ಜೆನ್ ಜ಼ಿ ಕೇವಲ ಒಂದು ಪೀಳಿಗೆಯ ಹೆಸರಲ್ಲ; ಬದಲಾಗುತ್ತಿರುವ ಜಗತ್ತಿನ ಹೊಸ ಚಿಂತನೆಯ ಪ್ರತಿಬಿಂಬ

Date:

ತಂತ್ರಜ್ಞಾನದ ವೇಗಕ್ಕೆ ಮಾನವೀಯತೆ, ಆಧುನಿಕ ಚಿಂತನೆಗೆ ಸಂಸ್ಕೃತಿಯ ಅರಿವು, ಸ್ವಾತಂತ್ರ್ಯಕ್ಕೆ ಜವಾಬ್ದಾರಿ ಹಾಗೂ ವೈಯಕ್ತಿಕ ಕನಸುಗಳಿಗೆ ಸಾಮಾಜಿಕ ಬದ್ಧತೆಯನ್ನು ಜೋಡಿಸಿಕೊಂಡಾಗ ಜೆನ್‌ ಜ಼ಿಗಳ ಸಾಮರ್ಥ್ಯ ಮತ್ತಷ್ಟು ಪರಿಣಾಮಕಾರಿಯಾಗುತ್ತದೆ. 

ತಂತ್ರಜ್ಞಾನದ ವೇಗ, ಹೊಸ ಚಿಂತನೆ, ಸಾಮಾಜಿಕ ಅರಿವು ಮತ್ತು ಮಾನವೀಯ ಮೌಲ್ಯಗಳ ನಡುವೆ ಭವಿಷ್ಯ ರೂಪಿಸುತ್ತಿರುವ ಪೀಳಿಗೆ ಜೆನ್‌ ಜ಼ಿ. ಇಂದಿನ ಸಾಮಾಜಿಕ ಸಂದರ್ಭದಲ್ಲಿ ʼಜೆನ್‌ ಜ಼ೀʼ ಅಥವಾ ಜನರೇಷನ್ ಝಡ್ ಎಂಬ ಪದ ವ್ಯಾಪಕವಾಗಿ ಬಳಕೆಯಲ್ಲಿದೆ. ಸಾಮಾನ್ಯವಾಗಿ 1990ರ ದಶಕದ ಕೊನೆಯ ಭಾಗ ಅಂದರೆ 1997ರಿಂದ 2012ರ ನಡುವೆ ಜನಿಸಿದವರನ್ನು ಜೆನ್‌ ಜ಼ೀಗಳೆಂದು ಕರೆಯಲಾಗುತ್ತದೆ.

