2025 ಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ, ಬೆಂಗಳೂರಿನ ಕುಮಾರಕೃಪಾ ರಸ್ತೆ ಚಿತ್ತಾರದಿಂದ ತುಂಬಿದೆ. ಜನವರಿ 5ರಂದು ಚಿತ್ರಸಂತೆ ನಡೆಯುತ್ತಿದ್ದು, ಕಲಾವಿದರು, ಕಲಾಸಕ್ತರು ಸೇರುವ ತಾಣವಾಗಿ ಬದಲಾಗಿದೆ. ಕುಮಾರಕೃಪಾ ಕೃಪಾ ರಸ್ತೆಯಲ್ಲಿ ಲಕ್ಷಾಂತರ ಮಂದಿ ಜಮಾಯಿಸಿದ್ದು, ಚಿತ್ರಕಲೆಗಳ ವ್ಯಾಪಾರ ಭರಾಟೆ ಜೋರಾಗಿದೆ.
ಕಲಾವಿದರು ಮತ್ತು ಕಲಾಸಕ್ತರ ಸಮಾಗಮವಾಗುವ ಈ ಚಿತ್ರಸಂತೆಯನ್ನು ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿದೆ. 2004ರಲ್ಲಿ ಆರಂಭವಾದ ಈ ಚಿತ್ರಸಂತೆಯ ಅತ್ಯುತ್ತಮ ಪ್ರದರ್ಶನವು 20 ವರ್ಷಗಳನ್ನು ಪೂರೈಸಿದ್ದು, ಸಂಭ್ರಮ ಮುಂದುವರೆದಿದೆ. ಕಣ್ಮನ ತಣಿಸುವ ಅಪರೂಪದ, ಆಕರ್ಷಕ ಕಲಾಕೃತಿಗಳು ಗ್ರಾಹಕರನ್ನು ಸೆಳೆಯುತ್ತಿವೆ.
ವರ್ಷಕ್ಕೊಮ್ಮೆ ಒಂದೇ ದಿನ ನಡೆಯುವ ಈ ಚಿತ್ರಸಂತೆಯನ್ನು ನೋಡಲು ಕುಮಾರಕೃಪಾ ರಸ್ತೆಯಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಜನವರಿ 5ರ ಭಾನುವಾರ ಬೆಳಿಗ್ಗೆ ಚಿತ್ರಸಂತೆ ಆರಂಭವಾಗುವುದಕ್ಕೂ ಮುನ್ನವೇ, ರಸ್ತೆಯ ತುಂಬೆಲ್ಲಾ ಚಿತ್ತಾರ ತುಂಬಿತ್ತು. ಜನರ ಓಡಾಟ ಹೆಚ್ಚಾಗಿತ್ತು. ಕಲಾವಿದರು ರಸ್ತೆ ಬದಿಯಲ್ಲಿ ತಮ್ಮ ಕಲಾಕೃತಿ ಪ್ರದರ್ಶನ ಮಾಡಿದ್ದರು. ಕಲಾಸಕ್ತರು ಕಲಾವಿದರು ಚಿತ್ರಿಸಿದ್ದ ನಾನಾ ತೆರನಾದ ಪೇಂಟಿಂಗ್‌ಗಳನ್ನು ಮೆಚ್ಚಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡರು.

ಈ ಬಾರಿಯ ಚಿತ್ರಸಂತೆಯಲ್ಲಿ 1,000 ರೂಪಾಯಿಂದ ಹಿಡಿದು 10 ಲಕ್ಷಕ್ಕೂ ಅಧಿಕ ಬೆಲೆಯ ಪೇಂಟಿಂಗ್‌ಗಳು ಇದ್ದವು. ಕಲಾಸಕ್ತರು ತಮ್ಮ ನೆಚ್ಚಿನ ಪೇಂಟಿಂಗ್‌ಗಳನ್ನು ಖರೀದಿ ಮಾಡಿ ತೆರಳುವುದು ಕಂಡು ಬಂದಿತು. ಹಾಗೆಯೇ, ಕುಂಚ ಅಥವಾ ಪೆನ್ಸಿಲ್‌ಗಳಿಂದ ಕಲಾರಸಿಕರ ಭಾವಚಿತ್ರಗಳನ್ನ ಸ್ಥಳದಲ್ಲಿಯೇ ರಚಿಸಿಕೊಡಲಾಗುತ್ತಿತ್ತು. ಮೈಸೂರು ಸಾಂಪ್ರದಾಯಿಕ ಶೈಲಿ, ರಾಜಸ್ಥಾನಿ ಶೈಲಿ, ಮಧುಬನಿಯ ಶೈಲಿ, ತೈಲ, ಅಕ್ರಲಿಕ್ ಕೊಲಾಜ್ ಲಿಥೋಗ್ರಾಫ್ ಮತ್ತು ಜಲವರ್ಣದ ಕಲಾಕೃತಿಗಳು ಕಲಾರಸಿಕರ ಗಮನ ಸೆಳೆದವು.
