“ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸುವ ಶಾಸಕರು ಮತ್ತು ಸಂಸದರು ಜನಪ್ರತಿನಿಧಿಗಳಾಗಿದ್ದಾರೆ. ಸಂವಿಧಾನವನ್ನು ಸಹಿಸಲು ಅವರಿಗೆ ಆಗುತ್ತಿಲ್ಲ. ಸಂವಿಧಾನ ಜಾರಿಯಾದ ದಿನವನ್ನು ಸಂವಿಧಾನ ಹತ್ಯಾ ದಿವಸ ಅನ್ನುತ್ತಿದ್ದಾರೆ. ಕಲಾಪದಲ್ಲಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದಾರೆ. ಸಂವಿಧಾನ ಉಳಿದರೇ ನಾವು ಉಳಿಯುತ್ತೇವೆ” ಎಂದು ಭಾರತ ಉಳಿಸಿ ಸಮಿತಿಯ ಅಧ್ಯಕ್ಷರಾದ ಡಾ. ಕೆ ಷರೀಫಾ ಹೇಳಿದರು.
ಬೆಂಗಳೂರಿನಲ್ಲಿ ಭಾರತ ಉಳಿಸಿ ಸಮಿತಿ ಆಯೋಜಿಸಿದ್ದ ‘ಗಣರಾಜ್ಯ ಭಾರತ @75 – ಪ್ರಸಕ್ತ ಸವಾಲುಗಳು’ ಚಿಂತನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಗಣತಂತ್ರಕ್ಕೆ ‘ಒಂದು ದೇಶ – ಒಂದು ಚುನಾವಣೆ’ಗೆ ಅನುಕೂಲ ಆಗುತ್ತದೆ ಎಂದು ಆದಿವಾಸಿ ಮಹಿಳೆಯಾಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ಅಧಿಕಾರಕ್ಕೆ ಹೋದ ನಂತರ ಆದಿವಾದಿ ಮಹಿಳೆಯೊಬ್ಬರು ಇಂತಹ ಹೇಳಿಕೆ ನೀಡಿರುವುದು ಶೋಚನೀಯ. ಜನರು ಜಾಗೃತಗೊಂಡರೆ ಇಂಥವರ ಆಟ ನಡೆಯುವುದಿಲ್ಲ. ಪಂಜಾಬ್-ಹರಿಯಾಣ ರೈತರು ಹೋರಾಟ ಮಾಡಿದ್ದರಿಂದ ರೈತ ವಿರೋಧಿ ಕಾನುನುಗಳನ್ನು ವಾಪಸ್ ಪಡೆದರು. ನ್ಯಾಯಾಂಗ ವ್ಯವಸ್ಥೆ, ಪೊಲೀಸ್ ವ್ಯವಸ್ಥೆಯ ಮೇಲೆ ಜನರು ನಂಬಿಕೆ ಕಡೆದುಕೊಂಡಿದ್ದಾರೆ” ಎಂದರು.
“ಭಾರತದ ಸಂವಿಧಾನ ಕೇವಲ ದಾಖಲೆಗಳ ಪುಸ್ತಕವಲ್ಲ. ದೇಶದ ಚೇತನವಾಗಿದೆ. ಸಂವಿಧಾನದಿಂದ ಜಾತ್ಯಾತೀತೆಯನ್ನು ತೆಗೆಯುತ್ತೇವೆ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಭಾರತವನ್ನು ಜಾತಿ-ಧರ್ಮದ ಆಧಾರದಲ್ಲಿ ಆಳಲು ಅವರು ಬಯಸಿದ್ದಾರೆ. ಅದಕ್ಕೆ ಅವಕಾಶ ಕೊಡಬಾರದು. ರೈತರು, ಚಳವಳಿಗಳು, ಕಾರ್ಮಿಕರು ಸೇರಿದಂತೆ ಎಲ್ಲ ಹಿಂದುಳಿದವರನ್ನು ರಕ್ಷಿಸುವ ಸಂವಿಧಾನವನ್ನು ಎಲ್ಲರೂ ರಕ್ಷಿಸಬೇಕು. 75 ವರ್ಷಗಳಿಂದ ಸಂವಿಧಾನದ ಫಲ ಉಂಡಿದ್ದೇವೆ. ಸಂವಿಧಾನವನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ” ಎಂದು ಹೇಳಿದರು.
