ಬೆಂಗಳೂರು | ಮದ್ಯ ನಿಷೇಧಕ್ಕಾಗಿ ಮೊಳಗುತ್ತಿದೆ ಮಹಿಳೆಯರ ಘೋಷ

Date:

ಮದ್ಯ ಮಾರಾಟಕ್ಕೆ ಪರವಾನಗಿ ನೀಡಲು ಗ್ರಾಮ ಸಭೆಗಳಿಗೆ ಅಧಿಕಾರ ನೀಡಬೇಕು. ಸಭೆಗಳಲ್ಲಿ 20% ಮಹಿಳೆಯರ ಒಪ್ಪಿಗೆ ಪಡೆಯಬೇಕು. ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿ ಹಳ್ಳಿಗಳಲ್ಲೂ ಮಹಿಳೆಯರ ಜಾಗೃತಿ ಸಮಿತಿಗಳನ್ನು ರಚಿಸಬೇಕು. ಸಮಿತಿಗಳಿಗೆ ಅರೆ ನ್ಯಾಯಿಕ ಅಧಿಕಾರ ನೀಡಬೇಕು– ಇವು ಮದ್ಯ ನಿಷೇಧಕ್ಕಾಗಿ ಆಂದೋಲನ ನಡೆಸುತ್ತಿರುವ ರಾಜ್ಯದ ನಾನಾ ಜಿಲ್ಲೆಗಳ ಮಹಿಳೆಯರ ಬೇಡಿಕೆಗಳು.

- Advertisement -

ಕರ್ನಾಟಕದಲ್ಲಿ ಮದ್ಯ ನಿಷೇಧಕ್ಕಾಗಿ ‘ಮದ್ಯ ನಿಷೇಧ ಆಂದೋಲನ’ದ ಅಡಿಯಲ್ಲಿ ರಾಜ್ಯದ ಮಹಿಳೆಯರು ಕಳೆದ 10 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಇಂದೂ (ನ.25 – ಮಂಗಳವಾರ) ಕೂಡ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

”ಕಳೆದ 20 ವರ್ಷಗಳಿಂದ ಕಾನೂನಾತ್ಮಕವಾಗಿ ಮತ್ತು ಕಾನೂನುಬಾಹಿರವಾಗಿ ಮದ್ಯ ಮಾರಾಟ ಹೆಚ್ಚುತ್ತಲೇ ಇದೆ. ಸರ್ಕಾರವು ಕೇವಲ ಮದ್ಯ ಮಾರಾಟದಿಂದ ಬರುವ (ಅಬಕಾರಿ) ಆದಾಯದ ಮೇಲೆ ಹೆಚ್ಚು ಗಮನ ಹರಿಸುತ್ತಿದೆ. ಆದರೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪುಟ್ಟ ಮಕ್ಕಳೂ ಕೂಡ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಪುರುಷರು ಮತ್ತು ಮಕ್ಕಳು ಕುಡಿತಕ್ಕೆ ತುತ್ತಾಗುತ್ತಿರುವುದರಿಂದ ಮಹಿಳೆಯರು ತಮ್ಮ ಕುಟುಂಬಗಳನ್ನು ಸಲಹುವುದಕ್ಕಾಗಿ ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸುವಂತಾಗಿದೆ” ಎಂದು ಪ್ರತಿಭಟನಾನಿರತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

”ಮದ್ಯ ಮಾರಾಟವು ಇದೇ ರೀತಿ ಮುಂದುವರೆದರೆ ಪಂಜಾಬ್ ರೀತಿಯಲ್ಲಿ ಕರ್ನಾಟಕದ ಯುವಕರು ಕೂಡ ಮದ್ಯ ಸೇವನೆಯಿಂದ ಮಾದಕ ವ್ಯಸನಕ್ಕೆ (ಡ್ರಗ್ಸ್) ಬಲಿಯಾಗುವಂತೆ ಮಾಡುತ್ತದೆ. ಮದ್ಯ ವ್ಯಸನದಿಂದ ಆಗುತ್ತಿರುವ ಸಮಸ್ಯೆಗಳ ಕುರಿತು NIMHANS, NCRB, NFHS, IAM ಬೆಂಗಳೂರು ಸೇರಿದಂತೆ ನಾನಾ ಸರ್ಕಾರಿ ಸಂಸ್ಥೆಗಳ ಹಲವಾರು ವರದಿಗಳನ್ನು ಸರ್ಕಾರಕ್ಕೆ ನೀಡಲಾಗಿದೆ. ಆದರೂ, ಸರ್ಕಾರ ಎಚ್ಚೆತ್ತುಕೊಂಡಿಲ್ಲ” ಎಂದು ಕಿಡಿಕಾರಿದ್ದಾರೆ.

