ವಿಕೃತ ಮನಸ್ಸಿನ ಯುವಕನೊಬ್ಬ ಮಹಿಳೆಗೆ ತನ್ನ ಖಾಸಗಿ ಅಂಗ ತೋರಿಸಿ, ವಿಕೃತವಾಗಿ ವರ್ತಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆತನ ವಿಕೃತಿಯನ್ನು ಪ್ರಶ್ನಿಸಿದವರ ಮೇಲೂ ಹಲ್ಲೆ ಎಸಗಿದ್ದಾನೆ ಎಂದು ವರದಿಯಾಗಿದೆ.
ವಿಕೃತ ಆರೋಪಿಯನ್ನು ಕಾರ್ತಿಕ್ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಏಪ್ರಿಲ್ 13ರಂದು ಘಟನೆ ನಡೆದಿದೆ ಎಂದು ಹೇಳಲಾಗಿದೆ. ವಸತಿ ಸಮುಚ್ಛಯದಲ್ಲಿ ವಾಸವಾಗಿದ್ದ ಆರೋಪಿ ತನ್ನ ನೆರೆಹೊರೆಯ ಮಹಿಳೆಯ ಎದುರು ವಿಕೃತವಾಗಿ ವರ್ತಿಸಿದ್ದಾನೆ. ಮಹಿಳೆ ತನ್ನ ಮನೆಯ ಬಳಿ ಇದ್ದಾಗ, ಎದುರು ಬಂದ ಆರೋಪಿ ತನ್ನ ಖಾಸಗಿ ಅಂಗ ತೋರಿಸಿ, ವಿಚಿತ್ರವಾಗಿ ಸನ್ಹೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಆತನ ವಿಕೃತಿಯನ್ನು ಮಹಿಳೆಯ ಪತಿ ಮತ್ತು ಇತರರು ಪ್ರಶ್ನಿಸಿದ್ದಾರೆ. ಇದರಿಂದ ಕುಪಿತಗೊಂಡ ಆರೋಪಿ ಮಹಿಳೆಯ ಪತಿ ಸೇರಿ ಏಳು ಮಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ತನ್ನ ತಾಯಿಯ ಮೇಲೂ ಹಲ್ಲೆಗೈದಿದ್ದಾನೆ. ಬಳಿಕ, ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಹಲ್ಲೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಿಳೆಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಾಗಿ ಶೋಧ ನಡೆಯುತ್ತಿದೆ. ಆರೋಪಿ ಈ ಹಿಂದೆಯೇ ಹಲವು ಮಹಿಳೆಯರೊಂದಿಗೆ ಇದೇ ರೀತಿ ಅನುಚಿತವಾಗಿ ವರ್ತಿಸಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.