“ಪ್ರಸ್ತುತ ಸಮಾಜದಲ್ಲಿ ಬಡವರಿಗೆ ಶಿಕ್ಷಣ ಸಿಗದಂತೆ ಮಾಡುತ್ತಿದ್ದಾರೆ. ಬಡವರ ಮಕ್ಕಳು ಎಲ್ಲಿ ಕಲಿಯಬೇಕು. ಕನ್ನಡ ಶಾಲೆಗಳನ್ನು ಮುಚ್ಚಿ ಕಾನ್ವೆಂಟ್ ಶಾಲೆಗಳಿಗೆ ಅವಕಾಶ ಕೊಡಲಾಗುತ್ತಿದೆ. ಇದು ಬದಲಾಗಬೇಕು. ಸಾಮಾಜಿಕ ನ್ಯಾಯವನ್ನು ನಿರರ್ಥಕ ಮಾಡುತ್ತಿದ್ದಾರೆ. ಮಹಿಳಾ ಮೀಸಲಾತಿ ಮಹಿಳೆಯರಿಗೆ ದೊರೆಯಂತೆ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲದಂತಾಗಿದೆ. ಬಾಬರಿ ಮಸೀದಿ ಪ್ರಕರಣದಲ್ಲಿ ನ್ಯಾಯಾಧೀಶರು ತೆಗೆದುಕೊಂಡ ತೀರ್ಮಾನಗಳು ನಾಚಿಕೆ ತರಿಸುತ್ತದೆ. ಸಂವಿಧಾನದ ಪ್ರಕಾರ ನ್ಯಾಯ ನೀಡಬೇಕಾದವರು. ಧರ್ಮದ ಪ್ರಕಾರ ತೀರ್ಪು ನೀಡಿದ್ದಾರೆ. ನಾವು ಯಾವಾಗಲೂ ಸಂವಿಧಾನದ ಪರವಾಗಿ ಇರಬೇಕು. ಹೊರತು ಸಂವಿಧಾನದ ವಿರೋಧಿಗಳಾಗಿಯಲ್ಲ” ಎಂದು ಹೇಳಿದರು.
“ಕೋಟಿ ಕೋಟಿ ಹಣ ಲೂಟಿ ಮಾಡುವವರ ಬಗ್ಗೆ ನ್ಯಾಯಾಲಯದಲ್ಲಿ ತನಿಖೆಯಿಲ್ಲ. ಅರೋಪ ಸಾಬೀತಾಗದಿದ್ದರೂ ಕೂಡ ನಿರಪರಾಧಿ ಸ್ಟ್ಯಾನ್ ಸ್ವಾಮಿ, ಪ್ರೊ. ಸಾಯಿಬಾಬಾ ಜೈಲು ಶಿಕ್ಷೆ ಅನುಭವಿಸಿದರು. ಸಾವನ್ನಪ್ಪಿದ್ದರು. ಕಥುವಾ ಆಸಿಫಾ, ಬಿಲ್ಕಿಸ್ ಬಾನು ಪ್ರಕರಣದಲ್ಲಿ ಆರೋಪಿಗಳನ್ನು ಸಂಭ್ರಮಿಸುತ್ತಿದ್ದಾರೆ. ಗುಜರಾತಿನಲ್ಲಿ ಅನೇಕ ಮುಸ್ಲಿಂ ಕುಟುಂಬಗಳು ಸತ್ತಾಗ ಬಿಜೆಪಿಯವರು ಸಂಭ್ರಮಿಸಿದ್ದರು. ದೇಶದ ಎಲ್ಲ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ, ನಾವೇ ದೇಶ ಭಕ್ತರು ಎಂದು ಬಿಜೆಪಿಗರು ಹೇಳುತ್ತಿದ್ದಾರೆ. ಜನರು