“ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಧ್ಯಕ್ಷತೆಯಲ್ಲಿ ತೆಲಂಗಾಣದಲ್ಲಿ ಒಳಮೀಸಲಾತಿಗಾಗಿ ಜಾತಿವಾರು ವರ್ಗೀಕರಣ ಮಾಡಲಾಗಿದೆ. ತೆಲಂಗಾಣ ಸರ್ಕಾರ ದತ್ತಾಂಶ ಕ್ರೋಡೀಕರಿಸಿ ಒಂದು ಸ್ಪಷ್ಟವಾದ ವರ್ಗೀಕರಣ ಜಾರಿ ಮಾಡುತ್ತಿದೆ. ಆದರೆ, ರಾಜ್ಯದಲ್ಲಿ ಒಳಮೀಸಲಾತಿ ಬಗ್ಗೆ ಮಾತನಾಡುತ್ತಲೇ ಬಂದಿರುವ ಕಾಂಗ್ರೆಸ್ ಸರ್ಕಾರ, ಒಳಮೀಸಲಾತಿ ಜಾರಿಗಾಗಿ ಇಷ್ಟೊಂದು ವಿಳಂಬ ಮಾಡುತ್ತಿರುವುದು ಯಾಕೆ?” ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ – ರಾಜ್ಯ ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ್ ಕೌತಾಳ್ ಪ್ರಶ್ನಿಸಿದರು.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಮಾತನಾಡಿದ ಅವರು, “ಪರಿಶಿಷ್ಟರ ಮೀಸಲಾತಿ ಒಳಗಡೆ ಒಳಮೀಸಲಾತಿ ಜಾರಿಗೆ ಬರಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾದ ತೀರ್ಪನ್ನು ನೀಡಿದೆ. ಆ ತೀರ್ಪಿನ ಆಧಾರದ ಮೇಲೆ ರಾಜ್ಯ ಸರ್ಕಾರ ಇದನ್ನ ಸ್ವಾಗತಿಸಿ ಜಾರಿಗೆ ತರುವುದಕ್ಕೆ ನಿಖರವಾದ ದತ್ತಾಂಶಗಳನ್ನು ಕ್ರೋಡೀಕರಿಸಿ ಸರ್ಕಾರಕ್ಕೆ ಕೂಡಲೇ ಒಪ್ಪಿಸಬೇಕು ಎಂದು ರಾಜ್ಯ ಸರ್ಕಾರ ಜಸ್ಟಿಸ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯತ್ವ ಆಯೋಗ ರಚನೆ ಮಾಡಿದರು. ಈಗಾಗಲೇ ಅವರು ಕೊಟ್ಟಿರುವ ಅವಧಿ ಮುಗಿಯುತ್ತಿದೆ” ಎಂದರು.
“ತೆಲಂಗಾಣ ಸರ್ಕಾರವು ಕೂಡ ಇದನ್ನ ಒಪ್ಪಿ ಈಗಾಗಲೇ ನಿಖರವಾದ ದತ್ತಾಂಶ ಕ್ರೋಡೀಕರಿಸಿ, ವರ್ಗೀಕರಣ ಮಾಡಿ ಜಾರಿಗೆ ಮಾಡುವಂತಹ ಕೆಲಸ ಮಾಡಿದ್ದಾರೆ. ಹಾಗಾಗಿ, ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಈಗಾಗಲೇ, ಕಾಲಾವಕಾಶ ಮೀರಿದೆ. ಸರ್ಕಾರ ವಿಳಂಬ ನೀತಿಯನ್ನ ಕೈಬಿಟ್ಟು ಆದ್ಯತೆಯ ಮೇರೆಗೆ 101 ಜಾತಿಗಳಿಗೆ ಅವರವರ ಜನಸಂಖ್ಯೆಗೆ ಅನುಗುಣವಾಗಿ ವೈಜ್ಞಾನಿಕವಾಗಿ ಸಾಮಾಜಿಕ ನ್ಯಾಯ ಕೊಡಬೇಕು. ಜಸ್ಟಿಸ್ ನಾಗಮೋಹನದಾಸ್ ಅವರ ವರದಿಯನ್ನ ಕೂಡಲೇ ಸರ್ಕಾರ ತೆಗೆದುಕೊಂಡು ಒಳಮೀಸಲಾತಿ ಜಾರಿಗೆ ತರಬೇಕು” ಎಂದು ಒತ್ತಾಯಿಸಿದರು.