ಈ ಬಾರಿಯ ಚಿತ್ರಸಂತೆಯನ್ನ ಹೆಣ್ಣು ಮಗುವಿಗೆ ಸಮರ್ಪಣೆ ಮಾಡಲಾಗಿದೆ. ಚಿತ್ರಕಲಾ ಪರಿಷತ್ತನ ಪ್ರವೇಶ ದ್ವಾರದಲ್ಲಿಯೇ ಬಾಲಕಿಯ ಬೃಹದಾಕಾರದ ಕಲಾಕೃತಿ ನಿರ್ಮಿಸಲಾಗಿದೆ. ಇನ್ನು ದೇಶದ ನಾನಾ ಭಾಗಗಳಿಂದ 1,500 ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿ, ಕಲಾಕೃತಿಗಳನ್ನು ಪ್ರದರ್ಶನ ಮಾಡಿದ್ದಾರೆ.
ಕರ್ನಾಟಕದ ಜತೆಗೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ನಾನಾ ರಾಜ್ಯಗಳ ಕಲಾವಿದರು ಪಾಲ್ಗೊಂಡಿದ್ದಾರೆ. ಪರಿಷತ್ತಿನ ಗ್ಯಾಲರಿಗಳಲ್ಲಿ ಹಿರಿಯ ಹಾಗೂ ಹೆಸರಾಂತ ಕಲಾವಿದರು ರಚಿಸಿದ ಕಲಾಕೃತಿಗಳ ಪ್ರದರ್ಶನ ನಡೆದಿದೆ. ಜತೆಗೆ, ಹಿರಿಯ ಕಲಾವಿದರು ಹಾಗೂ ಅಂಗವಿಕಲರಿಗೆ ಆಯ್ದ ಸ್ಥಳದಲ್ಲಿ ಅಗತ್ಯ ಸೌಲಭ್ಯವನ್ನ ಒದಗಿಸಿಕೊಡಲಾಗಿತ್ತು.
ಈ ಚಿತ್ರಸಂತೆಯಲ್ಲಿ ಪ್ರಮುಖವಾಗಿ ಮಲಗಿರುವ ಬುದ್ಧನ ಚಿತ್ರ ಎಲ್ಲರ ಗಮನ ಸೆಳೆಯಿತು. ಈ ಚಿತ್ರವನ್ನ ಜಮಖಂಡಿಯ ಕಲೆಗಾರ ಮಲ್ಲಿಕಾರ್ಜುನ ಹಲಗಲಿ ಚಿತ್ರಿಸಿದ್ದರು. “ಸಮಾಜದಲ್ಲಿ ಶಾಂತತೆ ಇರಬೇಕು. ಮಕ್ಕಳತರ ಮನಸ್ಸಿರಬೇಕು. ಗಲಾಟೆ ಮಧ್ಯೆ ಒಳ್ಳೆತರ ಬದುಕಬೇಕು ಎನ್ನುವ ಕಾನ್ಸೆಪ್ಟ್ ಜತೆಗೆ ಈ ಚಿತ್ರವನ್ನ ಬಿಡಸಿದ್ದೇನೆ” ಎಂದು ಅವರು ಈ ದಿನ.ಕಾಮ್‌ಗೆ ತಿಳಿಸಿದರು.
