ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಗೆ ಬೇಸತ್ತಿರುವ ಜನರು ದಿನನಿತ್ಯ ಸಂಚಾರಕ್ಕೆ ಮೇಟ್ರೋವನ್ನು ಅವಲಂಬಿಸಿದ್ದಾರೆ. ಸರಿಸುಮಾರು ದಿನಕ್ಕೆ 7 ಲಕ್ಷಕ್ಕೂ ಅಧಿಕ ಮಂದಿ ತಮ್ಮ ಪ್ರಯಾಣಕ್ಕೆ ಮೆಟ್ರೋ ಬಳಸುತ್ತಾರೆ. ದೂರದ ಪ್ರಯಾಣ, ಇಂಧನ ದರ ಏರಿಕೆ ಹಾಗೂ ಸಂಚಾರ ದಟ್ಟಣೆಯ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಮೆಟ್ರೋ ಉತ್ತಮ ಸಂಚಾರ ಆಯ್ಕೆಯೆಂದು ಹಲವರು ಭಾವಿಸಿದ್ದಾರೆ. ಆದರೆ, ಮೆಟ್ರೋ ಪ್ರಯಾಣ ದರವನ್ನು ಬಿಎಂಆರ್‌ಸಿಎಲ್ ಏಕಾಏಕಿ ದುಪಟ್ಟು ಏರಿಕೆ ಮಾಡಿದೆ.
ಮೆಟ್ರೋ ಟಿಕೆಟ್ ದರವನ್ನು ಬರೋಬ್ಬರಿ 45% ಏರಿಕೆ ಮಾಡಲಾಗಿದೆ. ಅಲ್ಲದೆ, ಕೆಲವು ನಿಲ್ದಾಣಗಳ ನಡುವಿನ ಪ್ರಯಾಣ ದರವು 70%ನಿಂದ 100%ವರೆಗೆ ಏರಿಕೆಯಾಗಿದೆ. ಇದರಿಂದ, ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಖಾಸಗಿ ನೌಕರರು ಸೇರಿದಂತೆ ಲಕ್ಷಾಂತರ ಮಂದಿಗೆ ತೊಂದರೆಯಾಗಿದೆ. ಪ್ರತಿದಿನದ ಪಾಸ್ ಪಡೆದು ಪ್ರಯಾಣಿಸುವವರು, ಮಾಸಿಕ ಪಾಸ್ ಪಡೆದು ಪ್ರಯಾಣಿಸುವವರು, ಸ್ಮಾರ್ಟ್ ಕಾರ್ಡ್ ಬಳಸುವವರು ಎಲ್ಲರಿಗೂ ದುಬಾರಿ ದರವು ಹೊರೆಯಾಗಿದೆ. ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ. ಟಿಕೆಟ್ ದರ ಇಳಿಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಹಲವರು ಮೆಟ್ರೋ ತೊರೆದು, ಮತ್ತೆ ತಮ್ಮ ಖಾಸಗಿ ವಾಹನಗಳನ್ನೇ ಬಳಸಲು ಆರಂಭಿಸಿದ್ದಾರೆ.
ಕೇಂದ್ರ ಸರ್ಕಾರವು ಮೆಟ್ರೋ ಸಮಿತಿಯ ಶಿಫಾರಸ್ಸಿನ ಮೇರೆಗೆ ಪ್ರಯಾಣ ದರವನ್ನು ಏಕಾಏಕಿ ಹೆಚ್ಚಳಗೊಳಿಸಿದೆ. ದೇಶದ ಇತರ ನಗರಗಳ ಮೆಟ್ರೋ ಪ್ರಯಾಣ ದರಕ್ಕೆ ಹೋಲಿಸಿದರೆ, ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ದುಬಾರಿಯಾಗಿದೆ. ಇದು ‘ನಮ್ಮ ಮೆಟ್ರೋ ಅಲ್ಲ – ಸುಲಿಗೆ ಮೆಟ್ರೋ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ #RevokeMetroFareHike ಅಭಿಯಾನ ಆರಂಭಿಸಿದ್ದಾರೆ.
ಈ ಹಿಂದೆ, 2017ರಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಇದೀಗ, ಮತ್ತೊಮ್ಮೆ ಪ್ರಯಾಣ ದರ ಹೆಚ್ಚಳವಾಗಿದೆ. ಟಿನ್ ಫ್ಯಾಕ್ಟರಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರೋ ನಿಲ್ದಾಣಕ್ಕೆ ಪ್ರತಿ ದಿನ 30 ರೂ. ಕೊಟ್ಟು ಓಡಾಡುತ್ತಿದ್ದ ಪ್ರಯಾಣಿಕರು, ಈಗ 60 ರೂ.ಗಳನ್ನು ಪಾವತಿಸಬೇಕಾಗಿದೆ. ಶೇ.5ರಷ್ಟು ಪ್ರಯಾಣ ದರ ಏರಿಸಿದರೆ ಪರವಾಗಿಲ್ಲ. ಆದರೆ, ಶೇ.45ರಿಂದ 50ರಷ್ಟು ಪ್ರಯಾಣ ದರ ಏರಿಸಿದರೆ ಹೇಗೆ ನಾವು ಪ್ರಯಾಣಿಸುವುದು ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದರ ಏರಿಕೆ ಖಂಡಿಸಿ, ಕಾಂಗ್ರೆಸ್ ವಿರುದ್ಧ ಬಿಜೆಪಿ, ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿವೆ. ದಾಳಿ-ಪ್ರತಿದಾಳಿಗಳಲ್ಲಿ ಮುಳುಗಿವೆ. ಆದರೆ, ಬಿಜೆಪಿ-ಕಾಂಗ್ರೆಸ್‌ನ ಜಗಳದಲ್ಲಿ ಪ್ರಯಾಣಿಕರು ಬಸವಳಿಯುತ್ತಿದ್ದಾರೆ.
