ಹೆರಿಗೆ ಮಾಡಿಸಲು ಗರ್ಭಿಣಿಯರ ಪೋಷಕರಿಂದ ಲಂಚ ಪಡೆಯುತ್ತಿದ್ದ ಆಸ್ಪತ್ರೆಯ ನರ್ಸ್ ಒಬ್ಬರನ್ನು ಲೋಕಾಯುಕ್ತ ಬಂಧಿಸಿದೆ. ಆಸ್ಪತ್ರೆ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು ನರ್ಸ್‌ಅನ್ನು ‘ರೆಡ್ ಹ್ಯಾಂಡ್’ ಆಗಿ ಹಿಡಿದಿದ್ದಾರೆ.
ಗಂಗಲಕ್ಷ್ಮಿ ಬಂಧಿತ ನರ್ಸ್ ಎಂದು ಹೆಸರಿಸಲಾಗಿದೆ. ಬೆಂಗಳೂರಿನ ಟಿ ದಾಸರಹಳ್ಳಿಯಲ್ಲಿರುವ ಮಲ್ಲಸಂದ್ರ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಬಾಗಲಗುಂಟೆ ನಿವಾಸಿ ಕಮಲಮ್ಮ ಎಂಬವರು ದಾಖಲಾಗಿದ್ದರು. ಅವರ ಬಳಿ ಗಂಗಲಕ್ಷ್ಮಿ 6,500 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಫೋನ್‌ಪೇ ಮೂಲಕ 5,000 ರೂ. ಪಡೆದುಕೊಂಡಿದ್ದಾರೆ. ಆಕೆ ಲಂಚ ಪಡೆಯುವಾಗಲೇ ಆಸ್ಪತ್ರೆ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಎಸ್‌ಪಿ ಶ್ರೀನಾಥ್ ಜೋಶಿ ನೇತೃತ್ವದ ತಂಡ, ಆರೋಪಿ ನರ್ಸ್‌ನನ್ನು ಬಂಧಿಸಿದೆ.
ಈ ಹಿಂದೆಯೂ ಗಂಗಲಕ್ಷ್ಮಿ ಅವರು ಹಲವಾರು ಗರ್ಭಿಣಿಯರ ಬಳಿ ಲಂಚ ಪಡೆದಿದ್ದಾರೆ ಎಂಬ ಆರೋಪಗಳಿವೆ. ಅಲ್ಲದೆ, ಭ್ರೂಣ ಹತ್ಯೆ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ ಎಂದು ತಿಳಿದುಬಂದಿದೆ.