- Advertisement -

ಇಂಟರ್ನೆಟ್, ಸ್ಮಾರ್ಟ್‌ಫೋನ್, ಸಾಮಾಜಿಕ ಜಾಲತಾಣಗಳು, ಡಿಜಿಟಲ್ ಮಾಧ್ಯಮ ಹಾಗೂ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನಗಳ ನಡುವೆ ಬೆಳೆದಿರುವ ಇವರ ಜೀವನಶೈಲಿ, ಕಲಿಕೆಯ ವಿಧಾನ, ಸಂವಹನ ಕ್ರಮ, ವೃತ್ತಿ ಆಯ್ಕೆ ಜತೆಗೆ ಅವರ ಸಾಮಾಜಿಕ ದೃಷ್ಟಿಕೋನ ಹಿಂದಿನ ಪೀಳಿಗೆಗಳಿಗಿಂತ ಗಮನಾರ್ಹವಾಗಿ ಭಿನ್ನವಾಗಿದೆ. ಹೀಗಾಗಿ ಜೆನ್‌ ಜ಼ಿಗಳನ್ನು ಕೇವಲ ಒಂದು ವಯೋಮಾನದ ಗುರುತಾಗಿ ನೋಡುವುದಕ್ಕಿಂತ, ಬದಲಾಗುತ್ತಿರುವ ಸಾಮಾಜಿಕ ತಾಂತ್ರಿಕ ಪರಿಸರದಲ್ಲಿ ರೂಪುಗೊಂಡ ಹೊಸ ಚಿಂತನಾ ಪ್ರವೃತ್ತಿಯ ಪ್ರತಿನಿಧಿಯಾಗಿ ಪರಿಗಣಿಸುವುದು ಸೂಕ್ತ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಈ ಪೀಳಿಗೆಯ ತಂತ್ರಜ್ಞಾನದೊಂದಿಗೆ ಇರುವ ಸಹಜ ಸಂಬಂಧ ಮೊದಲನೆಯದು. ಹಿಂದಿನ ಪೀಳಿಗೆಗಳು ತಂತ್ರಜ್ಞಾನವನ್ನು ಜೀವನದ ವಿವಿಧ ಹಂತಗಳಲ್ಲಿ ಅಳವಡಿಸಿಕೊಂಡರೆ, ಜೆನ್ ಜ಼ಿ ಬಾಲ್ಯದಿಂದಲೇ ಡಿಜಿಟಲ್ ಸಾಧನಗಳ ಸಾನ್ನಿಧ್ಯದಲ್ಲಿ ಬೆಳೆದಿದೆ. ಮೊಬೈಲ್ ಫೋನ್, ಇಂಟರ್ನೆಟ್, ಸಾಮಾಜಿಕ ಜಾಲತಾಣಗಳು, ಆನ್‌ಲೈನ್ ಶಿಕ್ಷಣ, ಡಿಜಿಟಲ್ ಪಾವತಿ, ವಿಡಿಯೋ ವೇದಿಕೆಗಳು ಹಾಗೂ ಕೃತಕ ಬುದ್ಧಿಮತ್ತೆ ಇವರ ದೈನಂದಿನ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ತಂತ್ರಜ್ಞಾನ ಇವರಿಗೆ ಕೇವಲ ಮನರಂಜನೆಯ ಸಾಧನವಲ್ಲದೇ, ಶಿಕ್ಷಣ, ಉದ್ಯೋಗ, ಸಂವಹನ, ಮಾಹಿತಿ ಸಂಗ್ರಹ, ಸೃಜನಶೀಲತೆ ಹಾಗೂ ಸ್ವಯಂ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮವಾಗಿದೆ.

ಮಾಹಿತಿಯನ್ನು ಪಡೆಯುವ ವೇಗವೂ ಈ ಪೀಳಿಗೆಯ ವಿಶಿಷ್ಟ ಗುಣವಾಗಿದೆ. ಹಿಂದೆ ಯಾವುದಾದರೂ ವಿಷಯದ ಕುರಿತು ತಿಳಿದುಕೊಳ್ಳಲು ಪುಸ್ತಕಗಳು, ಪತ್ರಿಕೆಗಳು, ಗ್ರಂಥಾಲಯಗಳು ಅಥವಾ ಶಿಕ್ಷಕರನ್ನು ಅವಲಂಬಿಸಬೇಕಾಗುತ್ತಿತ್ತು. ಈಗ ಜೇನ್ ಜ಼ಿ ಯುವಕರು ಕೆಲವೇ ಕ್ಷಣಗಳಲ್ಲಿ ಜಗತ್ತಿನ ವಿವಿಧ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಬಲ್ಲರು. ಇದರಿಂದ ಸ್ವಯಂ ಕಲಿಕೆಯ ಪ್ರವೃತ್ತಿಗೆ ಉತ್ತೇಜನ ದೊರೆತಿದೆ. ಆನ್‌ಲೈನ್ ತರಗತಿಗಳು, ಡಿಜಿಟಲ್ ಪುಸ್ತಕಗಳು, ಶೈಕ್ಷಣಿಕ ವಿಡಿಯೋಗಳು ಮತ್ತು ವಿವಿಧ ಕಲಿಕಾ ವೇದಿಕೆಗಳ ನೆರವಿನಿಂದ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಹೊಸ ಜ್ಞಾನ ಹಾಗೂ ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಭಾಷಾ ಅಧ್ಯಯನದಿಂದ ಹಿಡಿದು ತಂತ್ರಜ್ಞಾನ, ಕಲೆ, ಮಾಧ್ಯಮ ಮತ್ತು ಉದ್ಯಮಶೀಲತೆಯವರೆಗೆ ಅನೇಕ ಕ್ಷೇತ್ರಗಳನ್ನು ಸ್ವತಂತ್ರವಾಗಿ ಅನ್ವೇಷಿಸುವ ಅವಕಾಶ ಈ ಪೀಳಿಗೆಗೆ ಲಭ್ಯವಾಗಿದೆ.