ಇವರ ಬಗ್ಗೆ ಅರ್ಥ ಮಾಡಿಕೊಂಡು, ಅವರಿಗೆ ಸರಿಯಾದ ಬುದ್ದಿ ಕಲಿಸಬೇಕಾಗಿದೆ. ನಾವೆಲ್ಲ ಸೇರಿ ಸಂವಿಧಾನ ಉಳಿಸಬೇಕಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಚಂದ್ರ ಪೂಜಾರಿ, “ರಾಜಕೀಯಕ್ಕೆ ಹೋಗುತ್ತೇನೆ ಎನ್ನುವ ಒಬ್ಬರೇ ಒಬ್ಬ ವಿದ್ಯಾರ್ಥಿಗಳು ಸಿಗುತ್ತಿಲ್ಲ. ಯಾಕೆಂದರೆ, ‘ರಾಜಕೀಯದಲ್ಲಿ ಇರುವುದೆಲ್ಲವೂ ಭ್ರಷ್ಟಾಚಾರ, ರೌಡಿಗಳು’ ಎನ್ನುತ್ತಾರೆ ವಿದ್ಯಾರ್ಥಿಗಳು. ಅವರಿಗೆ ನಾನು ಹೇಳಬಯಸುವುದು; ‘ನೀವು ಹೋಗದೆ ಇದ್ದರೆ, ಇನ್ನೂ ಹೆಚ್ಚು ರೌಡಿಗಳೇ ರಾಜಕೀಯದಲ್ಲಿ ತುಂಬಿಕೊಳ್ಳುತ್ತಾರೆ.’ ಯುವಜನರು, ವಿದ್ಯಾರ್ಥಿಗಳು ರಾಜಕೀಯದಲ್ಲಿ ಸಕ್ರಿಯವಾಗಬೇಕು” ಎಂದು ಹೇಳಿದರು.
“ಗಣರಾಜ್ಯ ವ್ಯವಸ್ಥೆ ಮೂಲಕ ಪ್ರಜಾಪ್ರಭುತ್ವ ಜಾರಿಗೆ ಬರುತ್ತದೆ. ಅಮೆರಿಕದಲ್ಲಿ ರಾಜ್ಯಗಳು ಸೇರಿ ದೇಶವಾಗಿವೆ. ಆದರೆ, ನಮ್ಮಲ್ಲಿ ದೇಶ ನಂತರ ರಾಜ್ಯ. ರಾಜ್ಯಗಳು ಮತ್ತು ಕೇಂದ್ರದ ನಡುವೆ ತೆರಿಗೆ ಹಂಚಿಕೆಯಲ್ಲಿ ಅಸಮಾನತೆ ಇದೆ. ಜನರಿಗೆ ಮೂಲಸೌಕರ್ಯಗಳನ್ನು ಒದಗಿಸುವುದರಲ್ಲಿ ಮೂರನೇ ಎರಡರಷ್ಟು ಜವಾಬ್ದಾರಿ ರಾಜ್ಯಕ್ಕೂ, ಮೂರನೇ ಒಂದರಷ್ಟು ಜವಾಬ್ದಾರಿ ಕೇಂದ್ರಕ್ಕೂ ಇದೆ. ಆದರೆ, ತೆರಿಗೆ ಸಂಗ್ರಹದಲ್ಲಿ ಕೇಂದ್ರಕ್ಕೆ ಮೂರನೇ ಎರಡರಷ್ಟು, ರಾಜ್ಯಕ್ಕೆ ಮೂರನೇ ಒಂದರಷ್ಟು ಹಕ್ಕು ಮಾತ್ರ ಇದೆ. ಇದರಿಂದ, ಹಲವು ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ” ಎಂದು ಆರೋಪಿಸಿದರು.
