ವಂಚಕನೊಬ್ಬ ಮಹಿಳೆಯ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ, ಆಕೆಯ ಬಳಿ 17 ಲಕ್ಷ ರೂ. ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆರೋಪಿ ಸ್ವರೂಪ್ ಗೌಡ ಮತ್ತು ಮತ್ತೊಬ್ಬ ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಸ್ವರೂಪ್ ಗೌಡ 2022ರಲ್ಲಿ ಫೇಸ್‌ಬುಕ್ ಮೂಲಕ ಮಹಿಳೆಗೆ ಪರಿಚಯವಾಗಿದ್ದ. ಬಳಿಕ, ಇಬ್ಬರೂ ದೂರವಾಣಿ ಸಂಖ್ಯೆಗಳನ್ನು ಪರಸ್ಪರ ವಿನಿಯಮ ಮಾಡಿಕೊಂಡು, ನಿರಂತರ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ.
ಈ ನಡುವೆ, ಆರೋಪಿ ಸ್ವರೂಪ್ ತಾನು ಕೋರ್ಟ್ ಪ್ರಕರಣವೊಂದರಲ್ಲಿ ಆರ್ಥಿಕ ತೊಂದರೆಗೆ ಒಳಗಾಗಿರುವುದಾಗಿ ಹೇಳಿಕೊಂಡು ಮಹಿಳೆಯ ಬಳಿ ಸಹಾಯ ಕೇಳಿದ್ದ. ಆತನನ್ನು ನಂಬಿದ ಮಹಿಳೆ, ಆತನಿಗೆ 4.42 ಲಕ್ಷ ರೂ. ಕೊಟ್ಟಿದ್ದರು. ಆ ನಂತರ, ಆಕೆಯ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ, ಹೆಚ್ಚುವರಿ 12.82 ಲಕ್ಷ ರೂ.ಗಳನ್ನು ಸುಲಿಗೆ ಮಾಡಿದ್ದನೆಂದು ಆರೋಪಿಸಲಾಗಿದೆ.
ಇತ್ತೀಚೆಗೆ, ತಾನು ಕೊಟ್ಟಿದ್ದ ಹಣವನ್ನು ಹಿಂದಿರುಗಿಸುವಂತೆ ಆರೋಪಿಯನ್ನು ಮಹಿಳೆ ಒತ್ತಾಯಿಸಿದ್ದಾರೆ. ಹಣ ವಾಪಸ್ ಕೇಳಿದ ಬಳಿಕ, ಆಕೆಯ ಫೋನ್ ಕರೆಗಳನ್ನು ಸ್ವೀಕರಿಸುವುದನ್ನು ಆರೋಪಿ ನಿಲ್ಲಿಸಿದ್ದಾನೆ. ಆತನನ್ನು ಸುಂಕದಕಟ್ಟೆ ಬಸ್ ನಿಲ್ದಾಣದಲ್ಲಿ ನೇರವಾಗಿ ಭೇಟಿ ಮಾಡಿ, ಹಣ ಕೇಳಿದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ಜಾತಿ ಸಮೀಕ್ಷೆ: ಒಬಿಸಿಗಳಿಗೆ ವಂಚಿಸಲು ಬಿಜೆಪಿ ನಾಯಕರ ಯತ್ನ?
ಇಷ್ಟೆಲ್ಲ ನಡೆದ ಬಳಿಕ, 2025ರ ಆಗಸ್ಟ್‌ನಲ್ಲಿ ಸ್ವರೂಪ್‌ನ ಸಹಚರರು ಆಕೆಯನ್ನು ಭೇಟಿ ಮಾಡಿ, 2 ಲಕ್ಷ ರೂ. ಕೊಡಿಸುವುದಾಗಿ ಹೇಳಿ ರಾಜಿ ಸಂಧಾನ ಮಾಡಿದ್ದಾರೆ. ಪೊಲೀಸ್ ದೂರು ಅಥವಾ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸದಂತೆ ಬೆದರಿಕೆ ಹಾಕಿದ್ದಾರೆ. ಆದಾಗ್ಯೂ, ಯಾವುದೇ ಹಣ ನೀಡಿಲ್ಲವೆಂದು ಆರೋಪಿಸಲಾಗಿದೆ.
ಇದೀಗ, ಮಹಿಳೆಯು ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ. ಅವರ ದೂರು ಆಧರಿಸಿ ವಂಚನೆ, ಕಿರುಕುಳ, ಬೆದರಿಕೆ ಹಾಗೂ ಹಲ್ಲೆ ಆರೋಪದ ಮೇಲೆ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.