ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಹಾವಳಿ ಹೇಳತೀರದಾಗಿದೆ. ರಸ್ತೆಗುಂಡಿಗಳಿಂದ ಹಲವಾರು ಮಂದಿ ಅಪಘಾತಕ್ಕೀಡಾಗಿದ್ದು, ಕೆಲವರು ಜೀವತೆತ್ತಿರುವ ಪ್ರಕರಣಗಳೂ ಇವೆ. ಆದರೂ, ರಸ್ತೆಗುಂಡಿಗಳ ಸಮಸ್ಯೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಕ್ತಿ ನೀಡಲು ಸಾಧ್ಯವಾಗಿಲ್ಲ. ಬೆಂಗಳೂರಿನ ವರ್ತೂರು ಪ್ರದೇಶದಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವಂತೆ ಕಳೆದೊಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿರುವ ಅಲ್ಲಿನ ನಿವಾಸಿಗಳು ಕೇಕ್ ಕತ್ತರಿಸಿ ವಾರ್ಷಿಕೋತ್ಸವ ಆಚರಿಸಿದ್ದಾರೆ. ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಐಟಿ ಕಾರಿಡಾರ್‌ಗಳಲ್ಲಿ ವರ್ತೂರು ಪ್ರದೇಶವೂ ಒಂದು. ಸಾವಿರಾರು ಮಂದಿ ಅಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ಉದ್ಯೋಗಕ್ಕಾಗಿ ನೆಲೆಸಿದ್ದಾರೆ. ಆದರೆ, ಅಲ್ಲಿನ ರಸ್ತೆಗಳು ಗುಂಡಿಬಿದ್ದಿವೆ. ವಾಹನ ಸವಾರರಿಗೆ ಅಪಾಯದ ಆತಂಕ ಸೃಷ್ಟಿಸಿವೆ. ರಸ್ತೆಯನ್ನು ದುರಸ್ತಿ ಮಾಡಿಸಿ, ಆತಂಕವಿಲ್ಲದ ಸಂಚಾರ ಸಾಧ್ಯವಾಗುವಂತೆ ಮಾಡಬೇಕೆಂದು ಅಲ್ಲಿನ ನಿವಾಸಿಗಳು ಒತ್ತಾಯಿಸುತ್ತಲೇ ಇದ್ದಾರೆ. ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸಮಸ್ಯೆ ಮಾತ್ರ ಬಗೆಹರಿದಿಲ್ಲ.
2023ರಲ್ಲಿ ಡಿಸೆಂಬರ್ 14ರಂದು ಉತ್ತಮ ರಸ್ತೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ವರ್ತೂರು ನಿವಾಸಿಗಳು ಗುಂಡಿಗಳನ್ನು ಮುಚ್ಚುವಂತೆ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರು. ಆದರೆ, ಈವರೆಗೆ ಕ್ರಮ ಕೈಗೊಳ್ಳಲಾಗಿಲ್ಲ. ಹೀಗಾಗಿ, ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ನಿವಾಸಿಗಳು ತಮ್ಮ ಹೋರಾಟದ ವಾರ್ಷಿಕೋತ್ಸವ ಆಚರಿಸಿದ್ದಾರೆ. ಬಿಬಿಎಂಪಿಯ ಅಸಮರ್ಥತೆ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

ಪ್ರತಿಭಟನೆಯಲ್ಲಿ ಮಾತನಾಡಿದ ವರ್ತೂರು ನಿವಾಸಿ ಜಗದೀಶ್ ರೆಡ್ಡಿ, “ಕಳೆದ ವಾರ ಸುರಿದ ಮಳೆಯಿಂದಾಗಿ ಇಲ್ಲಿನ ರಸ್ತೆಗುಂಡಿಗಳಲ್ಲಿ ನೀರು ತುಂಬಿಕೊಂಡಿತ್ತು. ರಸ್ತೆಗುಂಡಿ ಮುಚ್ಚುವಂತೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.