ತನ್ನ ಕಚೇರಿ ಬಳಿ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಐಟಿ ಉದ್ಯೋಗಿ ಮಹಿಳೆಯೊಬ್ಬರು ಬಿಎಂಟಿಸಿ ಬಸ್ ಚಾಲಕನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆ ಶನಿವಾರ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
ಬೆಂಗಳೂರಿನ ಸರ್ಜಾಪುರ ಬಳಿಯ ಕೈಕೊಂಡರಹಳ್ಳಿಯಲ್ಲಿ ಘಟನೆ ನಡೆದಿದೆ. ಬಸ್ ನಿಲುಗಡೆ ಇಲ್ಲದ ಸ್ಥಳದಲ್ಲಿ ಬಸ್ ನಿಲ್ಲಿಸುವಂತೆ ಮಹಿಳೆ ಕೇಳಿದ್ದು, ಮಾರ್ಗ ಮಧ್ಯೆ ಬಸ್ ನಿಲ್ಲಿಸಲು ಚಾಲಕ ಅತಹರ್ ಹುಸೇನ್ ನಿರಾಕರಿಸಿದ್ದಾರೆ. ಆ ಕಾರಣಕ್ಕೆ ಅವರ ಮೇಲೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಕಾವ್ಯ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೈಕೊಂಡರಹಳ್ಳಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದ ಕಾವ್ಯ, ಮಾರ್ಗ ಮಧ್ಯೆ ತನ್ನ ಕಚೇರಿಯ ಎದುರು ಬಸ್ ನಿಲ್ಲಿಸುವಂತೆ ಚಾಲಕನಿಗೆ ಒತ್ತಾಯಿಹಸಿದ್ದಾರೆ. ಆದರೆ, ನಿಲುಗಡೆ ಇಲ್ಲದ ಸ್ಥಳದಲ್ಲಿ ರಸ್ತೆಯಲ್ಲಿ ಬಸ್ ನಿಲ್ಲಿಸಿದರೆ ಸಂಚಾರ ದಟ್ಟಣೆ ಉಂಟಾಗುತ್ತದೆ, ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಚಾಲಕ ಬಸ್ ನಿಲ್ಲಿಸಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.
ತಮಗೆ ಹೊಟ್ಟೆನೋವು ಇದೆ. ನಡೆಯಲು ಆಗುವುದಿಲ್ಲ. ಇಲ್ಲಿಯೇ ಬಸ್ ನಿಲ್ಲಿಸಿ ಎಂದು ಕಾವ್ಯ ಕೂಗಾಡಿದ್ದಾರೆ. ಹೊಟ್ಟೆ ನೋವು ಎಂದ ತಕ್ಷಣ ಚಾಲಕ ಬಸ್‌ಅನ್ನು ರಸ್ತೆಯ ಬದಿಗೆ ತಿರುಗಿಸಿ ನಿಲ್ಲಿಸಿದ್ದಾರೆ. ಆದಾಗ್ಯೂ, ಚಾಲಕನಿಗೆ ಕಾವ್ಯ ಅವಾಚ್ಯವಾಗಿ ನಿಂದಿಸಿ, ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಾವ್ಯ ವಿರುದ್ಧ ಚಾಲಕ ಹುಸೇನ್ ಅವರು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಪಡೆದ ಪೊಲೀಸರು ಕಾವ್ಯ ಅವರನ್ನು ವಶಕ್ಕೆ ಪಡೆದಿದ್ದರು. ಚಾಲಕನ ಬಳಿ ಕಾವ್ಯ ಕ್ಷಮೆಯಾಚಿಸಿದ್ದು, ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.