ಸಾಮಾಜಿಕ ಜಾಲತಾಣಗಳು ಜೇನ್ ಜ಼ಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನಲ್ಲಿ ಮಹತ್ವದ ಸ್ಥಾನ ಪಡೆದಿವೆ. ಪ್ರತಿಭೆ, ಆಲೋಚನೆ, ಕಲೆ ಮತ್ತು ಅಭಿಪ್ರಾಯಗಳನ್ನು ಭೌಗೋಳಿಕ ಮಿತಿಗಳಿಲ್ಲದೆ ಹಂಚಿಕೊಳ್ಳಲು ಅವು ವೇದಿಕೆಯನ್ನು ಒದಗಿಸಿವೆ. ಒಂದು ಸಣ್ಣ ಹಳ್ಳಿಯಲ್ಲಿರುವ ಯುವ ಪ್ರತಿಭೆಯೂ ತನ್ನ ಕಲೆ ಅಥವಾ ಜ್ಞಾನವನ್ನು ಜಾಗತಿಕ ಪ್ರೇಕ್ಷಕರಿಗೆ ಪರಿಚಯಿಸಿಕೊಳ್ಳುವ ಸಾಧ್ಯತೆ ಇಂದು ಇದೆ. ಇದರಿಂದ ಅಭಿವ್ಯಕ್ತಿಯ ಸ್ವಾತಂತ್ರ್ಯ ಮತ್ತು ಸೃಜನಶೀಲತೆಗೆ ಹೊಸ ಅವಕಾಶಗಳು ತೆರೆದಿವೆ. ಆದರೆ ಇದೇ ವೇದಿಕೆಗಳು ತಪ್ಪು ಮಾಹಿತಿಯ ಪ್ರಸಾರ, ಅತಿಯಾದ ಬಳಕೆ, ಗಮನ ಕೇಂದ್ರೀಕರಣದ ಸಮಸ್ಯೆ ಮತ್ತು ನಿರಂತರ ಹೋಲಿಕೆಯ ಮನೋಭಾವದಂತಹ ಸವಾಲುಗಳನ್ನೂ ಉಂಟುಮಾಡುತ್ತವೆ. ಆದ್ದರಿಂದ ತಂತ್ರಜ್ಞಾನವನ್ನು ತ್ಯಜಿಸುವುದಕ್ಕಿಂತ, ಅದನ್ನು ವಿವೇಕಪೂರ್ವಕವಾಗಿ ಮತ್ತು ಜವಾಬ್ದಾರಿಯಿಂದ ಬಳಸುವ ಡಿಜಿಟಲ್ ಅರಿವು ಬೆಳೆಸಿಕೊಳ್ಳುವುದು ಅಗತ್ಯ.

ಜೇನ್ ಜ಼ಿಯ ಚಿಂತನೆ ವೈಯಕ್ತಿಕ ಬದುಕಿನ ಮಿತಿಗಳನ್ನು ಮೀರಿ ಪರಿಸರ ಸಂರಕ್ಷಣೆ, ಸಾಮಾಜಿಕ ನ್ಯಾಯ, ಸಮಾನತೆ, ಶಿಕ್ಷಣ, ಮಾನವ ಹಕ್ಕುಗಳು ಮತ್ತು ಸಾಮಾಜಿಕ ಬದಲಾವಣೆಯಂತಹ ವಿಷಯಗಳತ್ತ ವಿಸ್ತರಿಸಿದೆ. ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದು, ಪ್ರಶ್ನಿಸುವುದು ಮತ್ತು ಚರ್ಚೆಗೆ ಮುಂದಾಗುವುದು ಈ ಪೀಳಿಗೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಗುಣಗಳಾಗಿವೆ. ಯಾವುದೇ ವಿಚಾರವು ಕೇವಲ ಪರಂಪರೆಯಿಂದ ಬಂದಿದೆ ಎಂಬ ಕಾರಣಕ್ಕೆ ಅದನ್ನು ಒಪ್ಪಿಕೊಳ್ಳುವ ಬದಲು, ಅದರ ಅರ್ಥ, ಪರಿಣಾಮ ಮತ್ತು ಪ್ರಸ್ತುತತೆಯನ್ನು ಪರಿಶೀಲಿಸುವ ಮನೋಭಾವವೂ ಬೆಳೆಯುತ್ತಿದೆ. ಈ ಪ್ರವೃತ್ತಿ ಸಾಮಾಜಿಕ ಸಂಸ್ಥೆಗಳು ಮತ್ತು ಮೌಲ್ಯಗಳನ್ನು ವಿಮರ್ಶಾತ್ಮಕವಾಗಿ ಮರುಪರಿಶೀಲಿಸಲು ಅವಕಾಶ ನೀಡುತ್ತದೆ.