ಕಳೆದ ಜನವರಿಯಲ್ಲಿ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿ.ಸಿ ಮೋಹನ್ರವರು ಮೆಟ್ರೋ ದರ ಏರಿಕೆಯನ್ನು ಮುಂದೂಡಲು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿಕೊಂಡಿದ್ದೇವೆ. ನಮ್ಮ ಶಿಫಾರಸನ್ನು ಅವರು ಒಪ್ಪಿದ್ದಾರೆ. ಅದಕ್ಕಾಗಿ ಧನ್ಯವಾದ ಎಂದು ಹೇಳಿದ್ದರು. ಆದರೆ, ಈಗ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರ ಕಾರಣವೆಂದು ಹೇಳುತ್ತಿದ್ದಾರೆ.
“ಮೆಟ್ರೋ ದರ ಏರಿಕೆಗೆ ರಾಜ್ಯಸರ್ಕಾರ ಹೊಣೆ ಅಲ್ಲ. ಮೆಟ್ರೋ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ದರ ನಿಗದಿ ಸಮಿತಿಯನ್ನು ಕೇಂದ್ರ ಸರ್ಕಾರವೇ ರಚಿಸುತ್ತದೆ. ಪ್ರಸ್ತುತ ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆ” ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.
ಈ ವರದಿ ಓದಿದ್ದೀರಾ?: ಇದು ಗ್ರಾಮಾಭಿವೃದ್ಧಿಯಲ್ಲ, ಅಪ್ಪಟ ಬಡ್ಡಿ ವ್ಯವಹಾರ – ಡಾ. ಸಂದೀಪ್ ಸಾಮೆತಡ್ಕ ನಾಯಕ್
ದರ ಏರಿಕೆಯಿಂದಾಗಿ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಭಾರೀ ಕುಸಿತ ಕಂಡಿದೆ. ಜನರು ಬಿಎಂಟಿಸಿ ಬಸ್ ಮತ್ತು ತಮ್ಮದೇ ಸ್ವಂತ ವಾಹನಗಳನ್ನು ಬಳಸಲು ಆರಂಭಿಸಿದ್ದಾರೆ. ತೀವ್ರ ಆಕ್ರೋಶದ ಹಿನ್ನೆಲೆ, ಕೇಂದ್ರ ಸರ್ಕಾರ ಮೆಟ್ರೋ ದರ ಏರಿಕೆಯನ್ನು ಕಡಿತಗೊಳಿಸಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ 50 ರೂಪಾಯಿ ದರವನ್ನ ಏರಿಕೆ ಮಾಡಿರುವ ಕೇಂದ್ರ ಸರ್ಕಾರ, ಈಗ 25 ರೂಪಾಯಿ ಕಡಿಮೆ ಮಾಡಿ ಕಣ್ಣೊರೆಸುವ ತಂತ್ರ ಹೆಣೆದಿದೆ. ಇದರಿಂದ, ಬೆಲೆ ಏರಿಕೆ ಮಾಡಿದಂತೆಯೂ ಆಗುತ್ತದೆ – ಪ್ರಯಾಣಿಕರ ಸಮಾಧಾನಕ್ಕಾಗಿ ಅಲ್ಪ ದರವನ್ನೂ ಕಡಿಮೆ ಮಾಡಿದಂತೆಯೂ ಆಗುತ್ತದೆ ಎಂಬುದು ಕೇಂದ್ರದ ಹಿಂದಿನ ಉದ್ದೇಶ ಎಂದು ಹೇಳಲಾಗುತ್ತಿದೆ.
ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರ 100 ರೂಪಾಯಿ ದರ ಏರಿಕೆ ಮಾಡಿ, 50 ರೂಪಾಯಿ ಕಡಿಮೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಹಾಗಾಗಿ, ಈಗಾಗಲೇ ಬೆಲೆ ಏರಿಕೆಗಳಿಂದ ತತ್ತರಿಸಿರುವ ಜನರ ಮೇಲೆ ಮತ್ತಷ್ಟು ಬೆಲೆ ಏರಿಕೆಯನ್ನು ಹೇರದೆ, ದರ ಏರಿಕೆ ಆದೇಶವನ್ನು ಹಿಂಪಡೆಯಬೇಕು. ಇದೇ ನಿಜವಾದ ಪರಿಹಾರ.