ಆಗ್ಗಾಗ್ಗೆ ಸಣ್ಣ-ಪುಟ್ಟ ಜಗಳಗಳಿಗೂ ಮನೆ ಬಿಟ್ಟು ಹೋಗುತ್ತಿದ್ದ ಪತ್ನಿಯ ನಡೆಯಿಂದ ನೊಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಬೆಂಗಳೂರಿನ ಕೆ.ಪಿ ಅಗ್ರಹಾರದ ನಿವಾಸಿ ಗೋವರ್ಧನ್ ಎಂದು ತಿಳಿದುಬಂದಿದೆ. ಗೋವರ್ಧನ್ ಅವರ ಪತ್ನಿ ಯಾರಿಗೂ ಮಾಹಿತಿ ನೀಡದೇ ಪದೇ-ಪದೇ ಮನೆ ಬಿಟ್ಟು ಹೋಗುತ್ತಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ, ಚಿಂತೆಗೀಡಾಗಿದ್ದ ಗೋವರ್ಧನ್ ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಂಡಿದ್ದಾರೆ.
ಗೋವರ್ಧನ್ ಮತ್ತು ಅವರ ಪತ್ನಿ ಪ್ರಿಯಾ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರಿಯಾ ಅವರು ಆಗಾಗ್ಗೆ ಮನೆ ಬಿಟ್ಟು ಹೋಗುತ್ತಿದ್ದರು. ಕಳೆದ ತಿಂಗಳು ಕೂಡ ಮನೆ ತೊರೆದು ಹೋಗಿದ್ದರು ಎಂದು ಹೇಳಲಾಗಿದೆ.
ಇತ್ತೀಚೆಗೆ, ಅವರು ಮನೆ ಬಿಟ್ಟು ಹೋಗಿದ್ದರಿಂದ ಚಿಂತೆಗೀಡಾಗಿದ್ದ ಗೋವರ್ಧನ್ ಖಿನ್ನತೆಗೆ ಒಳಗಾಗಿದ್ದರು. ಸೋಮವಾರ, ಮನೆಯಲ್ಲಿಯೇ ಇದ್ದ ಗೋವರ್ಧನ್ ಇಡೀ ದಿನ ಮನೆಯಿಂದ ಹೊರಬಂದಿರಲಿಲ್ಲ. ಸಂಜೆ ವೇಳೆಗೆ ಮನೆಯತ್ತ ನೆರೆಹೊರೆಯವರು ಗಮನಿಸಿದಾಗ ಗೋವರ್ಧನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಸಾವಿಗೆ ಪ್ರಿಯಾ ಅವರೇ ಕಾರಣವೆಂದು ಗೋವರ್ಧನ್ ಕುಟುಂಬಸ್ಥರು ಆರೋಪಿಸಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.