ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಯೋಗ ಕಾಯಮಾತಿ ಪತ್ರ ಕೊಡಿಸುವುದಾಗಿ ಸಫಾಯಿ ಕರ್ಮಚಾರಿ ಆಯೋಗದವರು ಬಿಬಿಎಂಪಿ ವ್ಯಾಪ್ತಿಯ ಪೌರಕಾರ್ಮಿಕರಿಂದ ತಲಾ 5,000 ರೂ. ವಸೂಲಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನೈರ್ಮಲ್ಯ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರು ತಮ್ಮ ಉದ್ಯೋಗವನ್ನು ಕಾಯಮಾತಿಗೊಳಿಸಬೇಕೆಂದು ಆಗ್ರಹಿಸಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಉದ್ಯೋಗ ಭದ್ರತೆಗೆ ಒತ್ತಾಯಿಸುತ್ತಿದ್ದಾರೆ. ಆದರೆ, ಈವರೆಗೆ ಅವರ ಬೇಡಿಕೆಗಳು ಈಡೇರಿಲ್ಲ. ಪೌರ ಕಾರ್ಮಿಕರ ಬೇಡಿಕೆಗಳನ್ನೇ ಬಂಡವಾಳ ಮಾಡಿಕೊಂಡಿರುವ ಸಫಾಯಿ ಕರ್ಮಚಾರಿ ಆಯೋಗದ ಆಧ್ಯಕ್ಷರು ಮತ್ತು ಕೆಲ ಮೇಸ್ತ್ರಿಗಳು ಪೌರ ಕಾರ್ಮಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಪ್ರತಿ ವಾರ್ಡ್‌ನಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಂದ ಆಯೋಗದ ಅಧ್ಯಕ್ಷ ಮೈಸೂರು ನಾರಾಯಣ ಮತ್ತು ಕೆಲ ಮೇಸ್ತ್ರಿಗಳು ಹಣ ವಸೂಲಿ ಮಾಡಿದ್ದಾರೆ ಎಂದು ಪೌರಕಾರ್ಮಿಕ ಮುಖಂಡ ತ್ಯಾಗರಾಜ್ ಆರೋಪಿಸಿದ್ದಾರೆ. ಏಪ್ರಿಲ್ 3ರಂದು ಎಲ್ಲ ಪೌರ ಕಾರ್ಮಿಕರಿಗೆ ಮುಖ್ಯಮಂತ್ರಿಗಳಿಂದ ಕಾಯಮಾತಿ ಪತ್ರ ಕೊಡಿಸುತ್ತೇವೆಂದು ಭರವಸೆ ನೀಡಿ, ಹಣ ವಸೂಲಿ ಮಾಡಿದ್ದಾರೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರು ಗಮನಿಸಿ, ಕ್ರಮ ಕೈಗೊಳ್ಳಬೇಕು ಎಂದು ತ್ಯಾಗರಾಜ್ ಒತ್ತಾಯಿಸಿದ್ದಾರೆ.
ಬೆಂಗಳೂರಿನಾದ್ಯಂತ ಬಿಬಿಎಂಪಿ ಅಡಿಯಲ್ಲಿ ಸಾವಿರಾರು ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರಿಂದ ತಲಾ ಐದು ಸಾವಿರದಂತೆ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಲಾಗಿದೆ. ಅಲ್ಲದೆ, ಹಣ ಕೊಟ್ಟ ಬಗ್ಗೆ ಯಾರಿಗಾದರೂ ಹೇಳಿದರೆ, ಕಾಯಮಾತಿ ಪಟ್ಟಿಯಿಂದ ಹೆಸರು ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ. ಲೋಕಾಯುಕ್ತಕ್ಕೂ ದೂರು ನೀಡುವುದಾಗಿ ಹೇಳಿದ್ದಾರೆ.