“ಬಹಳ ಮುಖ್ಯವಾಗಿ ವರ್ಗೀಕರಣ ಆಗುವವರೆಗೂ ನೇಮಕಾತಿ ಇಲ್ಲ ಎಂದು ನಿಲ್ಲಿಸಿದ್ದಾರೆ. ಹಾಗಾಗಿ, ನೇಮಕಾತಿಗಳನ್ನ ತುಂಬಾ ದಿನಗಳ ಕಾಲ ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ. ಹಲವು ಯುವಕರು ಉದ್ಯೋಗಕ್ಕೆ ಕಾಯುತ್ತಿದ್ದಾರೆ. ಇದರಿಂದ ನಿರುದ್ಯೋಗ ಸಮುದಾಯಗಳಿಗೆ ಅನ್ಯಾಯ ಬಗೆದಂತೆ ಆಗುತ್ತದೆ. ಹಾಗಾಗಿ, ಈಗ ಇರುವ ಕೆಲವು ಮಾಹಿತಿ ಇಟ್ಟುಕೊಂಡು ಆಯೋಗ ಮಧ್ಯಂತರ ವರದಿಯನ್ನ ನೀಡಬೇಕು. ನೇಮಕಾತಿಗಳನ್ನ ಮುಂದಿನ ಬಜೆಟ್‌ನಲ್ಲಿ ಸಮುದಾಯಗಳ ಅಭಿವೃದ್ಧಿಗಾಗಿ ಪ್ರತ್ಯೇಕವಾದ ಹಣಕಾಸನ್ನು ನಿಯೋಜನೆ ಮಾಡುವುದಕ್ಕೆ ಮಧ್ಯಂತರ ವರದಿಯನ್ನ ತುರ್ತಾಗಿ ನೀಡಬೇಕು ಎಂದು ಆಯೋಗದಲ್ಲಿ ಮನವಿ ಮಾಡುತ್ತೇವೆ. ಗುತ್ತಿಗೆ ಆಧಾರ, ಪರಿಶಿಷ್ಟ ಮೀಸಲಾತಿ ಸೇರಿದಂತೆ ಎಲ್ಲ ಪ್ರಕ್ರಿಯೆಗಳಲ್ಲಿ ಒಳಮೀಸಲಾತಿಯನ್ನ ಗಮನದಲ್ಲಿಟ್ಟುಕೊಂಡು ಜಾರಿಗೆ ತರಬೇಕು. ಗುತ್ತಿಗೆ ನೌಕರಿಗಳಲ್ಲಿಯೂ ಒಳಮೀಸಲಾತಿ ಪರಿಗಣಿಸಲು ಶಿಫಾರಸು ಮಾಡಬೇಕು” ಎಂದು ಒತ್ತಾಯಿಸಿದರು.