“ಯುಜಿಸಿ ನಿಯಮ ಬದಲಾಯಿಸಲು ಕೇಂದ್ರ ಹೊರಟಿದೆ. ರಾಜ್ಯಪಾಲರ ಕಚೇರಿ ಬಳಸಿಕೊಂಡು, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಶಾಸಕರನ್ನು ಬ್ಲಾಕ್‌ಮೇಲ್ ಮಾಡಿ ರಾಜ್ಯ ಸರ್ಕಾರಗಳನ್ನು ಉರುಳಿಸುವ ಕುತಂತ್ರವನ್ನು ಬಿಜೆಪಿ ಮಾಡುತ್ತಲೇ ಇದೆ. ಒಂದು ದೇಶ – ಒಂದು ಚುನಾವಣೆ, ಒಂದು ಭಾಷೆ, ಒಂದು ಸಂಸ್ಕೃತಿ ಎನ್ನುತ್ತಲೇ ಕೇಂದ್ರವು ಗಣರಾಜ್ಯ ವ್ಯವಸ್ಥೆಯನ್ನು ಹಾಳುಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“2022ರ ವರದಿಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯ ಕ್ರಮಗಳು ಹಿಂದಿಯಲ್ಲಿ ಇರಬೇಕು. ಪ್ರವೇಶ ಪರೀಕ್ಷೆಗಳು ಹಿಂದಿಯಲ್ಲಿಯೇ ನಡೆಯಬೇಕು ಎಂದು ಶಿಫಾರಸ್ಸು ಮಾಡಲಾಗಿದೆ. ಈ ಮೂಲಕ ಹಿಂದಿಯನ್ನು ಹೇರಲು ಸಿದ್ದತೆ ನಡೆಸಲಾಗುತ್ತಿದೆ. ಜಿಎಸ್‌ಟಿಯನ್ನು ತಮಿಳುನಾಡು ವಿರೋಧಿಸಿತ್ತು. ಜಿಎಸ್‌ಟಿಯಿಂದಾಗಿ 80% ತೆರಿಗೆ ಸಂಗ್ರಹ ಮಾಡುವ ಅಧಿಕಾರ ಕೇಂದ್ರ ಸರ್ಕಾರದ ಪಾಲಾಗಿದೆ. ರಾಜ್ಯಕ್ಕೆ ಬರ ಬಂದರೆ ಪರಿಹಾರ ಕೊಡಿ ಎಂದು ಕೇಂದ್ರದ ಬಳಿ ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಇದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ನಂಬಿಕೆ ಕುಸಿದಿದೆ: ಜಸ್ಟಿಸ್ ಗೋಪಾಲಗೌಡ
“ಒಂದು ದೇಶ ಒಂದು ಚುನಾವಣೆ ಬರಬೇಕು ಅಂದರೆ ರಾಜ್ಯಗಳ ಒಪ್ಪಿಗೆ ಬೇಕು. ಸಂವಿಧಾನದಲ್ಲಿ ತಿದ್ದುಪಡಿ ಆಗಬೇಕು. ಇದು ದೊಡ್ಡ ಕೆಲಸ. ಸಂವಿಧಾನದಲ್ಲಿ ತಿದ್ದುಪಡಿ ಮಾಡುವುದು ಒಂದು ಸವಾಲಾದರೆ, ಮತ್ತೊಂದು ಅಪಾಯವೂ ಇದೆ. ಅದೇನೆಂದರೆ, ಮತಕ್ಷೇತ್ರಗಳ ಮರುವಿಂಗಡಣೆ. 1971ರಲ್ಲಿ ಕೊನೆಯ ಡಿಲಿಮಿಟೇಶನ್ ಆಗಿತ್ತು. 