ಬೆಂಗಳೂರಿನ ಕೋರಮಂಗಲದಲ್ಲಿರುವ ಜಿಎಸ್ ಸೂಟ್ ಹೋಟೆಲ್‌ನಲ್ಲಿ ಕನ್ನಡಿಗರನ್ನು ಅಶ್ಲೀಲವಾಗಿ ನಿಂದಿಸಿ ಡಿಸ್‌ಪ್ಲೇ ಬೋರ್ಡ್ ಹಾಕಿದ್ದ ಘಟನೆ ಶನಿವಾರ ನಡೆದಿತ್ತು. ಘಟನೆ ಬೆನ್ನಲ್ಲೇ ಹೋಟೆಲ್‌ಅನ್ನು ‘ಸೀಜ್’ ಮಾಡಿಲಾಗಿದ್ದು, ಹೋಟೆಲ್‌ನ ಮ್ಯಾನೇಜರ್ ಸರ್ಫಜ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಹೋಟೆಲ್‌ನ ಡಿಸ್‌ಪ್ಲೇಯಲ್ಲಿ ಹಿಂದಿ ಪದಗಳನ್ನು ಬಳಸಿ ಅಶ್ಲೀಲವಾಗಿ ನಿಂದಿಸಲಾಗಿತ್ತು. ಅದನ್ನು ವಿಡಿಯೋ ಮಾಡಿಕೊಂಡಿದ್ದ ಸ್ಥಳೀಯರು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಹೋಟೆಲ್ ಬಳಸಿದ ಅಶ್ಲೀಲ ಪದಗಳು ಮತ್ತು ಕನ್ನಡಿಗರ ನಿಂದನೆಯು ಕನ್ನಡಿಗರನ್ನು ಕೆರಳಿಸಿತ್ತು. ಹೋಟೆಲ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಘಟನೆ ಬೆಳಕಿಗೆ ಬಂದ ಕೂಡಲೇ ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮ್ಯಾನೇಜರ್ ಸರ್ಫರಾಜ್, ಸಿಬ್ಬಂದಿ ಅಬ್ದುಲ್ ಸಮದ್‌ನನ್ನು ಬಂಧಿಸಿದ್ದಾರೆ. ಹೋಟೆಲ್ ಮಾಲೀಕ ಜಮ್ಸದ್ ವಿರುದ್ಧವೂ ಎಫ್‌ಐಆರ್ ದಾಖಲಿಸಿದ್ದಾರೆ. ಡಿಸ್‌ಪ್ಲೇ ಬೋರ್ಡ್ಅನ್ನು ವಶಕ್ಕೆ ಪಡೆದಿದ್ದಾರೆ.
“ಡಿಸ್‌ಪ್ಲೇ ಬೋರ್ಡ್ ಡಿಜಿಟಲ್ ತಂತ್ರಜ್ಞಾನದ್ದಾಗಿದ್ದು, ಯಾರೋ ಕಿಡಿಗೇಡಿಗಳು ಡಿಸ್‌ಪ್ಲೇ ಬೋರ್ಡ್‌ನ ಕಂಟ್ರೋಲರ್‌ಅನ್ನು ಹ್ಯಾಕ್ ಮಾಡಿ, ಈ ರೀತಿ ಕೃತ್ಯ ಎಸಗಿದ್ದಾರೆ” ಎಂದು ಹೋಟೆಲ್ ಮಾಲೀಕ ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಬಳಿಕ ಡಿಸ್‌ಪ್ಲೇ ಬೋರ್ಡ್ ಹ್ಯಾಕ್ ಆಗಿತ್ತೇ ಅಥವಾ ಹೋಟೆಲ್‌ನವರೇ ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿದ್ದಾರೆಯೇ ಎಂಬುದು ಗೊತ್ತಾಗಲಿದೆ.