ವೃತ್ತಿ ಮತ್ತು ಭವಿಷ್ಯದ ಕುರಿತು ಈ ಪೀಳಿಗೆಯ ದೃಷ್ಟಿಕೋನವೂ ಬದಲಾಗಿದೆ. ಹಿಂದಿನ ಕಾಲದಲ್ಲಿ ಸ್ಥಿರ ಉದ್ಯೋಗವನ್ನು ಜೀವನದ ಪ್ರಮುಖ ಗುರಿಯೆಂದು ಪರಿಗಣಿಸಲಾಗುತ್ತಿತ್ತು. ಆದರೆ ಇಂದಿನ ಯುವಜನರು ತಮ್ಮ ಆಸಕ್ತಿ, ಕೌಶಲ್ಯ, ಸೃಜನಶೀಲತೆ ಮತ್ತು ವೈಯಕ್ತಿಕ ಗುರಿಗಳಿಗೆ ಹೊಂದುವ ವಿವಿಧ ವೃತ್ತಿ ಮಾರ್ಗಗಳನ್ನು ಅನ್ವೇಷಿಸಲು ಬಯಸುತ್ತಾರೆ. ತಂತ್ರಜ್ಞಾನ, ಡಿಜಿಟಲ್ ಮಾಧ್ಯಮ, ಸಂಶೋಧನೆ, ಉದ್ಯಮಶೀಲತೆ, ಸೃಜನಶೀಲ ಕ್ಷೇತ್ರಗಳು ಮತ್ತು ಹೊಸ ಮಾದರಿಯ ವೃತ್ತಿಗಳತ್ತ ಅವರ ಆಸಕ್ತಿ ಹೆಚ್ಚುತ್ತಿದೆ. ಕೆಲಸವು ಕೇವಲ ಜೀವನೋಪಾಯದ ಸಾಧನವಲ್ಲ, ಸ್ವಂತ ಸಾಮರ್ಥ್ಯವನ್ನು ವ್ಯಕ್ತಪಡಿಸುವ ಮತ್ತು ವೈಯಕ್ತಿಕ ಗುರುತನ್ನು ನಿರ್ಮಿಸುವ ಅವಕಾಶವೂ ಹೌದು ಎಂಬ ದೃಷ್ಟಿಕೋನ ಇಲ್ಲಿ ಸ್ಪಷ್ಟವಾಗುತ್ತದೆ.

ಆದಾಗ್ಯೂ, ಜೆನ್‌ ಜ಼ಿಗಳ ಬದುಕಿನಲ್ಲಿ ಸವಾಲುಗಳ ಕೊರತೆಯಿಲ್ಲ. ಡಿಜಿಟಲ್ ಜಗತ್ತಿನ ನಿರಂತರ ಸಂಪರ್ಕವು ನೈಜ ಸಂಬಂಧಗಳು ಮತ್ತು ಮುಖಾಮುಖಿ ಸಾಮಾಜಿಕ ಸಂವಹನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮಾಹಿತಿಯ ಪ್ರಮಾಣ ಹೆಚ್ಚಾದರೂ, ಅದರ ವಿಶ್ವಾಸಾರ್ಹತೆ ಸದಾ ಖಚಿತವಾಗಿರುವುದಿಲ್ಲ. ಹೀಗಾಗಿ ಮಾಹಿತಿಯ ಮೂಲವನ್ನು ಪರಿಶೀಲಿಸುವುದು, ಸಾಕ್ಷ್ಯಾಧಾರಗಳನ್ನು ಗುರುತಿಸುವುದರ ಜತೆಗೆ ಇವರು ವಿಮರ್ಶಾತ್ಮಕವಾಗಿ ಯೋಚಿಸುವುದು ಅತ್ಯಗತ್ಯವಾಗಿದೆ. ತಂತ್ರಜ್ಞಾನವನ್ನು ಬಳಸುವ ಸಾಮರ್ಥ್ಯದ ಜತೆಗೆ, ಅದನ್ನು ಯಾವಾಗ, ಎಷ್ಟು ಮತ್ತು ಯಾವ ಉದ್ದೇಶಕ್ಕಾಗಿ ಬಳಸಬೇಕು ಎಂಬ ವಿವೇಕವನ್ನೂ ಬೆಳೆಸಿಕೊಳ್ಳಬೇಕು.

