ಶಿಕ್ಷಕರು ವಿದ್ಯಾರ್ಥಿಗಳ ಕೈಯಲ್ಲಿ ಕೊಳೆಚೆ ಸ್ವಚ್ಛಗೊಳಿಸಿರುವ ಘಟನೆ ಬೆಂಗಳೂರಿನ ವಿಶ್ವಪ್ರಿಯ ಲೇಔಟ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಸ್ವಚ್ಛತಾ ಕೆಲಸಗಳಿಗೆ ವಿದ್ಯಾರ್ಥಿಗಳನ್ನು ಬಳಸಿಕೊಂಡ ಶಿಕ್ಷಕರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಯ ಸುತ್ತಲಿನ ಕೊಳಚೆ, ಬೇಲಿ ಹಾಗೂ ಮೂತ್ರ ವಿಸರ್ಜನೆಯ ಶೌಚಗುಂಡಿಗಳನ್ನು ವಿದ್ಯಾರ್ಥಿಗಳ ಕೈಯಲ್ಲಿ ಸ್ವಚ್ಛಗೊಳಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ‘ಕೊಳಚೆಯನ್ನು ಸ್ವಚ್ಛಗೊಳಿಸಲು ತಮಗೆ ಪಿ.ಟಿ ಶಿಕ್ಷಕಿ ಸುಮಿತ್ರ ಸೂಚಿಸಿದರು’ ಎಂದು ವಿದ್ಯಾರ್ಥಿಗಳು ಹೇಳಿರುವುದು ಸೆರೆಯಾಗಿದೆ.
“ಶಾಲೆಯ ನೈರ್ಮಲ್ಯ, ನಿರ್ವಹಣೆಗಾಗಿ ಸರ್ಕಾರವು ಹಣ ನೀಡುತ್ತದೆ. ಆ ಹಣವನ್ನು ಬಳಸಿ, ಕಾರ್ಮಿಕರಿಂದ ಸ್ವಚ್ಛತಾ ಕೆಲಸಗಳನ್ನು ಮಾಡಿಸಬೇಕು. ಆದರೆ, ವಿದ್ಯಾರ್ಥಿಗಳ ಕೈಯಲ್ಲಿ ಕೆಲಸ ಮಾಡಿಸಲಾಗಿದೆ. ಶಾಲೆಯ ಮುಖ್ಯ ಶಿಕ್ಷಕಿ ಮತ್ತು ಪಿ.ಟಿ ಶಿಕ್ಷಕಿಯನ್ನು ಅಮಾನತುಗೊಳಿಸಬೇಕು” ಎಂದು ಪೋಷಕರು ಒತ್ತಾಯಿಸಿದ್ದಾರೆ.
“ಹಲವು ದಿನಗಳಿಂದ ಶಾಲೆಯ ಶೌಚಾಲಯದ ಗುಂಡಿ ಕಟ್ಟಿಕೊಂಡಿತ್ತು. ಹಲವು ಬಾರಿ ಮೇಲಧಿಕಾರಿಗಳಿಗೆ ದೂರು ನೀಡಿದರೂ, ಸ್ವಚ್ಛತಾ ಕಾರ್ಯವನ್ನು ಮಾಡಿಸಲಾಗಿಲ್ಲ. ಹೀಗಾಗಿ, ಯಾರಿಂದಾರೂ ಸ್ವಚ್ಛಗೊಳಿಸಲು ಶಾಲೆಯ ಶಿಕ್ಷಕರಿಗೆ ಸೂಚಿಸಿದ್ದೆ. ಆದರೆ, ಅವರು ಮಕ್ಕಳ ಕೈಯಲ್ಲಿ ಸ್ವಚ್ಚತಾ ಕೆಲಸ ಮಾಡಿದ್ದಾರೆ. ತಪ್ಪಾಗಿದೆ” ಎಂದು ಮುಖ್ಯ ಶಿಕ್ಷಕಿ ಹೇಳಿರುವುದಾಗಿ ಟಿವಿ9 ವರದಿ ಮಾಡಿದೆ.