ಮಾದಕ ಪದಾರ್ಥಗಳ ಮಾರಾಟ ದಂಧೆಯಲ್ಲಿ ಸುಮಾರು 10 ವರ್ಷಗಳಿಗೂ ಅಧಿಕ ಅವಧಿಯಿಂದಲೂ ಸಕ್ರಿಯನಾಗಿದ್ದ ಪ್ರಕರಣದಡಿ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿ ಬರೋಬ್ಬರಿ 1.2 ಕೋಟಿ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ನೈಜೀರಿಯಾ ಮೂಲದ ಚಿಕ್ವುಮಾ ಬಂಧಿತ ಆರೋಪಿ. ಅವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಆರೋಪಿಯ ಮನೆ ಮೇಲೆ ದಾಳಿ ನಡೆಸಿದ ಮಾದಕ ದ್ರವ್ಯ ನಿಗ್ರಹದಳದ ಪೊಲೀಸರು, ಆತನನ್ನು ಬಂಧಿಸಿ ಬರೋಬ್ಬರಿ 1.2 ಕೋಟಿ ರೂಪಾಯಿ ಮೌಲ್ಯದ 600 ಗ್ರಾಂ ತೂಕದ ಎಂಡಿಎಂಎ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಯು ಕಡಿಮೆ ಬೆಲೆಗೆ ಮಾದಕ ಪದಾರ್ಥಗಳನ್ನು ಖರೀದಿಸಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳು, ಪಾರ್ಟಿಗಳಿಗೆ ಸರಬರಾಜು ಮಾಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿತ್ತು ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮುಂಗಾರು ಮಳೆಗೆ ಸರ್ಕಾರ ಸಿದ್ಧವಿದೆಯೇ?
ಕಳೆದ ವಾರ ಹತ್ತು ಕೋಟಿ ರೂ. ಮೌಲ್ಯದ ಮಾದಕವಸ್ತು ಸಾಗಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ವಿದೇಶಿ ಮಹಿಳೆಯನ್ನು ಸಿಸಿಬಿ ಮತ್ತು ಚಿಕ್ಕಜಾಲ ಪೊಲೀಸರು ಬಂಧಿಸಿ 10 ಕೋಟಿ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು ವಶಕ್ಕೆ ಪಡೆದಿದ್ದರು.
ಚಿಕ್ಕಜಾಲ ಠಾಣಾ ವ್ಯಾಪ್ತಿಯ ರಾಜಾನುಕುಂಟೆ ಬಳಿ ಮಾದಕವಸ್ತು ವ್ಯಾಪಾರ ಮಾಡುವಾಗ ಪೊಲೀಸರು ಆಕೆಯನ್ನು ಬಂಧಿಸಿ 5 ಕೆಜಿ 325 ಗ್ರಾಂ ಎಂಡಿಎಂಎ ಹಾಗೂ ಆ್ಯಪಲ್ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದರು.