ವೈಚಾರಿಕತೆ ಎದುರಿಸಲಿಕ್ಕೆ ಆಗದ ಹೇಡಿಗಳು ಗೌರಿಯನ್ನು ಕೊಂದರು. ವೈಚಾರಿಕತೆ ಎದುರಿಸಲು ಸಾಧ್ಯವಾಗದೆ ಮಹಾತ್ಮ ಗಾಂಧಿಯನ್ನು ಕೊಂದರು. ವೈಚಾರಿಕತೆ ಎದುರಿಸಲು ಸಾಧ್ಯವಿಲ್ಲವೊ ಅಂತಹವರು ಇಂತಹ ಹೇಡಿತನದ ಕೃತ್ಯವೆಸಗುತ್ತಾರೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಹೇಳಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ‘ಗೌರಿ ದಿನ’ ದ ಕಾರ್ಯಕ್ರಮದ ಅಂಗವಾಗಿ ನಡೆದ ‘ಅಪಾಯದ ಸುಳಿಯಲ್ಲಿ ಭಾರತದ ಪ್ರಜಾತಂತ್ರ: ಚುನಾವಣಾ ಪ್ರಕ್ರಿಯೆಯ ಆಯುಧೀಕರಣ’ ವಿಷಯವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗೌರಿ ಲಂಕೇಶ್ ಅವರ ಬಳಿ ದೊಡ್ಡ ಜನರಿರಲಿಲ್ಲ, ಸಂಪನ್ಮೂಲವಿರಲಿಲ್ಲ. ಆದರೂ ಆಕೆ ಎಲ್ಲರಿಗೂ ಬೇಕಿತ್ತು. ನ್ಯಾಯದ ಪರವಾಗಿ ಸತ್ಯದ ಪರವಾಗಿ ಅವರಿದ್ದರು. ಅವರ ಬಳಿ ಕಪಟವಿರಲಿಲ್ಲ. ಮುಖ್ಯಮಂತ್ರಿ, ನಕ್ಸಲರು ಎಲ್ಲರನ್ನು ಕರೆದುಕೊಂಡು ಬರುವ ಧೈರ್ಯ ಅವರ ಬಳಿಯಿತ್ತು ಎಂದು ದಿನೇಶ್ ಅಮಿನ್ ಮಟ್ಟು ತಿಳಿಸಿದರು.
ಧರ್ಮಸ್ಥಳದ ಬಗ್ಗೆ ಈಗ ಹಲವು ವಿಷಯಗಳು ಹೊರಬರುತ್ತಿವೆ. ಆದರೆ ಗೌರಿ ಲಂಕೇಶ್ ತಮ್ಮ ಪತ್ರಿಕೆಯಲ್ಲಿ ಹಿಂದೆಯೇ ಬರೆದಿದ್ದರು. ಧರ್ಮಸ್ಥಳದ ಹೋರಾಟ ಹಲವು ತಿರುವು ಪಡೆದುಕೊಳ್ಳುತ್ತಿದೆ. ಇದನ್ನು ಹಿಡಿದಿಡಲು ಗೌರಿ ಇಂದು ಇರಬೇಕಿತ್ತು ಎಂದು ಮಟ್ಟು ಹೇಳಿದರು.
ಗೌರಿಯನ್ನು ನಾವೆಲ್ಲರೂ ಮರೆಯುವ ದಿನ ಬರಬೇಕೆಂದರೆ ಸಮಾನತೆ, ಸ್ವಾತಂತ್ರ ಎಲ್ಲರಿಗೂ ಸಿಗಬೇಕು. ಗೌರಿ ಲಂಕೇಶ್ ಮಾತ್ರವಲ್ಲದೆ ಬುದ್ಧ, ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ಎಲ್ಲ ಮಹನೀಯರನ್ನು ಮರೆಯಬೇಕೆಂದರೆ ಸಮಾನತೆ ಪ್ರತಿಯೊಬ್ಬರಿಗೂ ಸಿಗಬೇಕು. ವರ್ಷದಿಂದ ವರ್ಷಕ್ಕೆ ಗೌರಿ ಲಂಕೇಶ್ ಹೆಚ್ಚು ನೆನಪಾಗುತ್ತಾರೆ ಎಂದು ಸ್ಮರಿಸಿದರು.
ವೈಟ್ ಕಾಲರ್ ಅಪರಾಧ ಹೆಚ್ಚಾಗಿವೆ
ಚುನಾವಣಾ ಅಕ್ರಮದ ಬಗ್ಗೆ ಮಾತನಾಡಿದ ದಿನೇಶ್ ಅಮಿನ್ ಮಟ್ಟು, ಚುನಾವಣೆ ಅವ್ಯವಸ್ಥೆ ಹಿಂದಿನಿಂದಲೂ ನಡೆಯುತ್ತಿದೆ. ಇತ್ತೀಚಿನ ಚುನಾವಣೆಗಳಲ್ಲಿ ತಾಂತ್ರಿಕತೆ ಬಳಸಿಕೊಂಡು ಮಾಡುವ ವೈಟ್ ಕಾಲರ್ ಅಪರಾಧಗಳು ಹೆಚ್ಚಾಗಿವೆ. ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಮತಗಟ್ಟೆ ಕಳವಿನಂಥ ಕೃತ್ಯಗಳು ನಡೆಯುತ್ತಿದ್ದವು. ಆದರೆ ಬಿಜೆಪಿ ಸರ್ಕಾರ ಬಂದಾಗಿನಿಂದಲೂ ತಂತ್ರಜ್ಞಾನ ಬಳಸಿಕೊಂಡು ನಡೆಯುವ ಅಕ್ರಮಗಳು ಹೆಚ್ಚಾಗಿವೆ ಎಂದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ-ಕ್ಸಿ-ಪುಟಿನ್ ಭೇಟಿ: ಅಮೆರಿಕ ವಿರುದ್ಧ ಪ್ರಬಲ ಗುಂಪು ರಚನೆ ಸಾಧ್ಯವೇ?