FB IMG 1764063436752

ಸರ್ಕಾರದ ಎದುರು ಪ್ರತಿಭಟನಾನಿರತ ಮಹಿಳೆಯರು ಪ್ರಮುಖ 2 ಬೇಡಿಕೆಗಳನ್ನು ಇಟ್ಟಿದ್ದಾರೆ. ಒಂದು- ಮದ್ಯ ಮಾರಾಟಕ್ಕೆ ಪರವಾನಗಿ (ಲೈಸನ್ಸ್‌) ವಿತರಿಸಲು ಹರಿಯಾಣ, ಮಹಾರಾಷ್ಟ್ರ ರಾಜಸ್ಥಾನದಂತ ರಾಜ್ಯಗಳಲ್ಲಿ ಗ್ರಾಮ ಸಭೆಗಳಿಗೆ ಪರಮಾಧಿಕಾರ ನೀಡಲಾಗಿದೆ. ವಿವಿಧ ರಾಜ್ಯಗಳ ಪಂಚಾಯತ್ ರಾಜ್ ಕಾನೂನಿನಂತೆ ರಾಜ್ಯ ಸರ್ಕಾರಗಳು ಯಾವುದೇ ಒಂದು ಮದ್ಯದ ಅಂಗಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರವಾನಿಗೆ ನೀಡಲು (ತೆರೆಯಲು) ಗ್ರಾಮ ಸಭೆಯಲ್ಲಿ ಕನಿಷ್ಠ 20%ರಷ್ಟು ಮಹಿಳೆಯರ ಒಪ್ಪಿಗೆ ಪಡೆಯಬೇಕು. ಅಂದರೆ ಗ್ರಾಮ ಸಭೆಯ ಈ ಠರಾವಿಗೆ ಮಾನ್ಯತೆ ನೀಡಲೇಬೇಕು. ಅದೇ ರೀತಿ, ಕರ್ನಾಟಕದಲ್ಲಿಯೂ ಈ ಅಂಶವನ್ನು ಪಂಚಾಯತ್ ರಾಜ್ ಕಾನೂನಲ್ಲಿ ಅಳವಡಿಸಿ ಅನುಷ್ಠಾನಗೊಳಿಸಬೇಕು. ಕರ್ನಾಟಕದ ಪಂಚಾಯತ್ ರಾಜ್ ಕಾನೂನಿನಲ್ಲಿ ಇಂತಹದೊಂದು ಅಂಶ 2016ರವರೆಗೆ ಇತ್ತು. ಆದರೆ, ಆ ಸಮಯದಲ್ಲಿ ಇದ್ದ ಸರ್ಕಾರ  ಇದನ್ನು ತೆಗೆದು ಹಾಕಿತು.

ಎರಡು- ಒಂದೆಡೆ ಪರವಾನಗಿ ಪಡೆದ ಅಂಗಡಿಗಳ ಸಮಸ್ಯೆಯಾದರೆ ಅದಕ್ಕಿಂತ ಹೆಚ್ಚು, ಮನೆ ಮನೆಗಳಲ್ಲಿ, ಪಾನಶಾಪ್‌, ಕಿರಾಣಿ ಅಂಗಡಿ, ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಹಾಗಾಗಿ ನಮ್ಮ ಬೇಡಿಕೆ ಇಷ್ಟೇ ಪ್ರತಿ ಹಳ್ಳಿಯಲ್ಲಿ ಮಹಿಳೆಯರ ಜಾಗೃತ ಸಮಿತಿಗಳನ್ನು ರಚಿಸಿ ಈ ಸಮಿತಿಗೆ ಅರೆ ನ್ಯಾಯಿಕ ಅಧಿಕಾರ (quasi judiciary power) ಕೊಡಬೇಕು. ಕರ್ನಾಟಕ ಪಂಚಾಯತ್‌ ರಾಜ್‌ ಕಾನೂನಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಈಗಾಗಲೇ ಹೆಚ್ಚುವರಿ ಸಮಿತಿಗಳು ಮಾಡುವ ಅವಕಾಶ ಇದೆ.

