ಎಪಿಎಂಸಿ ಮಾರುಕಟ್ಟೆಗೆ ಸಿಎಂ ದಿಢೀರ್ ಭೇಟಿ ನೀಡಿದ್ದು, ಕಳೆದ 30 ವರ್ಷಗಳಲ್ಲಿ ಯಾವುದೇ ಸಚಿವರು ಅಥವಾ ಮುಖ್ಯಮಂತ್ರಿಗಳು ಮಾರುಕಟ್ಟೆಗೆ ಬಂದು ರೈತರ ಸಮಸ್ಯೆಗಳನ್ನು ವಿಚಾರಿಸಿರಲಿಲ್ಲ. ನೀವು ಬಂದು ಪರಿಸ್ಥಿತಿ ಪರಿಶೀಲಿಸುತ್ತಿರುವುದು ಬಹಳ ಸಂತೋಷ ತಂದಿದೆ ಎಂದು ರೈತರು ಮುಖ್ಯಂತ್ರಿ ಡಿ.ಕೆ ಶಿವಕುಮಾರ್ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.
ಮಂಗಳವಾರ ಬೆಳ್ಳಂಬೆಳಗ್ಗೆ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಅನಿರೀಕ್ಷಿತ ಭೇಟಿ ನೀಡಿದ ಸಿಎಂ, ಅಲ್ಲಿ ಬಂದಿದ್ದ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಮತ್ತು ತೆಂಗು ಬೆಳೆಗಾರರು, ವರ್ತಕರು ಹಾಗೂ ಮಂಡಿ ಮಾಲೀಕರೊಂದಿಗೆ ನೇರವಾಗಿ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ದೇವರ ಹಿಪ್ಪರಗಿಯ ರೈತರೊಬ್ಬರು ಸಿಎಂ ಅವರನ್ನು ಭೇಟಿ ಮಾಡಿ, “ನಾವು ಬೆಳೆ ವಿಮೆಗೆ ಸ್ವಸಹಾಯ ಸೊಸೈಟಿಗೆ ಹಣ ಕಟ್ಟಿದ್ದೆವು. ಅವರು ಡಿಸಿಸಿ ಬ್ಯಾಂಕ್‌ಗೆ ಪಾವತಿ ಮಾಡದ ಕಾರಣ ನಮ್ಮ ವಿಮೆ ತಿರಸ್ಕೃತಗೊಂಡಿದೆ ಎಂದು ಮೆಸೇಜ್ ಬಂದಿದೆ” ಎಂದು ಅಳಲು ತೋಡಿಕೊಂಡರು. ರೈತರು ಹಣ ಪಾವತಿ ಮಾಡಿರುವ ಪಟ್ಟಿಯನ್ನು ಪರಿಶೀಲಿಸಿದ ಸಿಎಂ, ನಿರ್ಲಕ್ಷ ತೋರಿದ ಅಧಿಕಾರಿಯನ್ನು ಕೂಡಲೇ ವಜಾಗೊಳಿಸುವಂತೆ ಸೂಚನೆ ನೀಡಿದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರೈತರೊಬ್ಬರು, “ಹೆಕ್ಟೇರ್‌ಗೆ 6,500 ರೂ. ವಿಮೆ ಕಟ್ಟಿದ್ದರೂ ನಮಗೆ ಏನೂ ಸಿಕ್ಕಿಲ್ಲ” ಎಂದು ನೋವು ವ್ಯಕ್ತಪಡಿಸಿದಾಗ, ಸಿಎಂ ಅಧಿಕಾರಿಗಳಿಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.
ಸಿಎಂ ಖುದ್ದಾಗಿ ಈರುಳ್ಳಿ ತೂಕವನ್ನು ಪರಿಶೀಲಿಸಿದರು. ರೈತರಿಗೆ ಸಮಯಕ್ಕೆ ಹಣ ಸಿಗುತ್ತಿದೆಯೇ, ಮಾರುಕಟ್ಟೆಯವರು ಕಮಿಷನ್ ಪಡೆಯುತ್ತಾರೆಯೇ, ತೂಕ ಸರಿಯಾಗಿ ಮಾಡುತ್ತಿದ್ದಾರೆಯೇ ಎಂದು ವಿಚಾರಿಸಿದರು. ಕಲಬುರಗಿ, ಬೀದರ್, ವಿಜಯಪುರ ಮಾರುಕಟ್ಟೆಗಳಲ್ಲಿ ಎಕರೆಗೆ 8ರಿಂದ 10 ರೂ. ಕಮಿಷನ್ ಪಡೆಯುತ್ತಾರೆ, ಆದರೆ ಯಶವಂತಪುರದಲ್ಲಿ ಪಡೆಯುವುದಿಲ್ಲ ಎಂದು ರೈತರು ತಿಳಿಸಿದರು. ಈ ಬಾರಿ ಮಳೆ ಕೊರತೆಯಿಂದ ಇಳುವರಿ ಕಡಿಮೆಯಾಗಿ ಎಕರೆಗೆ ಕೇವಲ 50 ಪ್ಯಾಕೆಟ್ ಈರುಳ್ಳಿ ಸಿಕ್ಕಿದೆ ಎಂದು ಸಮಸ್ಯೆಯನ್ನು ವಿವರಿಸಿದರು.
ಮಾರುಕಟ್ಟೆಯ ಮಂಡಿ ವರ್ತಕರೊಂದಿಗೆ ಮಾತನಾಡಿದ ಸಿಎಂ, “ಎಪಿಎಂಸಿಗೆ ಎಷ್ಟು ಪಾವತಿ ಮಾಡುತ್ತೀರಿ?” ಎಂದು ಕೇಳಿದಾಗ ವರ್ತಕರು ನೂರು ರೂಪಾಯಿಗೆ 60 ಪೈಸೆಯಿಂದ 1 ರೂಪಾಯಿ ಪಾವತಿಸುವುದಾಗಿ ತಿಳಿಸಿದರು. “ಹೆಚ್ಚು ಹಣ ಪಡೆದರೆ ನನಗೆ ಹೇಳಿ, ಅವರನ್ನು ಮಟ್ಟ ಹಾಕುತ್ತೇನೆ” ಎಂದು ಸಿಎಂ ಎಚ್ಚರಿಸಿದರು. ನೇರವಾಗಿ ರೈತರಿಂದ ಖರೀದಿ ಮಾಡುವವರು ತೂಕದಲ್ಲಿ ಮೋಸ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೂಡ್ಲಿಗಿ ಹೊಸಹಟ್ಟಿ ಗ್ರಾಮದ ಈರುಳ್ಳಿ ಬೆಳೆಗಾರ ಆಂಜನಪ್ಪ ಅವರು ಮನೆಗೆ ವಿದ್ಯುತ್ ಸಂಪರ್ಕಕ್ಕಾಗಿ ಮೂರು ಬಾರಿ ಅರ್ಜಿ ಹಾಕಿದರೂ ಸಿಗದಿರುವುದನ್ನು ತಿಳಿಸಿದಾಗ, ಸಿಎಂ “ಎಲ್ಲರಿಗೂ ವಿದ್ಯುತ್ ಸಂಪರ್ಕ ಸಿಗುವಂತೆ ಮಾಡಲಾಗುವುದು” ಎಂದು ಭರವಸೆ ನೀಡಿದರು. ಗ್ಯಾರಂಟಿ ಯೋಜನೆಗಳಿಂದ ಅನುಕೂಲವಾಗಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದರು.





