ಆರ್‌ಸಿಬಿ ಸಂಭ್ರಮಾಚರಣೆ ವೇಳೆ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪದ ಮೇಲೆ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅವರನ್ನು ಸರ್ಕಾರ ಅಮಾನತು ಮಾಡಿತ್ತು. ಸರ್ಕಾರದ ಅಮಾನತು ಆದೇಶವನ್ನು ಕೇಂದ್ರೀಯ ಅಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ರದ್ದುಗೊಳಿಸಿದೆ. ಈ ಬೆನ್ನಲ್ಲೇ, ಸಿಎಟಿ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಸಿಎಟಿ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಸರ್ಕಾರದ ಪರ ಎ.ಜಿ ಶಶಿಕಿರಣ್ ಶೆಟ್ಟಿ ಅವರು ತುರ್ತು ವಿಚಾರಣೆ ಕೋರಿ ಮನವಿ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, “ಇಂದೇ ವಿಚಾರಣೆಯಾಗಬೇಕೆಂಬ ತರಾತುರಿ ಯಾಕೆ” ಎಂದು ಪ್ರಶ್ನಿಸಿದೆ.
ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಿದ ಎ.ಜಿ ಶಶಿಕಿರಣ್ ಶೆಟ್ಟಿ, “ಸಿಎಟಿ ಆದೇಶದ ಬಳಿಕ ಅಧಿಕಾರ ವಹಿಸಿಕೊಳ್ಳಲು ಅಧಿಕಾರಿ ವಿಕಾಸ್ ಕುಮಾರ್ ಮುಂದಾಗಿದ್ದಾರೆ. ಹೀಗಾಗಿ, ತುರ್ತು ವಿಚಾರಣೆ ನಡೆಸಬೇಕು” ಎಂದು ಮನವಿ ಮಾಡಿದರು. ಆದಾಗ್ಯೂ, ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಜುಲೈ 3ಕ್ಕೆ ಮುಂದೂಡಿದೆ.