ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳದಿಂದ ಪ್ರಯಾಣಿಕರ ಸಂಖ್ಯೆ ಮೇಲೆ ನೇರ ಪರಿಣಾಮ ಉಂಟಾಗಿದೆ. ಕೇವಲ ಒಂದು ತಿಂಗಳಲ್ಲಿ ಪ್ರಯಾಣಿಕ ಸಂಖ್ಯೆ 25 ಲಕ್ಷಕ್ಕೂ ಅಧಿಕ ಇಳಿಕೆಯಾಗಿದೆ. ಬಿಎಂಆರ್‌ಸಿಎಲ್ ಅಂಕಿಅಂಶಗಳ ಪ್ರಕಾರ ಪ್ರತಿನಿತ್ಯವು ಒಂದು ಲಕ್ಷ ಪ್ರಯಾಣಿಕರು ಕಡಿಮೆಯಾಗಿದ್ದಾರೆ. ಇದೇ ವೇಳೆ ಬಿಎಂಟಿಸಿಯಲ್ಲಿ ಸರಾಸರಿ 1 ಲಕ್ಷ ಜನರು ಹೆಚ್ಚಾಗಿದ್ದಾರೆ.
ನಮ್ಮ ಮೆಟ್ರೋದಲ್ಲಿ 2024 ಡಿಸೆಂಬರ್ ಹಾಗೂ 2025 ಜನವರಿಯಲ್ಲಿ ನಿತ್ಯ 9 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಸೋಮವಾರ ಹಾಗೂ ಶುಕ್ರವಾರ ಈ ಸಂಖ್ಯೆ 10 ಲಕ್ಷ ದಾಟುತ್ತಿತ್ತು. ಇನ್ನು ಮಾಸಿಕ ಪ್ರಯಾಣಿಕರ ಸಂಖ್ಯೆ ನೋಡುವುದಾದರೆ, 2025 ಜನವರಿಯಲ್ಲಿ ಬರೋಬ್ಬರಿ 2.5 ಕೋಟಿ ಮಂದಿ ಪ್ರಯಾಣಿಸಿದ್ದರು. ನಮ್ಮ ಮೆಟ್ರೋದ ಒಟ್ಟಾರೆ ಪ್ರಯಾಣಿಕರ ಸಂಖ್ಯೆ ಜನವರಿಯಲ್ಲಿ 2.5 ಕೋಟಿ ಇದ್ದರೆ, ಫೆಬ್ರವರಿಯಲ್ಲಿ 2.09 ಕೋಟಿಗೆ ಇಳಿಕೆಯಾಗಿದೆ.
ಬಿಎಂಟಿಸಿ ಆಯ್ಕೆ
ಮೆಟ್ರೋ ದರವು ಕೆಲ ಪ್ರಯಾಣಿಕರಿಗೆ ಶೇ 60 ರಿಂದ 80 ರಷ್ಟು ಹೆಚ್ಚಾಗಿದೆ. ದರ ಏರಿಕೆಗೂ ಮುನ್ನ ಹೋಲಿಸಿದರೆ ದುಪ್ಪಟ್ಟು ದರ ನೀಡಬೇಕಿದೆ. ಈ ಕಾರಣದಿಂದ ಪ್ರಯಾಣಿಕರು ಪರ್ಯಾಯ ಆಯ್ಕೆ ಮಾಡಿಕೊಂಡಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಇದ್ದರೂ ಬಸ್‌ಗೆ ಹೋಲಿಸಿದರೆ ಮೆಟ್ರೋದಲ್ಲಿ ಸಂಚಾರ ದಟ್ಟಣೆಯಿಲ್ಲದೆ ವೇಗವಾಗಿ ಪ್ರಯಾಣ ಮಾಡಬಹುದು ಎಂದು ಮಹಿಳೆಯರ ಒಂದು ವರ್ಗ ಮೆಟ್ರೋದಲ್ಲಿ ಸಂಚರಿಸುತ್ತಿದ್ದರು. ಆದರೆ ದುಪ್ಪಟ್ಟು ಹಣ ವೆಚ್ಚವಾಗುವ ಕಾರಣದಿಂದ ಕಚೇರಿ ಹಾಗೂ ಕೆಲಸಕಾರ್ಯಗಳಿಗೆ ಉಚಿತವಾಗಿ ದೊರಕುವ ಬಿಎಂಟಿಸಿಯನ್ನು ಅವಲಂಬಿಸಿದ್ದಾರೆ.
ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಳ
ಇನ್ನು ಒಂದಿಷ್ಟು ಮಂದಿ ಮೆಟ್ರೋ ದರ ಏರಿಕೆಯಿಂದ ನಿತ್ಯದ ಪ್ರಯಾಣಕ್ಕೆ ತಮ್ಮ ತಮ್ಮ ಖಾಸಗಿ ವಾಹನಗಳಾದ ಬೈಕ್ ಹಾಗೂ ಕಾರುಗಳನ್ನು ಅವಲಂಬಿಸಿದ್ದಾರೆ. ಇದು ನೇರವಾಗಿ ನಗರದ ವಾಹನ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದು ಒಂದು ತಿಂಗಳಿಂದ ವಾಹನಗಳ ಸಂಖ್ಯೆ ಗಣನೀಯವಾಗಿ ಏರಿಕೆಗೊಂಡಿದೆ. ಮೆಟ್ರೋ ಪ್ರಯಾಣಿಕರಲ್ಲಿ ನಿತ್ಯ ಕಡಿಮೆಯಾಗುವ ಒಂದು ಲಕ್ಷ ಪ್ರಯಾಣಿಕರಲ್ಲಿ ಸರಿಸುಮಾರು 50 ಸಾವಿರ ಮಂದಿ ಬೈಕ್ ಅಥವಾ ಕಾರುಗಳ ಮೂಲಕ ಸಂಚರಿಸುತ್ತಿದ್ದಾರೆ. ಇದು ಪ್ರತಿ ನಗರದಲ್ಲೂ ಸಂಚಾರ ದಟ್ಟಣೆ ಹೆಚ್ಚಳಕ್ಕೆ ಕಾರಣವಾಗಿದೆ.