“ಬಡ್ತಿ ಮೀಸಲಾತಿಯಲ್ಲಿಯೂ ಒಳಮೀಸಲಾತಿಯನ್ನು ಪರಿಗಣಿಸಬೇಕು. ವರ್ಗೀಕರಣ ಆಧಾರದ ಮೇಲೆ ಮೀಸಲಾತಿ ನೀಡಬೇಕು. ಈ ವರ್ಗೀಕರಣವನ್ನ ಆಧಾರವಾಗಿಟ್ಟುಕೊಂಡು ಪ್ರಕ್ರಿಯೆಗಳು ನಡೆಯಬೇಕು. ಈಗಾಗಲೇ ನಾಗಮೋಹನದಾಸ್ ಅವರಿಗೆ ಸಂಘಟನೆಗಳ ಮುಖಂಡರು ಜಿಲ್ಲೆಯ ಮುಖಂಡರು ಮನವಿ ಪತ್ರ ಕೊಟ್ಟಿದ್ದಾರೆ. ಈ ಪತ್ರ ಕೊಡುವ ಅವಧಿಯೂ ಕೂಡ ನಿಂತು ಹೋಗಿದೆ. ತುರ್ತಾಗಿ ಮಧ್ಯಂತರ ವರದಿಯನ್ನ ಕೊಟ್ಟು, ತಾತ್ಕಾಲಿಕ ಅಂಕಿ ಆಂಶಗಳನ್ನ ಕೊಟ್ಟು ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಮಧ್ಯಂತರ ವರದಿಯನ್ನ ಈ ತಿಂಗಳ ಕೊನೆಗೆ ಕೊಟ್ಟು ವರ್ಗೀಕರಣದ ಆಧಾರದ ಮೇಲೆ ನೇಮಕಾತಿ ಮಾಡಬೇಕು. ಶೋಷಿತರಿಗೆ ಸರ್ಕಾರ ಅನ್ಯಾಯ ಮಾಡಬಾರದು” ಎಂದು ಹೇಳಿದರು.
ಒಕ್ಕೂಟದ ಶಿವಣ್ಣ ಕನಕಪುರ ಮಾತನಾಡಿ, “ಕಳೆದ 4 ದಶಕಗಳಿಂದ ರಾಜ್ಯದಾದ್ಯಂತ ಒಳಮೀಸಲಾತಿ ಹೋರಾಟ ನಡೆಯುತ್ತಿದೆ. ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡು ಜಸ್ಟಿಸ್ ನಾಗಮೋಹನ್ ದಾಸ್ ಅವರನ್ನು ಒಳಗೊಂಡ ಸಮಿತಿಯೊಂದನ್ನ ರಚನೆ ಮಾಡಿದೆ. ಯಾವುದೇ ಸಮುದಾಯಗಳಿಗೆ ಅನ್ಯಾಯ ಆಗದ ಹಾಗೇ ದತ್ತಾಂಶ ಸಂಗ್ರಹಣೆ ಮಾಡಬೇಕು. ಒಳಮೀಸಲಾತಿ ಜಾರಿಯಾಗುವವರೆಗೂ ನೇಮಕಾತಿ ಆಗುವುದಿಲ್ಲ ಎಂದು ತಡೆಹಿಡಿದಿದೆ. ಹಾಗಾಗಿ, ಆದಷ್ಟು ಬೇಗ ಒಳಮೀಸಲಾತಿ ಜಾರಿಯಾಗಬೇಕು. ತುರ್ತಾಗಿ ನಾಗಮೋಹನ್ ದಾಸ್ ವರದಿಯ ದತ್ತಾಂಶಗಳನ್ನ ಸರ್ಕಾರ ನೋಡಬೇಕು. ರಾಜಕೀಯ ಮತಕ್ಷೇತ್ರ ಮೀಸಲಾತಿಯಲ್ಲಿಯೂ ಒಳಮೀಸಲಾತಿಯನ್ನು ಕಡ್ಡಾಯಗೊಳಿಸಲು ಶಿಫಾರಸು ಮಾಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಮುಡಾ ಪ್ರಕರಣ | ಸಿಬಿಐ ತನಿಖೆಗೆ ನಿರಾಕರಿಸಿದ ಹೈಕೋರ್ಟ್, ಸಿದ್ದರಾಮಯ್ಯಗೆ ಬಿಗ್ ರಿಲೀಫ್
