ಬೆಂಗಳೂರಿನಲ್ಲಿ ಹೆಗ್ಗಿಲ್ಲದೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದ ದ್ವಿಚಕ್ರ ವಾಹನ ಸವಾರನೊಬ್ಬನ ಬೈಕ್‌ಗೆ ಬೆಂಗಳೂರು ಸಂಚಾರ ಪೊಲೀಸರು ಬರೋಬ್ಬರಿ 1.61 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡದ ಮೊತ್ತವು ಬೈಕ್‌ನ ಬೆಲೆಗಿಂತಲೂ ಅಧಿಕವಾಗಿದೆ. ದಂಡದ ಮೊತ್ತದಲ್ಲಿ, ಯಾವ ಬೈಕ್‌ಗೆ ದಂಡ ವಿಧಿಸಲಾಗಿದೆಯೇ ಅಂತಹ ಮೂರು ಬೈಕ್‌ಗಳನ್ನು ಖರೀದಿಸಬಹುದು ಎಂದು ಹೇಳಲಾಗುತ್ತಿದೆ.
ಸಂಚಾರ ನಿಯಮಗಳನ್ನು ಪಾಲಿಸುವಂತೆ ಪೊಲೀಸ್ ಇಲಾಖೆ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ದಂಡದ ಪ್ರಮಾಣವನ್ನೂ ಹೆಚ್ಚಿಸಿದೆ. ಆದಾಗ್ಯೂ, ನಿಯಮ ಉಲ್ಲಂಘನೆಗೆ ಕಡಿವಾಣಿ ಬಿದ್ದಿಲ್ಲ. ಬೆಂಗಳೂರಿನ ದ್ವಿಚಕ್ರ ವಾಹನ ಸವಾರನೊಬ್ಬ 2023ರಿಂದ ಈವರೆಗೆ ಬರೋಬ್ಬರಿ 311 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದು, ಆ ಬೈಕ್‌ಗೆ ಒಟ್ಟು 1.61 ಲಕ್ಷ ರೂ. ದಂಡ ವಿಧಿಸಲಾಗಿದೆ.
ಆ ಬೈಕ್ ಕಲಾಸಿಪಾಳ್ಯದಲ್ಲಿ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿರುವ ಪೆರಿಯಸ್ವಾಮಿ ಎಂಬಾತನದ್ದು ಎಂದು ತಿಳಿದುಬಂದಿದೆ. ಬೈಕ್‌ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಪೆರಿಯಸ್ವಾಮಿ ಮತ್ತು ಸುದೀಪ್ ಎಂಬವರು ಬಳಸುತ್ತಿದ್ದರು. ಅವರು ಎಸಗಿರುವ ನಿಯಮ ಉಲ್ಲಂಘನೆಗಳಲ್ಲಿ ಹೆಚ್ಚಾಗಿ ಹೆಲ್ಮೆಟ್ ಧರಿಸದೇ ಇರುವುದು, ಸಿಗ್ನಲ್ ಜಂಪ್, ಏಕಮುಖ ಚಾಲನೆ, ನಿರ್ಬಂಧಿತ ಸ್ಥಳದಲ್ಲಿ ವಾಹನ ನಿಲುಗಡೆ ಪ್ರಕರಣಗಳಿವೆ ಎಂದು ವರದಿಯಾಗಿದೆ.
ದಂಡ ಪಾವತಿಸುವಂತೆ ಬೈಕ್ ಮಾಲೀಕನಿಗೆ ಹಲವು ಬಾರಿ ನೋಟಿಸ್ ಕೂಡ ಜಾರಿಗೊಳಿಸಲಾಗಿತ್ತು. ಆದರೂ, ನಿಯಮಗಳನ್ನು ಪಾಲಿಸದ ಸವಾರ, ನಿರಂತರವಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ ಎಂದು ಆರೋಪಿಸಲಾಗಿದೆ.
ದಂಡ ಪಾವತಿಸುವಂತೆ ವಾಹನದ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಪಾವತಿ ಮಾಡದಿದ್ದರೆ, ಮತ್ತೊಂದು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಜಾರ್ಜ್‌ಶೀಟ್ ಸಲ್ಲಿಸುತ್ತೇವೆಂದು ಕೆ.ಆರ್ ಮಾರುಕಟ್ಟೆ ಪೊಲೀಸರು ತಿಳಿಸಿದ್ದಾರೆ.