ಅಕ್ರಮ ಗಾಂಜಾ ಮಾರಾಟ ಪ್ರಕರಣ ದಾಖಲಿಸುವುದಾಗಿ ಬೆದರಿಸಿ, ಸಿಸಿಬಿ ಅಧಿಕಾರಿಗಳು ಉದ್ಯಮಿಯಿಂದ 4 ಲಕ್ಷ ರೂ. ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಆರೋಪದ ಮೇಲೆ ಇಬ್ಬರು ಸಿಸಿಬಿ ಅಧಿಕಾರಿಗಳು ಸೇರಿದಂತೆ ಮೂವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸಿಸಿಬಿ ವಿಶೇಷದಳ ವಿಭಾಗದ ಎಎಸ್ಐ ಸಗೀರ್ ಅಹ್ಮದ್, ಹೆಡ್ ಕಾನ್‌ಸ್ಟೆಬಲ್ ಯತೀಶ್ ಮತ್ತು ಆಟೋ ಚಾಲಕ ಸಮೀರ್ ಎಂದು ಹೆಸರಿಸಲಾಗಿದೆ. ಮೂವರು ಬಂಧಿತ ಆರೋಪಿಗಳು ರಿಯಲ್ ಎಸ್ಟೇಟ್ ಉದ್ಯಮಿ ನಾಗಾರ್ಜುನ ಗಣೇಶ್ ಎಂಬವರಿಗೆ ಬೆದರಿಕೆವೊಡ್ಡಿ, ಹಣ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಉದ್ಯಮಿ ನಾಗಾರ್ಜುನ ಗಣೇಶ್ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.
“ಜನವರಿ 5ರಂದು ಜಯನಗರದಲ್ಲಿ ನಾನು ಕಾರಿನಲ್ಲಿ ತೆರಳುತ್ತಿದ್ದೆ. ಈ ವೇಳೆ, ನನ್ನನ್ನು ಆರೋಪಿ ಅಧಿಕಾರಿಗಳು ತಡೆದರು. ‘ಕಾರಿನಲ್ಲಿ ಗಾಂಜಾವಿರುವ ಬಗ್ಗೆ ಮಾಹಿತಿಯಿದೆ. ಪರಿಶೀಲಿಸಬೇಕು’ ಎಂದರು. ಈ ವೇಳೆ, ನನ್ನ ಬ್ಯಾಗ್ನಲ್ಲಿದ್ದ 4 ಲಕ್ಷ ರೂ. ಹಣ ನೋಡಿದ ಅವರು, ಆ ಹಣ ಕೊಡದಿದ್ದರೆ, ಗಾಂಜಾ ಸಾಗಾಟದ ಸುಳ್ಳು ಕೇಸ್ ಹಾಕುತ್ತೇವೆಂದು ಬೆದರಿಕೆವೊಡ್ಡಿ, ಹಣ ಕಸಿದುಕೊಂಡರು. ಅಧಿಕಾರಿಗಳ ಕೃತ್ಯದಲ್ಲಿ ಆಟೋ ಚಾಲಕ ಕೂಡ ಭಾಗಿಯಾಗಿದ್ದಾನೆ” ಎಂದು ದೂರುದಾರರು ಆರೋಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ತಾಂತ್ರಿಕ ಪುರಾವೆಗಳನ್ನು ಪರಿಶೀಲಿಸಿದ್ದಾರೆ. ಬಳಿಕ, ಮೂವರನ್ನೂ ಬಂಧಿಸಿದ್ದಾರೆ.