ಬೆಂಗಳೂರಿನಲ್ಲಿ ಗುರುವಾರದಿಂದ (ಆಗಸ್ಟ್ 21) ಮತ್ತೆ ಬೈಕ್ ಟ್ಯಾಕ್ಸಿ ಸೇವೆಗಳು ಪುನಾರಂಭವಾಗಿವೆ. ಈ ಮೂಲಕ ಆಟೋ, ಕಾರ್ ಟ್ಯಾಕ್ಸಿಗೆ ದುಬಾರಿ ದರ ನೀಡುತ್ತಿದ್ದವರಿಗೆ ತುಸು ಸಮಾಧಾನವಾಗಲಿದೆ.
ಸುರಕ್ಷಿತೆಯ ಕಾರಣಕ್ಕೆ ಜೂನ್ 16 ರಿಂದ ರಾಜ್ಯ ಸರ್ಕಾರವು ಬೈಕ್ ಟ್ಯಾಕ್ಸಿಗಳ ಮೇಲೆ ನಿಷೇಧ ಹೇರಿತ್ತು. ಆ ಬಳಿಕ ಎಲ್ಲ ಬೈಕ್ ಟ್ಯಾಕ್ಸಿಗಳು ಸೇವೆ ಸ್ಥಗಿತಗೊಳಿಸಿದ್ದವು. ಆ ಸಂದರ್ಭದಲ್ಲಿ ಅನಧಿಕೃತವಾಗಿ ಸಂಚರಿಸಿದ ಬೈಕ್ ಟ್ಯಾಕ್ಸಿಗಳ ಮೇಲೆ ಆರ್‌ಟಿಓ ಅಧಿಕಾರಿಗಳು ಕ್ರಮಕೈಗೊಂಡಿದ್ದರು. ಭಾರಿ ದಂಡ ವಿಧಿಸಿದ್ದರಿಂದ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಆ್ಯಪ್ ಆಧಾರಿತ ಸೇವೆ ಒದಗಿಸುವ ಕಂಪನಿಗಳಿಗೆ ಸೂಚಿಸಲಾಗಿತ್ತು.
ಈಗಾಗಲೇ ಎರಡು ಫ್ಲಾಟ್‌ಫಾರಂಗಳಲ್ಲಿ ಬುಕ್ಕಿಂಗ್ ಆಯ್ಕೆ ತೋರಿಸುತ್ತಿದ್ದು, ಓಲಾ ಹೊರತುಪಡಿಸಿ ರ‍್ಯಾಪಿಡೋ ಹಾಗೂ ಊಬರ್ ಕಂಪನಿಗಳಿಂದ ಸೇವೆ ಆರಂಭವಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸದನದ ಘನತೆಯನ್ನು ಮಣ್ಣುಪಾಲು ಮಾಡಿದ ಮಹನೀಯರು
ಈ ಬೆನ್ನಲ್ಲೆ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳ ಮೇಲಿನ ಸಂಪೂರ್ಣ ನಿಷೇಧವನ್ನು ಪ್ರಶ್ನಿಸಿ ಆ್ಯಪ್ ಆಧಾರಿತ ಸೇವೆ ಒದಗಿಸುವ ಕಂಪನಿಗಳು ಕರ್ನಾಟಕ ಹೈಕೋರ್ಟ್ ಅನ್ನು ಸಹ ಸಂಪರ್ಕಿಸಿದ್ದವು. ಸದ್ಯ ಹೈಕೋರ್ಟ್ ಸೆಪ್ಟೆಂಬರ್ 22 ರವರೆಗೆ ವಿಚಾರಣೆಯನ್ನು ಮುಂದೂಡಿದೆ. ಈ ವಿಷಯವು ಲಕ್ಷಾಂತರ ಜನರ ಜೀವನದ ಮೇಲೆ ಪರಿಣಾಮ ಬೀರುವುದರಿಂದ ಗಂಭೀರವಾಗಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ.
ಬೆಂಗಳೂರು ನಗರದಲ್ಲಿ ಸುಮಾರು 1.20 ಲಕ್ಷ ಖಾಸಗಿ ಬೈಕ್‌ಗಳು ಆ್ಯಪ್ ಆಧಾರಿತ ಸೇವೆ ಒದಗಿಸುವ ಕಂಪನಿಗಳೊಂದಿಗೆ ನೋಂದಾಯಿಸಿಕೊಂಡಿದ್ದವು. ರಾಜ್ಯದಲ್ಲಿ ಆರು ಲಕ್ಷ ಜನರು ಬೈಕ್ ಟ್ಯಾಕ್ಸಿಗಳನ್ನೇ ತಮ್ಮ ಜೀವನೋಪಾಯಕ್ಕೆ ನೆಚ್ಚಿಕೊಂಡಿದ್ದಾರೆ. ನಿಷೇಧದಿಂದ ಸಾವಿರಾರು ಮಂದಿಗೆ ಸಮಸ್ಯೆಯಾಗಿತ್ತು.