ಒಕ್ಕೂಟದ ವಿನಯ್ ಶ್ರೀನಿವಾಸ್ ಮಾತನಾಡಿ, “ನಿಜವಾದ ಸಮಾನತೆ ಬರಬೇಕು ಎಂದರೆ ಒಳಮೀಸಲಾತಿ ಜಾರಿ ಬರಬೇಕಿರುವುದು ಅತ್ಯವಶ್ಯಕವಾಗಿದೆ. ಸಂವಿಧಾನದ ಪಿಠೀಕೆಯಲ್ಲಿ ಸಮಾನತೆ ಇದೆ. ಎಲ್ಲ ಸಮುದಾಯದವರಿಗೂ ಸಮಾನತೆ ಬರಬೇಕೆಂದರೆ, ಒಳಮೀಸಲಾತಿ ಬರಲೇಬೇಕು. ನಮ್ಮ ಸರ್ಕಾರ ಸಂವಿಧಾನ ಬದ್ದವಾಗಿದೆ ಎಂದು ಹಲವು ಬಾರಿ ಹೇಳಿದೆ. ಹಾಗಿದ್ದಾಗ ಒಳಮೀಸಲಾತಿಯನ್ನ ಸರ್ಕಾರ ಜಾರಿ ಮಾಡಬೇಕು. ತೆಲಂಗಾಣ ಈ ಬಗ್ಗೆ ಒಂದು ಮಾದರಿಯನ್ನ ಕೊಟ್ಟಿದೆ. ಐತಿಹಾಸಿಕ ಒಂದು ತತ್ವವನ್ನ ಜಾರಿಗೆ ತರಬೇಕೆಂದರೆ ಒಳಮೀಸಲಾತಿ ಜಾರಿಯಾಗಲೇಬೇಕು. ಯಾವುದೇ ಕಾರಣಕ್ಕೂ ಯಾವುದೇ ಸಮುದಾಯಕ್ಕೂ ಆನ್ಯಾಯವಾಗದ ಹಾಗೇ ಒಳಮೀಸಲಾತಿ ವರ್ಗೀಕರಣ ಮಾಡಬೇಕು” ಎಂದು ಹೇಳಿದರು.
ಒಕ್ಕೂಟದ ಚಂದ್ರು ತರಹುಣಿಸೆ ಮಾತನಾಡಿ, “ಒಳಮೀಸಲಾತಿಗಾಗಿ ಹಲವು ಜನ ಬೀದಿಗೆ ಬಂದು ಹೋರಾಟ ಮಾಡಿದ್ದಾರೆ. ಹೋರಾಟದ ಬಳಿಕ ಸರ್ಕಾರ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತ್ತು. ಸರ್ಕಾರ ಜನರ ಒತ್ತಡದ ಹೊರತಾಗಿಯೂ ಒಳಮೀಸಲಾತಿಯನ್ನು ಜಾರಿಗೆ ತರಬೇಕು. ಸರ್ಕಾರ ಒಳಮೀಸಲಾತಿ ಜಾರಿ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಸರ್ಕಾರ ಸಮುದಾಯಗಳನ್ನು ತಾತ್ಸಾರ ಮಾಡುತ್ತಿದೆ. ಒಳಮೀಸಲಾತಿಗಾಗಿ ಸಾವು ನೋವುಗಳನ್ನು ಎದುರಿಸಿ ಬೀದಿಗೆ ಬಿದ್ದಿದ್ದೇವೆ. ಈಗ ಒಳಮೀಸಲಾತಿ ಜಾರಿಗೆ ಬರುವುದಕ್ಕೆ ಮತ್ತೆ ಜನರು ಬೀದಿಗೆ ಬರುವ ರೀತಿ ಸರ್ಕಾರ ನಡೆದುಕೊಳ್ಳಬಾರದು. ಉದ್ಯೋಗಾಕಾಂಕ್ಷಿಗಳಿಗೆ ಸಮಸ್ಯೆಯಾಗದಂತೆ ನಿಗದಿತ ಗಡುವಿನೊಳಗೆ ಆಯೋಗವು ವರದಿ ನೀಡಬೇಕು. ಸರ್ಕಾರ ಆದಷ್ಟು ಗಡುವಿನೊಳಗೆ ಒಳಮೀಸಲಾತಿ ಜಾರಿಗೆ ತರಬೇಕು” ಎಂದರು.