ಪ್ರತಿಭಟನೆಯಲ್ಲಿ ಈದಿನ.ಕಾಮ್‌ ಜೊತೆ ಮಾತನಾಡಿದ ರಾಯಚೂರು ಜಿಲ್ಲೆಯ ಮದ್ಯ ನಿಷೇಧ ಆಂದೋಲನದ ಮುಖಂಡೆ ಚನ್ನವ್ವ, ”ನಮಗೆ ಕೃಷಿ ಮಾಡಿ ಬದುಕಲು ಹೊಲ ಇಲ್ಲ. ಕೂಲಿ ಮಾಡಿಯೇ ಜೀವನ ದೂಡಬೇಕು. ನಮ್ಮ ತಂದೆಯೂ ಕುಡಿತಕ್ಕೆ ತುತ್ತಾಗಿದ್ದರು. ನನ್ನ ಗಂಡನೂ ಮದ್ಯ ವ್ಯಸನಿಯಾಗಿದ್ದರು. ನಮ್ಮ ಬದುಕು ಮೂರಾಬಟ್ಟೆಯಾಗಿದೆ. ನಮ್ಮ ಕಣ್ಣೆದುರೇ ಮಕ್ಕಳು ಕುಡಿತಕ್ಕೆ ಬಲಿಯಾಗುತ್ತಿದ್ದರೆ, ತಾಯಂದಿರ ಕರುಳು ಕಿವುಚುತ್ತದೆ. ಎಲ್ಲೆಂದರಲ್ಲಿ ಕುಡಿದು ಬೀಳುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟವನ್ನು ನಿಷೇಧಿಸಬೇಕು. ಗ್ರಾಮಗಳಲ್ಲಿ ಮದ್ಯದಂಗಡಿಗಳಿಗೆ ಅವಕಾಶ ನೀಡಬಾರದು ಎಂದು ಹೋರಾಟ ಮಾಡುತ್ತಲೇ ಇದ್ದೇವೆ. ಆದರೆ, ಸರ್ಕಾರಗಳು ನಮ್ಮ ಅಳಲು ಕೇಳುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

”ಸರ್ಕಾರವು ನಾವು ಘನತೆಯಿಂದ ಬದುಕಲು ಅವಕಾಶ ಮಾಡಿಕೊಡಬೇಕು. ಮದ್ಯ ಮಾರಾಟದ ಜೊತೆಗೆ ಗುಟ್ಕಾವನ್ನೂ ನಿಷೇಧಿಸಬೇಕು. ಮದ್ಯ ಮತ್ತು ಗುಟ್ಕಾ ನಿಷೇಧ ಮಾಡಿದರೆ ಮಾತ್ರವೇ ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸುತ್ತೇವೆ. ಇಲ್ಲವಾದಲ್ಲಿ, ಮತದಾನ ಬಹಿಷ್ಕರಿಸುತ್ತೇವೆ. ಸರ್ಕಾರಗಳು ಮದ್ಯ ಮಾರಾಟ ಅಂಗಡಿಗಳನ್ನು ಮುಚ್ಚದಿದ್ದರೆ, ನಾವೇ ಬೀಗ ಜಡಿಯುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಲೇಖನ ಓದಿದ್ದೀರಾ?: ಕಬ್ಬಿನ ನಂತರ ಮೆಕ್ಕೆಜೋಳ, ಬೀದಿಗೆ ಬಂದ ರೈತರ ಬದುಕು

