- ನಾಯಿಗಳು ಸಂತ್ರಸ್ತನ ಮೇಲೆ ಹಲ್ಲೆ ಮಾಡುವಂತೆ ಪ್ರೇರೇಪಿಸಿದ ವ್ಯಕ್ತಿಗಳು
- ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಬಾಯ್ ಮೇಲೆ ಮೂರು ಬೀದಿ ನಾಯಿಗಳು ದಾಳಿ ಮಾಡಿರುವ ಘಟನೆ ಬೊಮ್ಮನಹಳ್ಳಿಯ ಕೋಡಿಚಿಕ್ಕನಹಳ್ಳಿಯ ಲೇಕ್ ಸಿಟಿ ರಸ್ತೆಯಲ್ಲಿ ನಡೆದಿದೆ.
ಸಂತ್ರಸ್ತ ಯು ಶಿವರಾಜ್ (53) ಎಂಬುವವರು ಕೆ ಎಸ್ ಲೇಔಟ್‌ನ 2ನೇ ಹಂತದ ನಿವಾಸಿ. ಇವರು ಆರ್ಡ್‌ರ್ ಬಂದಿದ್ದ ಆಹಾರವನ್ನು ಡೆಲಿವರಿ ನೀಡಲು ಬೊಮ್ಮನಹಳ್ಳಿಯ ಲೇಕ್ ಸಿಟಿ ಸಿಟಿ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು. ಆಹಾರವನ್ನು ನೀಡಿ ಹಿಂತಿರುಗುತ್ತಿದ್ದ ವೇಳೆ, ಮಧ್ಯರಾತ್ರಿ ಸುಮಾರು 2 ರಿಂದ 2.20 ರ ನಡುವೆ ಮೂರು ನಾಯಿಗಳು ಏಕಾಏಕಿ ಶಿವರಾಜು ಅವರನ್ನು ಅಟ್ಟಿಸಿಕೊಂಡು ಬರಲಾರಂಭಿಸಿದವು.
ಈ ವೇಳೆ ಶಿವರಾಜು ಅವರು ತಮ್ಮ ರಕ್ಷಣೆಗೆಂದು ಕಲ್ಲು ತೆಗೆದುಕೊಂಡು ನಾಯಿಗಳಿಗೆ ಹೊಡೆದಿದ್ದಾರೆ. ಸಮೀಪದಲ್ಲೇ ಇದ್ದ ಇಬ್ಬರು ವ್ಯಕ್ತಿಗಳು ನಾಯಿಗಳಿಗೆ ಕಲ್ಲಿನಿಂದ ಹೊಡೆಯುವುದಕ್ಕೆ ಜಗಳವಾಡಿದ್ದಾರೆ. ಬಳಿಕ ಸಂತ್ರಸ್ತನಿಗೆ ಆರೋಪಿಗಳು ಕಲ್ಲು ಎಸೆದಿದ್ದಾರೆ. ನಂತರ ದಾಳಿ ನಡೆಸುವಂತೆ ಮೂರು ನಾಯಿಗಳನ್ನು ಪ್ರೇರೆಪಿಸಿದ್ದಾರೆ. ಮೂರು ನಾಯಿಗಳು ಶಿವರಾಜು ಅವರನ್ನು ಕಚ್ಚಿದ್ದು, ಅವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತಂತೆ ಶಿವರಾಜು ಅವರು ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, 55 ವರ್ಷದ ತಾಯಿ ಮತ್ತು 35 ವರ್ಷದ ಮಗನ ವಿರುದ್ಧ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಶಿವರಾಜ್, “ನಾನು ಹೇಗೆ ಬದುಕಿದ್ದೇನೆ ಎಂದು ನನಗೆ ತಿಳಿದಿಲ್ಲ. ಹೆಲ್ಮೆಟ್ ಧರಿಸಿದ್ದೆ, ಅದನ್ನು ನಾಯಿಗಳಿಂದ ತಪ್ಪಿಸಿಕೊಳ್ಳಲು ಬಳಸಿದೆ. ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡಲಾರಂಭಿಸಿದೆ. ಈ ವೇಳೆ, ನಾನು ಧರಿಸಿರುವ ಕನ್ನಡಕ ಕೆಳಗೆ ಬಿದ್ದಿತು. ನನಗೆ ಸರಿಯಾಗಿ ಏನೂ ಕಾಣಲಿಲ್ಲ. ಬಳಿಕ ನಾನು ನನ್ನ ಸಮತೋಲನವನ್ನು ಕಳೆದುಕೊಂಡು ರಸ್ತೆಯ ಜೆಲ್ಲಿ ಕಲ್ಲಿನ ಮೇಲೆ ಉರುಳಿ ಬಿದ್ದೆ” ಎಂದು ತಿಳಿಸಿದರು.
“ಸಹಾಯಕ್ಕಾಗಿ ಕಿರುಚಿದೆ. ಜನರು ತಮ್ಮ ಮನೆಯಿಂದ ಹೊರಗೆ ಬಂದರು. ಆದರೆ, ಯಾರೂ ನನಗೆ ಸಹಾಯ ಮಾಡಲಿಲ್ಲ. ಮೈ ಮೇಲೆ ತುಂಬಾ ಗಾಯಗಳಾಗಿವೆ. ಇನ್ನೂ ನೋವಿದೆ. ನಾಯಿ ಕಡಿತಕ್ಕೆ ರೇಬೀಸ್ ಚುಚ್ಚುಮದ್ದನ್ನು ಪಡೆಯುತ್ತಿದ್ದೇನೆ. ನನ್ನ ಮೇಲೆ ದಾಳಿ ಮಾಡುವಂತೆ ನಾಯಿಗಳಿಗೆ ಪ್ರೇರೇಪಿಸಿದ ಮಹಿಳೆ ಮತ್ತು ಆಕೆಯ ಮಗ ಒಳಗೆ ಹೋದರು. ನಾನು ಆಸ್ಪತ್ರೆಗೆ ಹೋಗುತ್ತಿದ್ದಾಗ ಪೊಲೀಸ್ ಗಸ್ತು ತಿರುಗುತ್ತಿದ್ದ ವಾಹನವನ್ನು ನೋಡಿ ಅವರ ಸಹಾಯ ಕೇಳಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಆದಾಯ ಹೆಚ್ಚಳಕ್ಕೆ ಕಟ್ಟಡಗಳನ್ನು ಬಾಡಿಗೆಗೆ ನೀಡಲು ಯೋಜಿಸಿದ ರಸ್ತೆ ಸಾರಿಗೆ ನಿಗಮಗಳು
“55 ವರ್ಷದ ಮಹಿಳೆ ಮತ್ತು ಆಕೆಯ 35 ವರ್ಷದ ಮಗನ ವಿರುದ್ಧ ದೂರು ದಾಖಲಾಗಿದೆ. ಇಬ್ಬರನ್ನೂ ತನಿಖೆ ಮಾಡಲಾಯಿತು. ಆದರೆ, ಅವರು ತಮ್ಮ ನಾಯಿಗಳನ್ನು ಬೆನ್ನಟ್ಟುವಂತೆ ಮಾಡಿಲ್ಲ ಎಂದರು. ಶಿವರಾಜ್ ಪ್ರಾಣಿಗಳ ಮೇಲೆ ದಾಳಿ ಮಾಡಲು ಕಲ್ಲು ತೆಗೆದುಕೊಂಡಿದ್ದಾರೆ ಎಂದು ದೂಷಿಸುತ್ತಿದ್ದಾರೆ. ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್‌ಗಳ ಜತೆಗೆ ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆಗಾಗಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.