನಷ್ಟಕ್ಕೆ ಪರಿಹಾರ ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಳೆ (ಸೆ.11) ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಮತ್ತು ಕರ್ನಾಟಕ ಚಾಲಕರ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ.
ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಖಾಸಗಿ ಬಸ್ ನಿರ್ವಾಹಕರು ಮತ್ತು ಆಟೋ ರಿಕ್ಷಾ ಚಾಲಕರು ಸೇರಿದಂತೆ ಒಟ್ಟು 32 ಖಾಸಗಿ ಸಾರಿಗೆ ಸಂಘಗಳನ್ನು ಒಳಗೊಂಡಿರುವ ಒಕ್ಕೂಟವು ಸೆಪ್ಟೆಂಬರ್ 10 ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ ಮಧ್ಯರಾತ್ರಿಯವರೆಗೆ ರಸ್ತೆಗಿಳಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದೆ. ಶಕ್ತಿ ಯೋಜನೆಯು ತಮ್ಮ ವೃತ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಪದೇ ಪದೇ ಚರ್ಚೆಗಳ ಹೊರತಾಗಿಯೂ ರಾಜ್ಯ ಸರ್ಕಾರವು ತಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎನ್ನುವುದು ಅವರ ವಾದ.
ಖಾಸಗಿ ಸಾರಿಗೆ ಸಂಘಟನೆಗಳು ಕರೆ ನೀಡಿರುವ ಬಂದ್ ಕರೆಗೆ ಖಾಸಗಿ ಶಾಲಾ ಬಸ್‌ಗಳ ಚಾಲಕರು, ವ್ಯಾನ್ ಮಾಲೀಕರು ಹಾಗೂ ಇತರೆ ವಾಹನಗಳ ಚಾಲಕರೂ ಕೂಡ ಬೆಂಬಲ ನೀಡಿದ್ದು, ಇದು ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ನಗರದ ಕೆಲ ಶಾಲೆಗಳು ಸೋಮವಾರ ರಜೆ ಘೋಷಣೆ ಮಾಡಿವೆ.
ಬಂದ್ ಪ್ರಯುಕ್ತ ಖಾಸಗಿ ಸಾರಿಗೆ ವಾಹನಗಳ ಮಾಲೀಕರು ಮತ್ತು ಚಾಲಕರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಜಯನಗರ, ಕಲಾಸಿಪಾಳ್ಯ ಮತ್ತು ಕಂಟೋನ್ಮೆಂಟ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಬಂದ್‌ಗೆ ಬೆಂಬಲ ನೀಡುವಂತೆ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಮನವಿ ಮಾಡಿದ್ದಾರೆ.
ಖಾಸಗಿ ವಾಹನಗಳ ಬಂದ್ ಹಿನ್ನೆಲೆಯಲ್ಲಿ ಬಿಎಂಟಿಸಿ ಹೆಚ್ಚುವರಿ ಬಸ್‌ಗಳನ್ನು ಬಿಡಲು ತಯಾರಿ ನಡೆಸಿದೆ. ಮುಷ್ಕರದಿಂದಾಗಿ ಉಂಟಾಗಿರುವ ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು 50 ವೋಲ್ವೋ ಸೇರಿದಂತೆ 500 ಹೆಚ್ಚುವರಿ ಬಸ್ ನಿಯೋಜಿಸಲು ಬಿಎಂಟಿಸಿ ಯೋಜಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೇಡಿಕೆ ಹೆಚ್ಚಾದರೆ ನಿಗಮವು ತನ್ನ ವಿಮಾನ ನಿಲ್ದಾಣ ಬಸ್ ಸೇವೆಗಳನ್ನು ಹೆಚ್ಚಿಸಲು ಪರಿಗಣಿಸುವುದಾಗಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ: ಚಂದ್ರಬಾಬು ನಾಯ್ಡು ಬಂಧನ: ಆಂಧ್ರದಲ್ಲಿ ಮುಂದೇನಾಗಲಿದೆ?
ಹೆಚ್ಚಿನ ಖಾಸಗಿ ವಾಹನಗಳು ರಸ್ತೆಗಿಳಿಯಬಹುದಾದರೂ, ಬೆಂಗಳೂರಿನಲ್ಲಿ ಒಟ್ಟಾರೆ ಸಂಚಾರವು ಸಾಮಾನ್ಯಕ್ಕಿಂತ ಕಡಿಮೆ ಇರಬಹುದು. ಅಂದರೆ ಸಂಚಾರದ ಹರಿವು ಸಾಮಾನ್ಯಕ್ಕಿಂತ ಸ್ವಲ್ಪ ವೇಗವಾಗಿರಬಹುದು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಏನಿರುವುದಿಲ್ಲ: ಆಟೋ ರಿಕ್ಷಾಗಳು, ಟ್ಯಾಕ್ಸಿಗಳು, ವಿಮಾನ ನಿಲ್ದಾಣ ಟ್ಯಾಕ್ಸಿಗಳು, ಮ್ಯಾಕ್ಸಿ ಕ್ಯಾಬ್‌ಗಳು, ಖಾಸಗಿ ಬಸ್ಸುಗಳು, ಶಾಲಾ ವಾಹನಗಳು ಮತ್ತು ಕಾರ್ಪೊರೇಟ್ ವಾಹನಗಳು ರಸ್ತೆಗಿಳಿಯುವುದಿಲ್ಲ.