ಈ ಪೀಳಿಗೆಯ ಮುಂದಿರುವ ಮತ್ತೊಂದು ಪ್ರಮುಖ ಪ್ರಶ್ನೆ ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಗೆ ಸಂಬಂಧಿಸಿದೆ. ವೇಗವಾಗಿ ಬದಲಾಗುತ್ತಿರುವ ಜೀವನಶೈಲಿಯ ನಡುವೆ ಕನ್ನಡ ಭಾಷೆ, ಸಾಹಿತ್ಯ, ಜನಪದ ಕಲೆಗಳು, ಗ್ರಾಮೀಣ ಸಂಸ್ಕೃತಿ, ಸ್ಥಳೀಯ ಇತಿಹಾಸ, ಆಚರಣೆಗಳು ಮತ್ತು ಸಾಂಪ್ರದಾಯಿಕ ಜ್ಞಾನಗಳೊಂದಿಗೆ ಯುವಜನರ ಸಂಪರ್ಕ ಕಡಿಮೆಯಾಗುವ ಸಾಧ್ಯತೆಯಿದೆ. ಆದರೆ ಇದನ್ನು ತಂತ್ರಜ್ಞಾನದ ವಿರುದ್ಧದ ಸಂಘರ್ಷವಾಗಿ ನೋಡುವ ಅಗತ್ಯವಿಲ್ಲ. ಬದಲಾಗಿ, ಪರಂಪರೆಯನ್ನು ಹೊಸ ಮಾಧ್ಯಮಗಳ ಮೂಲಕ ಪರಿಚಯಿಸುವ ಪ್ರಯತ್ನ ಅಗತ್ಯ. ವಚನ ಸಾಹಿತ್ಯದಿಂದ ಜನಪದ ಕಲೆಗಳವರೆಗೆ, ಗ್ರಾಮೀಣ ಸಂಸ್ಕೃತಿಯಿಂದ ಸ್ಥಳೀಯ ಇತಿಹಾಸದವರೆಗೆ ವಿವಿಧ ಸಾಂಸ್ಕೃತಿಕ ಸಂಪನ್ಮೂಲಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿ ಹಂಚಿಕೊಂಡರೆ, ಜೆನ್ ಜ಼ಿ ಅವುಗಳನ್ನು ತನ್ನದೇ ಆದ ಭಾಷೆ ಮತ್ತು ಮಾಧ್ಯಮಗಳಲ್ಲಿ ಅರ್ಥೈಸಿಕೊಂಡು ಮುಂದಿನ ಪೀಳಿಗೆಗಳಿಗೆ ಸಾಗಿಸಬಹುದು.

ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನಗಳು ಶಿಕ್ಷಣ, ಉದ್ಯೋಗ, ಸಂಶೋಧನೆ, ಮಾಧ್ಯಮ ಹಾಗೂ ಆಡಳಿತದ ಅನೇಕ ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತಿವೆ. ಈ ಬದಲಾವಣೆಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಜೆನ್ ಜ಼ಿಯ ಪ್ರಮುಖ ಶಕ್ತಿಯಾಗಿದೆ. ಆದರೆ ತಂತ್ರಜ್ಞಾನ ಎಷ್ಟೇ ಅಭಿವೃದ್ಧಿಯಾದರೂ ಮಾನವೀಯತೆ, ನೈತಿಕತೆ, ಸ್ವತಂತ್ರ ಚಿಂತನೆ, ಸಹಾನುಭೂತಿ ಹಾಗೂ ಸಾಮಾಜಿಕ ಜವಾಬ್ದಾರಿ ಹಿಂದುಳಿಯಬಾರದು. ಯಂತ್ರಗಳು ಮಾಹಿತಿಯನ್ನು ಒದಗಿಸಬಹುದು; ಆದರೆ ಆ ಮಾಹಿತಿಯನ್ನು ಸಮಾಜದ ಒಳಿತಿಗಾಗಿ ಹೇಗೆ ಬಳಸಬೇಕು ಎಂಬ ನಿರ್ಧಾರ ಮಾನವೀಯ ವಿವೇಕದ ಮೇಲೆಯೇ ಅವಲಂಬಿತವಾಗಿರುತ್ತದೆ.