ನಿತ್ಯ ಸುಮಾರು 8.5 ಲಕ್ಷ ಪ್ರಯಾಣಿಕರು ಓಡಾಡುತ್ತಿದ್ದ ಮೆಟ್ರೋ ರೈಲಿನಲ್ಲಿ ಇದೀಗ 7.5 ಲಕ್ಷ ಮಂದಿ ಪ್ರಯಾಣಿಕರು ಮಾತ್ರ ಓಡಾಡುತ್ತಿದ್ದಾರೆ. ಅಂದರೆ ಸುಮಾರು 1 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೆಟ್ರೋ ತೊರೆದಿದ್ದಾರೆ. ದರ ಏರಿಕೆ ಬಳಿಕ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 25 ರಷ್ಟು ಕುಸಿತ ಕಂಡುಬಂದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಿಳಾ ದಿನ ಕೇವಲ ಆಚರಣೆ ಮಾತ್ರವಲ್ಲ ಹಿರಿಮೆ
ಕಳೆದ ಫೆಬ್ರವರಿ 5 ರಂದು ದರ ಏರಿಕೆಗೂ ಮುನ್ನ ನಮ್ಮ ಮೆಟ್ರೋದಲ್ಲಿ 8,67, 660 ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದರು. ದರ ಏರಿಕೆ ಬಳಿಕ ಅಂದರೆ ಫೆಬ್ರವರಿ 12 ಬುಧವಾರದಂದು 7,62,811 ಮಂದಿ ಪ್ರಯಾಣಿಕರ ದಾಖಲಾಗಿದೆ. ಅಂದರೆ 1,04,749 ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಮೆಟ್ರೋ ಪ್ರಯಾಣಿಕರಿಂದ ನಿತ್ಯ ಬಿಎಂಆರ್‌ಸಿಎಲ್‌ಗೆ 2 ರಿಂದ 2.5 ಕೋಟಿ ರೂ ಸಂಗ್ರಹವಾಗುತ್ತಿತ್ತು.
ಮೆಟ್ರೋ ಪ್ರಯಾಣ ದರ ಏರಿಕೆ ಫೆ.9ರಿಂದ ಅನ್ವಯವಾಗಿತ್ತು. ದರ ಏರಿಕೆಯ ಮೊದಲಿನ ಸೋಮವಾರಗಳಿಗೆ ಹೋಲಿಸಿದರೆ, ಫೆ.10 ರಂದು(ಸೋಮವಾರ) ಮೆಟ್ರೋದಲ್ಲಿ ಪ್ರಯಣಿಸಿದವರ ಸಂಖ್ಯೆ ಕಡಿಮೆಯಾಗಿತ್ತು. ಫೆ.3ರಂದು 8.7ಲಕ್ಷ ಜನ ಪ್ರಯಾಣಿಸಿದ್ದರು, ಅದೇ ಫೆ.10ರಂದು 8.2 ಲಕ್ಷ ಜನ ಪ್ರಯಾಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ
ವ್ಯತ್ಯಾಸವಾಗದ ದರ
ನಮ್ಮ ಮೆಟ್ರೋ ದರ ಏರಿಕೆಯಿಂದ ಪ್ರಯಾಣಿಕರಿಂದ ಹಾಗೂ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನಂತರ ಎಚ್ಚೆತ್ತುಕೊಂಡಿದ್ದ ಬಿಎಂಆರ್‌ಸಿಎಲ್, ಎಲ್ಲೆಲ್ಲಿ ಟಿಕೆಟ್ ದರ ಹೆಚ್ಚಾಗಿದೆಯೋ ಅಲ್ಲೆಲ್ಲ ಕಡಿಮೆ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಟಿಕೆಟ್ ದರ ಕಡಿಮೆಯಾಗಿಲ್ಲ. ಈ ಕಾರಣ ಕೂಡ ಸಾರ್ವಜನಿಕರು ಪರ್ಯಾಯ ಸಂಚಾರ ಆಯ್ಕೆ ಮಾಡಿಕೊಳ್ಳಲು ಕಾರಣವಾಗಿದೆ. ಟ್ರಾಫಿಕ್ ದಟ್ಟಣೆಯನ್ನು ತಗ್ಗಿಸುವ ಸಲುವಾಗಿ ಆರಂಭಗೊಂಡಿದ್ದು ಮೆಟ್ರೋ ಸಂಚಾರ ವ್ಯವಸ್ಥೆ. ಆದರೆ ಈಗ ದರ ಏರಿಕೆಯಿಂದ ಮೆಟ್ರೋದ ಮೂಲ ಉದ್ದೇಶಕ್ಕೆ ಅರ್ಥವೇ ಇಲ್ಲದಂತಾಗಿದೆ. ಕೇಂದ್ರ ಸರ್ಕಾರದವರು ರಾಜ್ಯದ ಮೇಲೆ, ರಾಜ್ಯ ಸರ್ಕಾರದವರು ಕೇಂದ್ರದ ಮೇಲೆ ದೂರುವುದನ್ನ ಬಿಟ್ಟು, ದರ ಏರಿಕೆ ಕಡಿಮೆ ಮಾಡಿದರೆ, ಸರ್ಕಾರಗಳನ್ನು ಜನ ದೂರುವುದನ್ನು ಬಿಡಬಹುದು.