ಇಂದು ದೇಶದಲ್ಲಿ ಚುನಾಯಿತರಾಗುವ ಶೇ.90 ರಷ್ಟು ಜನಪ್ರತಿನಿಧಿಗಳು ಅತ್ಯಾಚಾರಿಗಳು. ಕಳ್ಳರು, ಮೋಸಗಾರರೆ ಆಗಿದ್ದಾರೆ. ಕಾಂಗ್ರೆಸ್ ಪಕ್ಷ ಒಳಗೊಂಡು ಎಲ್ಲ ಪಕ್ಷದಲ್ಲೂ ಅಪರಾಧಿಗಳಿದ್ದಾರೆ. ಅಲ್ಲದೆ ಸ್ಪರ್ಧಿಸುವ ಬಹುತೇಕರು ಕೋಟ್ಯಾಧಿಪಧಿಗಳಾಗಿದ್ದಾರೆ. ಕಮ್ಯುನಿಸ್ಟ್ ಪಕ್ಷ ಹೊರತುಪಡಿಸಿ ಉಳಿದ ಪಕ್ಷಗಳು ಜಾತಿ, ದುಡ್ಡಿನ ಬೆಂಬಲ ಇರದಿದ್ದರೆ ಚುನಾವಣೆಯಲ್ಲಿ ಟಿಕೆಟ್ ಕೂಡ ನೀಡುವುದಿಲ್ಲ ಎಂದು ಹೇಳಿದರು.
ಚುನಾವಣೆಗಳ ಸುಧಾರಣೆಗಾಗಿ 1974ರ ತಾರ್‌ಕುಂಡೆ ಸಮಿತಿ ಒಳಗೊಂಡು ಹಲವು ಸಮಿತಿಗಳು ರಚನೆಯಾಗಿವೆ. ಆದರೆ ಚುನಾವಣಾ ಸುಧಾರಣೆಗಾಗಿ ಹೆಚ್ಚು ಕೆಲಸ ಮಾಡಿರುವುದು 2002 ರಲ್ಲಿ ರಚನೆಯಾದ ‘ಎಡಿಆರ್’ ಸಂಸ್ಥೆ. ವಿಧಾನಸಭೆ ಹಾಗೂ ಲೋಕಸಭೆಯ ಜನಪ್ರತಿನಿಧಿಗಳು ತಮ್ಮ ಆಸ್ತಿಯನ್ನು ಬಹಿರಂಗಪಡಿಸಬೇಕೆಂದು ಹೋರಾಟ ಮಾಡಿ ಗೆಲುವು ಕಂಡಿದ್ದು ‘ಎಡಿಆರ್’ ಸಂಸ್ಥೆ. ಅಲ್ಲದೆ ಚುನಾವಣೆಗಳಲ್ಲಿ ಅಪರಾಧವೆಸಗುವವರನ್ನು ಶಾಶ್ವತವಾಗಿ ಸ್ಪರ್ಧಿಸದಂತೆ ಮಾಡುವ ನಿಯಮ ರೂಪಿಸಲು ಈ ಸಂಸ್ಥೆ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.
ಇವಿಎಂ ಬಗ್ಗೆ ಬಿಜೆಪಿಯವರಿಗೆ ನಂಬಿಕೆಯಿರಲಿಲ್ಲ. ಈ ಬಗ್ಗೆ ಲಾಲ್‌ಕೃಷ್ಣ ಅದ್ವಾನಿ, ಭಾರತದ ತಂತ್ರಜ್ಞಾನದ ಪಿತಾಮಹ ಸ್ಯಾಮ್ ಪಿತ್ರೋಡಾ ಸೇರಿದಂತೆ ಹಲವರು ಅನುಮಾನ ವ್ಯಕ್ತಪಡಿಸಿದರು. ಈಗ ಇವಿಎಂಗಳ ಜೊತೆಗೆ ಎಸ್‌ಐಆರ್ ಸೇರಿಕೊಂಡಿದೆ. ಜಾತಿ, ದುಡ್ಡು ಬೆಂಬಲವಿಲ್ಲದ ಒಬ್ಬ ಸಾಮಾನ್ಯ ವ್ಯಕ್ತಿ ಚುನಾವಣೆಯಲ್ಲಿ ನಿಂತು ಗೆಲ್ಲಬೇಕಾದರೆ ಚುನಾವಣಾ ವ್ಯವಸ್ಥೆ ಸುಧಾರಣೆಯಾಗಬೇಕು. ಈ ಬಗ್ಗೆ ಕಾಂಗ್ರೆಸ್ ಒಳಗೊಂಡಂತೆ ಎಲ್ಲ ಪಕ್ಷಗಳು ಮಾತನಾಡಿ ಒತ್ತಡ ಹಾಕಬೇಕು ಎಂದು ದಿನೇಶ್ ಅಮಿನ್ ಮಟ್ಟು ಒತ್ತಾಯಿಸಿದರು