ಈ ಸಂದರ್ಭದಲ್ಲಿ ಹಿರಿಯ ಪೀಳಿಗೆ ಮತ್ತು ಜೆನ್ ಜ಼ಿಯ ನಡುವಿನ ಸಂವಾದವೂ ಮಹತ್ವ ಪಡೆಯುತ್ತದೆ. ಹೊಸ ಪೀಳಿಗೆಯ ಪ್ರಶ್ನೆಗಳನ್ನು ತಕ್ಷಣವೇ ತಪ್ಪು ಎಂದು ತಳ್ಳಿಹಾಕುವ ಬದಲು, ಅವುಗಳ ಹಿನ್ನೆಲೆ ಮತ್ತು ಅರ್ಥವನ್ನು ಅರ್ಥಮಾಡಿಕೊಳ್ಳುವುದು ಹಿರಿಯರ ಜವಾಬ್ದಾರಿ. ಅದೇ ರೀತಿ ಯುವಜನರೂ ಹಿರಿಯರ ಅನುಭವ, ಜೀವನಪಾಠ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಗೌರವಿಸಬೇಕು. ಹಿಂದಿನ ಅನುಭವ ಮತ್ತು ಹೊಸ ತಂತ್ರಜ್ಞಾನ ಪರಸ್ಪರ ಸಂವಾದಕ್ಕೆ ಬಂದಾಗ ಮಾತ್ರ ಸಾಮಾಜಿಕ ಅಭಿವೃದ್ಧಿ ಸಮತೋಲನದಿಂದ ಸಾಗಲು ಸಾಧ್ಯ.

ಜೆನ್ ಜ಼ಿಯನ್ನು ಕೇವಲ ʼಮೊಬೈಲ್ ಬಳಸುವ ಪೀಳಿಗೆʼ ಎಂದು ಗುರುತಿಸುವುದು ಅದರ ಸಾಮರ್ಥ್ಯವನ್ನು ಅತಿಯಾಗಿ ಸೀಮಿತಗೊಳಿಸುತ್ತದೆ. ಪ್ರಶ್ನಿಸುತ್ತಾರೆ, ಹೊಸದಾಗಿ ಕಲಿಯುತ್ತಾರೆ, ಸೃಜನಶೀಲವಾಗಿ ಯೋಚಿಸುವುದರ ಜತೆಗೆ ಬದಲಾವಣೆಯನ್ನು ಸ್ವೀಕರಿಸುವ ಪೀಳಿಗೆ. ಇವರ ಕೈಯಲ್ಲಿ ತಂತ್ರಜ್ಞಾನ, ಮಾಹಿತಿ, ಜಾಗತಿಕ ಸಂಪರ್ಕ ಹಾಗೂ ಹೊಸ ಅವಕಾಶಗಳಿವೆ. ಈ ಸಂಪನ್ಮೂಲಗಳನ್ನು ವೈಯಕ್ತಿಕ ಯಶಸ್ಸಿನ ಜತೆಗೆ ಸಾಮಾಜಿಕ ಅಭಿವೃದ್ಧಿಗೂ ಬಳಸಿದರೆ, ಗಮನಾರ್ಹ ಬದಲಾವಣೆಗಳನ್ನು ತರಲು ಸಾಧ್ಯ.