2002ರಲ್ಲಿ ಡಿಲಿಮಿಟೇಶನ್ ಮಾಡಬೇಕಿತ್ತು. ಆದರೆ, ಅಂದಿನ ವಾಜಪೇಯಿ ಸರ್ಕಾರ ಕ್ಷೇತ್ರ ಮರುವಿಂಗಣೆಯನ್ನು ಮುಂದಕ್ಕೆ ಹಾಕಿದರು. ಈಗ ಕ್ಷೇತ್ರ ಮರುವಿಂಗಡಣೆಗೆ ಮೋದಿ ಸರ್ಕಾರ ಎದುರು ನೋಡುತ್ತಿದೆ. ಬಿಜೆಪಿಗೆ ಅನುಕೂಲವಾಗುವಂತೆ ಡಿಲಿಮಿಟೇಷನ್ ಮಾಡಲಾಗುತ್ತದೆ. ಅದರಂತೆ, ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ಈಗ 80 ಲೋಕಸಭಾ ಕ್ಷೇತ್ರಗಳಿವೆ. ಅದನ್ನು 140 ಕ್ಷೇತ್ರಗಳಿಗೆ ಹೆಚ್ಚಿಸಲಾಗುತ್ತದೆ. ದಕ್ಷಿಣ ಭಾತರದ ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ, ಕೇರಳ – ಈ ಐದು ರಾಜ್ಯಗಳ ಒಟ್ಟು ಸ್ಥಾನಗಳು 159 ಆಗಬಹುದು. ಇದು ಉತ್ತರವು ದಕ್ಷಿಣದ ಮೇಲೆ ಸವಾರಿ ಮಾಡಲು ಅವಕಾಶ ನೀಡುತ್ತದೆ. ಅದರ ಲಾಭವನ್ನು ಸಂಸತ್ತಿನಲ್ಲಿ ಬಿಜೆಪಿ ಪಡೆದುಕೊಳ್ಳುತ್ತದೆ” ಎಂದು ಆರೋಪಿಸಿದರು.
ಚಿಂತಕರು ಕೆ ಪ್ರಕಾಶ್ ಮಾತನಾಡಿ, “ನಾವು ಸಂವಿಧಾನದ ಬಗ್ಗೆ ಪದೇ-ಪದೇ ಮಾತನಾಡುತ್ತೇವೆ. ಆದರೆ, ಸಂವಿಧಾನ ತತ್ವ ಕಡಿಮೆಯಾಗಿದೆ. ಬಿಜೆಪಿ ಸರ್ಕಾರವು ಸಂವಿಧಾನದ ಮೇಲುಕವಚವನ್ನು ಹಾಗೆಯೇ ಇಟ್ಟು ಒಳಗಡೆ ಇರುವ ತಿರುಳನ್ನು ತಿರುಚುವ ಕೆಲಸ ಮಾಡುತ್ತಿದೆ. ಸಂವಿಧಾನತ್ವಗಳನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ. ಸಂವಿಧಾನದ ಮೂಲ ಆಶಯಕ್ಕೆ ವಿರುದ್ದವಾಗಿ ತಿದ್ದುಪಡಿಗಳನ್ನು ಮಾಡಲು ಮುಂದಾಗಿದ್ದಾರೆ. ಪ್ರಜಾಪ್ರಭುತ್ವ, ಗಣರಾಜ್ಯ ಎಂದರೆ ಏನು ಎಂಬುದು ಸಾಮಾನ್ಯ ಜನರಿಗೆ ಗೊತ್ತಿಲ್ಲದೇ ಇರುವ ವಿಚಾರಗಳಾಗಿ ಉಳಿದಿವೆ. ಬಿಜೆಪಿ-ಆರ್‌ಎಸ್‌ಎಸ್‌ನವರು ಇಡೀ ದೇಶವನ್ನು ಹಿಂದುರಾಷ್ಟ್ರ ಮಾಡಬೇಕು ಎನ್ನುತ್ತಿದ್ದಾರೆ. ಆದರೆ, ಸಂವಿಧಾನದಲ್ಲಿ ಹಿಂದುರಾಷ್ಟ್ರವೆಂದು ಘೋಷಣೆ ಮಾಡಲಾಗಿಲ್ಲ. ಇದನ್ನು ಜನರಿಗೆ ತಿಳಿಸಬೇಕು” ಎಂದು ಹೇಳಿದರು.