ಪ್ರತಿಭಟನೆಯನ್ನು ಬೆಂಬಲಿಸಿ, ಹೋರಾಟದಲ್ಲಿ ಭಾಗಿಯಾಗಿದ್ದ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ”ಕರ್ನಾಟಕ ಮಾತ್ರವಲ್ಲ, ಇಡೀ ಭಾರತದಲ್ಲಿ ಮದ್ಯ ನಿಷೇಧ ಮಾಡಬೇಕು. ಆಗ ಮಾತ್ರವೇ ಜನರು ನೆಮ್ಮದಿಯಿಂದ ಬದುಕಲು ಸಾಧ್ಯ. ಜನರು ಸರ್ಕಾರದಿಂದ ಯಾವುದೇ ಲಾಭವನ್ನು ಬಯಸುತ್ತಿಲ್ಲ. ಬದಲಾಗಿ, ನಮ್ಮ ಆರೋಗ್ಯ, ಮಕ್ಕಳ ಶಿಕ್ಷಣ, ದುಡಿಮೆಗೆ ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ಆದರೆ, ಸರ್ಕಾರಗಳು ಯೋಜನೆಗಳ ವಿಸ್ತರಣೆ ಹೆಸರಿನಲ್ಲಿ ಮದ್ಯ ಮಾರಾಟವನ್ನು ಹೆಚ್ಚಿಸುತ್ತಿವೆ. ಜನರ ಆರೋಗ್ಯ, ಹಣ, ಮರ್ಯಾದೆ ಎಲ್ಲವೂ ಮಣ್ಣುಪಾಲಾಗುತ್ತಿದೆ. ಇಂದು ಕರ್ನಾಟಕದ 20 ಜಿಲ್ಲೆಗಳಿಂದ ನೊಂದ ತಾಯಂದಿರು ಬೆಂಗಳೂರಿಗೆ ಬಂದು ಹೋರಾಟ ನಡೆಸುತ್ತಿದ್ದಾರೆ. ಅವರ ಬೇಡಿಕೆಯಂತೆ ಸರ್ಕಾರವು ಮದ್ಯ ಮಾರಾಟವನ್ನು ನಿಷೇಧಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಮದ್ಯ ನಿಷೇಧ ಆಂದೋಲನದ ಸಂಘಟಕಿ ಸ್ವರ್ಣಾ ಭಟ್‌ ಅವರು ಈದಿನ.ಕಾಮ್‌ ಜೊತೆಗೆ ಮಾತನಾಡಿದ್ದು, ”ಮದ್ಯ ನಿಷೇಧಕ್ಕಾಗಿ ಕಳೆದ 10 ವರ್ಷಗಳಿಂದ ವಿಭಿನ್ನವಾಗಿ ಹೋರಾಟ ನಡೆಸುತ್ತಲೇ ಇದ್ದೇವೆ. 2015ರಲ್ಲಿ ರಾಯಚೂರಿನಲ್ಲಿ ಬೃಹತ್ ಸತ್ಯಾಗ್ರಹ ನಡೆಸಿದ್ದೆವು. ಮೇಧಾ ಪಾಟ್ಕರ್‌ ಅವರೊಂದಿಗೂ ಚಳವಳಿ ನಡೆಸಿದ್ದೆವು. ಮದ್ಯ ನಿಷೇಧಕ್ಕಾಗಿ ನೀರಿನಲ್ಲಿ ನಿಂತು ಜಲ ಸತ್ಯಾಗ್ರಹ ನಡೆಸಿದ್ದೇವೆ. ಅಬಕಾರಿ ಅಧಿಕಾರಿಗಳಿಗೆ ಗಾಂಧಿ ಫೋಟೋ ಇಟ್ಟುಕೊಳ್ಳುವ ಯೋಗ್ಯತೆ ಇಲ್ಲವೆಂದು ಪ್ರತಿಭಟನೆ ನಡೆಸಿದ್ದೇವೆ. ಚಿತ್ರದುರ್ಗದಿಂದ ಬೆಂಗಳೂರಿನವರೆಗೆ ಸಾವಿರಾರು ಮಹಿಳೆಯರು ಪಾದಯಾತ್ರೆ ನಡೆಸಿದ್ದಾರೆ. ಆದರೂ, ಸರ್ಕಾರಗಳು ನಮ್ಮ ಬೇಡಿಕೆಗಳನ್ನು ಕಡೆಗಣಿಸುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