ಇದನ್ನೂ ಓದಿದ್ದೀರಾ? ದಸರಾ ಸಿನಿಮೋತ್ಸವ: ಸಂಸ್ಕೃತಿಯ ವಿಕೇಂದ್ರೀಕರಣ ಮತ್ತು ದೃಶ್ಯ ಪ್ರಜ್ಞೆಯ ಉಳಿವು

ಜೆನ್ ಜ಼ಿ ಕೇವಲ ಒಂದು ಪೀಳಿಗೆಯ ಹೆಸರಲ್ಲ, ಅದು ಬದಲಾಗುತ್ತಿರುವ ಜಗತ್ತಿನ ಹೊಸ ಚಿಂತನೆಯ ಪ್ರತಿಬಿಂಬ. ತಂತ್ರಜ್ಞಾನದ ವೇಗಕ್ಕೆ ಮಾನವೀಯತೆ, ಆಧುನಿಕ ಚಿಂತನೆಗೆ ಸಂಸ್ಕೃತಿಯ ಅರಿವು, ಸ್ವಾತಂತ್ರ್ಯಕ್ಕೆ ಜವಾಬ್ದಾರಿ ಹಾಗೂ ವೈಯಕ್ತಿಕ ಕನಸುಗಳಿಗೆ ಸಾಮಾಜಿಕ ಬದ್ಧತೆಯನ್ನು ಜೋಡಿಸಿಕೊಂಡಾಗ ಜೆನ್‌ ಜ಼ಿಗಳ ಸಾಮರ್ಥ್ಯ ಮತ್ತಷ್ಟು ಪರಿಣಾಮಕಾರಿಯಾಗುತ್ತದೆ. ಭವಿಷ್ಯ ಯಾರ ಕೈಯಲ್ಲಿದೆ ಎಂಬ ಪ್ರಶ್ನೆಗೆ ಉತ್ತರ ಹುಡುಕಿದರೆ, ಅದು ಇಂದಿನ ಯುವಪೀಳಿಗೆಯ ಕೈಯಲ್ಲಿದೆ. ಆ ಭವಿಷ್ಯವನ್ನು ಯಾವ ದಿಕ್ಕಿನಲ್ಲಿ ರೂಪಿಸಬೇಕು ಎಂಬುದು ಜೆನ್ ಜ಼ಿಗಳ ಚಿಂತನೆ, ಆಯ್ಕೆ ಹಾಗೂ ಸಾಮಾಜಿಕ ಜವಾಬ್ದಾರಿಯ ಮೇಲೆ ಅವಲಂಬಿತವಾಗಿದೆ.

WhatsApp Image 2026 07 28 at 13.24.25
ಆರ್‌ ಕಾವೇರಿ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೆಹಾನ್ ವಾಡ್ರಾ ಛಾಯಾಚಿತ್ರ ಪ್ರದರ್ಶನಕ್ಕೆ ಕೇರಳಕ್ಕೆ ಆಹ್ವಾನ ನೀಡಿದ ಸಿಎಂ ಸತೀಶನ್

ದೆಹಲಿಯ ಬಿಕಾನೇರ್ ಹೌಸ್‌ನಲ್ಲಿ ನಡೆಯುತ್ತಿರುವ ತಮ್ಮ 'ನೋ ಐಡಿಯಾ ಈಸ್ ಫೈನಲ್'...

ಶಿವಮೊಗ್ಗದಲ್ಲಿ ಪರೀಕ್ಷಾ ಅಕ್ರಮ: KSOU ಕೇಂದ್ರದಲ್ಲಿ ಪುಸ್ತಕ, ಮೊಬೈಲ್ ಬಳಸಿ ‘ಕಾಪಿ’ ಮಾಡಲು ಅವಕಾಶ; ವಿಡಿಯೋ ವೈರಲ್

ಶಿವಮೊಗ್ಗದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಪ್ರಾದೇಶಿಕ ಪರೀಕ್ಷಾ ಕೇಂದ್ರದಲ್ಲಿ...

ಬೀದರ್ | ಅ.27, 28ರಂದು ಅಖಿಲ ಕರ್ನಾಟಕ 23ನೇ ಹಸ್ತಪ್ರತಿ ಸಮ್ಮೇಳನ

ಹಸ್ತಪ್ರತಿಶಾಸ್ತ್ರ ವಿಭಾಗ, ಕನ್ನಡ ವಿಶ್ವವಿದ್ಯಾಲಯ ಹಂಪಿ ಕರ್ನಾಟಕ ಕಲಾ, ವಿಜ್ಞಾನ ಮತ್ತು...