ಬೆಂಗಳೂರಿನಲ್ಲಿ ಪುಂಡರ ವ್ಹೀಲಿಂಗ್ ಹಾವಳಿ ಹೆಚ್ಚಾಗಿದ್ದು, ಜನರಿಗೆ ಸಂಚಾರ ಅಡಚಣೆಯ ತಲೆನೋವಾಗಿದ್ದರೆ, ಪೊಲೀಸರಿಗೆ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕುವುದು ಸವಾಲಾಗಿ ಪರಿಣಮಿಸಿದೆ. ಎಲ್ಲೆಡೆ ಫ್ಲೈಓವರ್‌ಗಳಲ್ಲಿ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ವ್ಹೀಲಿಂಗ್ ಹಾವಳಿಯನ್ನು ತಡೆಯಲು ರಾತ್ರಿ ವೇಳೆ ‘ಮೇಲುರಸ್ತೆ’ಗಳಲ್ಲಿ (ಪ್ಲೈಓವರ್) ವಾಹನ ಸಂಚಾರವನ್ನು ನಿರ್ಬಂಧಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ವ್ಹೀಲಿಂಗ್ ಹಾವಳಿಯನ್ನು ತಡೆಯುವ ಉದ್ದೇಶದಿಂದ ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನಗರದ ಎಲ್ಲ ಮೇಲುರಸ್ತೆಗಳನ್ನೂ ನಿರ್ಬಂಧಿಸಲಾಗುತ್ತದೆ. ಫ್ಲೈಓವರ್‌ಗಳ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ, ವಾಹನ ಸಂಚಾರವನ್ನು ನಿರ್ಬಂಧಿಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, ಪೊಲೀಸರು ಇನ್ನೂ ಅಧಿಕೃತ ಆದೇಶ ಅಥವಾ ನಿರ್ಧಾರದ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ.
ಆದಾಗ್ಯೂ, ಫ್ಲೈಓವರ್‌ಗಳಲ್ಲಿ ಸಂಚಾರ ನಿರ್ಬಂಧಿಸುವುದು ರಾತ್ರಿ ವೇಳೆ ಸಂಚರಿಸುವ ಪ್ರಯಾಣಿಕರು ಮತ್ತು ವಾಹನ ಸವಾರರಿಗೆ ಅಡಚಣೆಯಾಗಲಿದ್ದು, ಮೇಲುರಸ್ತೆಗಳನ್ನು ಬಿಟ್ಟು, ಅನಗತ್ಯವಾಗಿ ಸಿಗ್ನಲ್‌ಗಳಲ್ಲಿ ನಿಂತು-ದಾಟುವ ಶಿಕ್ಷೆಯಂತಾಗಲಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಅಲ್ಲದೆ, “ರಾತ್ರಿ ವೇಳೆ ಮಾತ್ರವೇ ಪುಂಡರು ವ್ಹೀಲಿಂಗ್ ಮಾಡುತ್ತಾರೆ ಎಂದೇನೂ ಇಲ್ಲ. ಮಧ್ಯಾಹ್ನ, ಸಂಜೆಯ ಸಮಯದಲ್ಲೇ ವ್ಹೀಲಿಂಗ್ ಹಾವಳಿ ಹೆಚ್ಚಿರುತ್ತದೆ. ಹೀಗಾಗಿ, ರಾತ್ರಿ 11 ಗಂಟೆ ಬಳಿಕ ಫ್ಲೈಓವರ್‌ಗಳಲ್ಲಿ ನಿರ್ಬಂಧ ಹೇರುವುದರಿಂದ ಪ್ರಯೋಜನವಿಲ್ಲ” ಎಂದು ಈದಿನ.ಕಾಮ್ ಜೊತೆ ಮಾತನಾಡಿದ ಬೆಂಗಳೂರು ನಿವಾಸಿ ನಾಗೇಶ್ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ, ವ್ಹೀಲಿಂಗ್ ಮಾಡುವ ಪುಂಡರ ಸಂಖ್ಯೆ ಹೆಚ್ಚಾಗಿದೆ. ಕೆಲವು ಪುಂಡರು ಮಾರಕಾಸ್ತ್ರಗಳನ್ನು ಹಿಡುದುಕೊಂಡು ದಾಂಧಲೆ ನಡೆಸುತ್ತಾ, ವ್ಹೀಲಿಂಗ್ ಮಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿವೆ. ಆಕ್ಷೇಪಗಳು ವ್ಯಕ್ತವಾಗಿವೆ. ಹಲವಾರು ನೆಟ್ಟಿಗರು ಬೆಂಗಳೂರು ಸಂಚಾರ ಪೊಲೀಸರನ್ನು ಟ್ಯಾಗ್ ಮಾಡಿ, ವ್ಹೀಲಿಂಗ್ ವಿಚಾರವಾಗಿ ದೂರುಗಳನ್ನೂ ದಾಖಲಿಸಿದ್ದಾರೆ. ಈ ಹೀಗಾಗಿ, ಫ್ಲೈಓವರ್‌ಗಳಲ್ಲಿ ಸಂಚಾರ ನಿರ್ಬಂಧಿಸುವ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.
“ನಿಯಮ ಉಲ್ಲಂಘನೆಗಳ ಕುರಿತು ಸಾರ್ವಜನಿಕರು ಈ ಹಿಂದೆ ‘ಪಬ್ಲಿಕ್ ಐ’ (PublicEye) ಆ್ಯಪ್ ಬಳಸುತ್ತಿದ್ದರು. ಆದರೆ, ಈಗ ಅದನ್ನು ಬೆಂಗಳೂರು ಪೊಲೀಸರು ಮೇಲ್ವಿಚಾರಣೆ ಮಾಡಲಾಗುತ್ತಿಲ್ಲ. ಹೀಗಾಗಿ, ಹೊಸದಾಗಿ ಅಭಿವೃದ್ಧಿಪಡಿಸಲಾದ BTP-ASTraM ಆ್ಯಪ್ಅನ್ನು ತರಲಾಗಿದೆ. ಸಾರ್ವಜನಿಕರು ಆ ಆ್ಯಪ್ ಬಳಸಿ, ದೂರುಗಳನ್ನು ದಾಖಲಿಸಬಹುದು” ಎಂದು ಪೊಲೀಸರು ತಿಳಿಸಿದ್ದಾರೆ.