”ತಮ್ಮದು ಜೀವಪರ, ಜಾತ್ಯತೀತ, ಸಮಾಜವಾದಿ ಸರ್ಕಾರವೆಂದು ಹೇಳಿಕೊಳ್ಳುತ್ತಿರುವ ಹಾಲಿ ಸರ್ಕಾರವು ಮಹಿಳೆಯರಿಗೆ ಅವಮಾನವಾಗುವ, ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಇಡೀ ರಾಜ್ಯಾದ್ಯಂತ ಎಲ್ಲೆಡೆ ಕುಡುಕರ ಸಂಖ್ಯೆ 10 ಪಟ್ಟು ಹೆಚ್ಚಾಗಿದೆ. ಮಕ್ಕಳು/ಬಾಣಂತಿಯರಿಗೆ ಪೌಷ್ಟಿಕತೆಗಾಗಿ ಮೊಟ್ಟೆ ಕೊಡಿ ಎಂದು ಹೋರಾಟ ಮಾಡಬೇಕಿರುವ ಈ ಸಂದರ್ಭದಲ್ಲಿಯೂ, ಎಲ್ಲ ಹಳ್ಳಿಗಳಲ್ಲಿ, ಮೂಲೆ-ಮೂಲೆಗಳಲ್ಲಿ ಮದ್ಯ ದೊರೆಯುವಂತೆ ಸರ್ಕಾರ ಮಾಡಿದೆ. ಯುವಕರು, ಮಕ್ಕಳನ್ನೂ ಮದ್ಯದ ಚಟಕ್ಕೆ ದೂಡುತ್ತಿದೆ” ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ ಈ ದಿನ ಸಂಪಾದಕೀಯ | ಕಾರ್ಪೊರೇಟ್ ಹಿತಕ್ಕಾಗಿ ಕಾರ್ಮಿಕರ ಹಕ್ಕುಗಳ ಹತ್ತಿಕ್ಕುತ್ತಿರುವ ಮೋದಿ

”ಬಾಗಲಕೋಟೆಯಲ್ಲಿ ಹೆತ್ತ ತಾಯಿಯನ್ನೇ ಮದ್ಯದ ದಾಸನಾಗಿದ್ದ ಮಗ ಕುತ್ತಿಗೆ ಸೀಳಿ ಕೊಂದಿದ್ದಾನೆ. ಇಂತಹ ಘಟನೆಗಳು ರಾಜ್ಯಾದ್ಯಂತ ನಡೆಯುತ್ತಲೇ ಇವೆ. ರಾಜ್ಯದಲ್ಲಿ ಅತೀ ಹೆಚ್ಚು ಅಪರಾಧಗಳು ನಡೆಯುತ್ತಿರುವುದಕ್ಕೆ ಮೂಲ ಕಾರಣ ‘ಮದ್ಯ ವ್ಯಸನ’ವೆಂದು ಎನ್‌ಸಿಆರ್‌ಬಿ ವರದಿ ಹೇಳುತ್ತದೆ. ಇದೆಲ್ಲವೂ ಗೊತ್ತಿದ್ದರೂ, ಸರ್ಕಾರಗಳು ನಿರ್ಲಜ್ಜ ಮೌನದಿಂದ ವರ್ತಿಸುತ್ತಿವೆ. ಮನೆಯ ಮಕ್ಕಳು, ಪುರುಷರು ಕುಡಿತಕ್ಕೆ ಬಲಿಯಾಗುತ್ತಿದ್ದು, ಕುಟುಂಬ ನಿರ್ವಹಣೆಯ ಸಂಪೂರ್ಣ ಹೊರೆ ಮಹಿಳೆಯರ ಮೇಲೆ ಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲೂ ಹೊಸ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುತ್ತೇವೆಂದು ಸರ್ಕಾರ ಹೇಳುತ್ತಿದೆ. ಇದೆಯೇ ಸರ್ಕಾರದ ಮಹಿಳಾ ರಕ್ಷಣೆ ಕ್ರಮ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ...

‘ಸ್ಟಿಂಗ್ ಆಪರೇಷನ್’ ವಿವಾದ- ನನ್ನಿಂದಲೇ ತನಿಖೆ ಆರಂಭಿಸಿ: ಎಚ್.ಡಿ. ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ವೀಡಿಯೊ ಬಿಡುಗಡೆ ಮಾಡಲು ಯತ್ನಿಸಲಾಗಿದೆ...

ಬಳ್ಳಾರಿ | ವರದಕ್ಷಿಣೆ ಕಿರುಕುಳಕ್ಕೆ ಮೂವರು ಬಲಿ

ಬಳ್ಳಾರಿಯಲ್ಲಿ ವರದಕ್ಷಿಣೆ ಕಿರುಕುಳ ತಾಳಲಾರದೆ ತಾಯಿಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ತುಂಗಭದ್ರಾ...

ಶೃಂಗೇರಿ ಮತ ಎಣಿಕೆ ವಿಡಿಯೋ ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ

2023ರ ಚುನಾವಣೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯ ವೀಡಿಯೋ...