ದೇಶದಾದ್ಯಂತ ಕೊರೋನ ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಳ್ಳುತ್ತಿದ್ದಾಗಲೂ ಅಂದಿನ ಬಿಜೆಪಿ ಸರ್ಕಾರ ನಡೆಸಿದ ಕೋವಿಡ್ ಹಗರಣಕ್ಕೆ ಸಂಬಂಧಿಸಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮೊದಲ ಎಫ್‌ಐಆರ್ ದಾಖಲಾಗಿದೆ.
ಸುಮಾರು 167 ಕೋಟಿ ರೂಪಾಯಿಯ ಅಕ್ರಮ ನಡೆದಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ದೂರು ದಾಖಲಿಸಿದ್ದಾರೆ.
ಇದನ್ನು ಓದಿದ್ದೀರಾ? ಬಿಜೆಪಿ ಕೋವಿಡ್ ಹಗರಣ ಬಟಾಬಯಲು | 330 ರೂ. ಕಿಟ್‌ಗೆ 2,200 ರೂ. ಪಾವತಿಸಿದ್ದ ಬಿಎಸ್‌ವೈ ಸರ್ಕಾರ; ಏಳು ಪಟ್ಟು ಹೆಚ್ಚು ಹಣಕ್ಕೆ ಕಾರಣಗಳೇ ಇಲ್ಲ!
ಕುನ್ಹಾ ವರದಿ ಸಲ್ಲಿಸಿದ ಒಂದು ತಿಂಗಳುಗಳ ಬಳಿಕ ಇದೀಗ ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯ ಲೆಕ್ಕಾಧಿಕಾರಿ ಡಾ.ವಿಷ್ಣುಪ್ರಸಾದ್ ದೂರು ನೀಡಿದ್ದು ಇದರ ಆಧಾರದಲ್ಲಿ ಎಫ್‌ಐಆರ್ ಆಗಿದೆ. ವೈದ್ಯರು, ಐಎಜಿ ಎಕ್ಸ್‌ಪೋರ್ಟ್ ಕಂಪನಿ ಹಾಗೂ ಜನಪ್ರತಿನಿಧಿಗಳ ಮೇಲೆ ಎಫ್‌ಐಆರ್ ದಾಖಲಾಗಿದೆ. ಈ ಹಗರಣದ ತನಿಖೆಗೆ ಎಸ್‌ಐಟಿ ರಚನೆಯಾಗುವ ಸಾಧ್ಯತೆಯಿದೆ.
ಇನ್ನು ಕೋವಿಡ್ ಸಮಯದ ಹಗರಣದ ತನಿಖೆ ಮಾಡಲು ರಾಜ್ಯ ಸರ್ಕಾರ ಈಗಾಗಲೇ ನಿರ್ಧರಿಸಿತ್ತು. ಕೊರೋನ ಸಾಂಕ್ರಾಮಿಕ ಸಂದರ್ಭದಲ್ಲಿ ಎನ್-95 ಮಾಸ್ಕ್, ಪಿಪಿಇ ಕಿಟ್ ಮತ್ತು ಇತರೆ ಸಾಮಾಗ್ರಿಗಳ ಖರೀದಿಯಲ್ಲಿ ನಡೆಸಿರುವ ಅಕ್ರಮದ ಆರೋಪ ಇದಾಗಿದೆ. ಈ ಅಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 167 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈಗಾಗಲೇ ಈ ಕೋವಿಡ್ ಹಗರಣದಲ್ಲಿ ಮಾಜಿ ಆರೋಗ್ಯ ಸಚಿವ ಕೆ ಸುಧಾಕರ್, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ನಾಯಕ ಶ್ರೀರಾಮುಲು ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದೆ. ಕುನ್ಹಾ ವರದಿಯು ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಸಲಹೆ ನೀಡಿದೆ.