ತಮಿಳುನಾಡಿನ ಬ್ಯಾಂಕ್ ಉದ್ಯೋಗಿಯಾದ ದಯಾನಿಧಿ ಅವರು ಕಲಾಸಕ್ತರು ಅವರ ಕೆಲಸದ ಜತೆಗೆ ಪೇಂಟಿಂಗ್ ಬಿಡಿಸುವ ಕೆಲಸವನ್ನ ಮಾಡುತ್ತಿದ್ದಾರೆ. ಇವರು, ತಮ್ಮ ಮಕ್ಕಳು ಮತ್ತು ಅವರ ತಂದೆಯ ಚಿತ್ರ ಬಿಡಿಸಿದ್ದರು. ಈ ಪೇಂಟಿಂಗ್‌ಗಳು ತೈಲ ವರ್ಣದ ಪೇಂಟಿಂಗ್‌ಗಳಾಗಿವೆ. ಒಂದೊಂದು ಪೇಂಟಿಂಗ್ ಬೆಲೆ 2 ಲಕ್ಷ ರೂಪಾಯಿ ಇದೆ.
ಇನ್ನು ಚಿತ್ರಸಂತೆಯ ವೀಕ್ಷಣೆಗೆ ಬಂದಿದ್ದ ಹಲವು ಜನರು ಚಿತ್ರಸಂತೆಯಲ್ಲಿ ಇದ್ದ ನಾನಾ ತೆರನಾದ ಪೇಂಟಿಂಗ್‌ಗಳನ್ನ ಮೆಚ್ಚಿ ಸಂತಸ ವ್ಯಕ್ತಪಡಿಸಿದರು. ಹಾಗೇಯೇ, ಮುಂದಿನ ಬಾರಿ ನಡೆಯುವ ಚಿತ್ರಸಂತೆಗೆ ಕೆಲವೊಂದು ಸಲಹೆ ಟಿಪ್ಪಣಿಗಳನ್ನ ನೀಡಿದರು. “ಚಿತ್ರಸಂತೆಗೆ ಪ್ರತಿವರ್ಷವೂ ಕೂಡ ಲಕ್ಷಾಂತರ ಜನ ಸೇರುತ್ತಾರೆ. ಇದರಿಂದ ಕುಮಾರಕೃಪಾ ರಸ್ತೆಯಲ್ಲಿ ಜನರು ನಡೆದುಕೊಂಡು ಹೋಗುವುದಕ್ಕೆ ಸಮಸ್ಯೆ ಆಗುತ್ತದೆ. ಹೀಗಾಗಿ, ದೊಡ್ಡ ಸ್ಥಳಗಳಲ್ಲಿ ಈ ಚಿತ್ರಸಂತೆ ಆಯೋಜನೆ ಮಾಡಬೇಕು. ನಾನಾ ರಾಜ್ಯಗಳಿಂದ ಜನರು ಚಿತ್ರಸಂತೆ ಕಾಣುವುದಕ್ಕೆ ಬರುವ ಕಾರಣ ವರ್ಷಕ್ಕೊಮ್ಮೆ ಒಂದು ಬಾರಿ ನಡೆಯುವ ಚಿತ್ರಸಂತೆಯ ವ್ಯಾಪ್ತಿಯನ್ನು ಹಿಗ್ಗಿಸಬೇಕು. ಎರಡು ದಿನದ ಮಟ್ಟಿಗಾದರೂ ಚಿತ್ರಸಂತೆ ನಡೆಸಬೇಕು” ಎಂದು ಹೇಳಿದರು.

ಒಟ್ಟಿನಲ್ಲಿ ಕಲಾಸಕ್ತರು ಮತ್ತು ಕಲಾವಿದರನ್ನು ಒಗ್ಗೂಡಿಸುವ ಕಾರ್ಯವನ್ನು ಕಳೆದ ಹಲವು ವರ್ಷಗಳಿಂದ ಮುನ್ನಡೆಸಿಕೊಂಡು ಬರುತ್ತಿರುವ ಕರ್ನಾಟಕ ಚಿತ್ರಕಲಾ ಪರಿಷತ್ತು ಕೆಲವು ಬದಲಾವಣೆಗಳೊಂದಿಗೆ ಮುಂದಿನ ಚಿತ್ರಸಂತೆ ಆಯೋಜನೆ ಮಾಡಬೇಕಿದೆ.
2025ನೇ ಸಾಲಿನ ಚಿತ್ರಸಂತೆಯ ಮೂಲಕ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ ಸೇರಿದಂತೆ ಹೆಣ್ಣು ಮಕ್ಕಳ ರಕ್ಷಣೆ ಕುರಿತು ಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ.