ದೆಹಲಿ ರಾಷ್ಟ್ರೀಯ ನಾಟಕ ಶಾಲೆ (NSD)ಯ ಸರ್ವಾಧಿಕಾರಿ ಧೋರಣೆಯಿಂದಾಗಿ ಕರ್ನಾಟಕದ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ನಾಟಕ ಶಾಲೆ (NSD Bangalore Chapter) ನಲುಗುತ್ತಿದ್ದು, ಅದರ ವಿರುದ್ದ ಬೆಂಗಳೂರು NSDಯ ಹಳೆ ವಿದ್ಯಾರ್ಥಿಗಳು ನಾಟಕದ ಮೂಲಕವೇ ಪ್ರತಿರೋಧ ತೋರಲಿದ್ದಾರೆ.
“ಕೇಂದ್ರದ ಹಳೆಯ ವಿದ್ಯಾರ್ಥಿಗಳು NSD ಬೆಂಗಳೂರು ಕೇಂದ್ರದ ಕ್ಯಾಂಪಸ್ಸಿನಲ್ಲಿರುವ ಯು.ಆರ್.ಅನಂತಮೂರ್ತಿ, ಜಿ.ಎಸ್.ಶಿವರುದ್ರಪ್ಪ ಮತ್ತು ಸಿದ್ದಲಿಂಗಯ್ಯನವರ ಸಮಾಧಿಯ ಎದುರು ಫೆ.9ರಂದು ಸಂಜೆ 7ಕ್ಕೆ ‘ಡೋರ್ ನಂ.8’ ನಾಟಕ ಪ್ರದರ್ಶನವನ್ನು ಮಾಡುತ್ತಿದ್ದಾರೆ” ಎಂದು ನಿರ್ದೇಶಕ ನಿರಂಜನ ಖಾಲಿಕೊಡ ತಿಳಿಸಿದ್ದಾರೆ. ಇದು ಕರ್ನಾಟಕದ ಸಾಂಸ್ಕೃತಿಕ ರಂಗದಲ್ಲಿ ನಡೆಯುತ್ತಿರುವ ಮೊದಲ ರಂಗ ಪ್ರತಿರೋಧದ ನಾಟಕ ಎಂದೆಣಿಸಿಕೊಳ್ಳಲಿದೆ.
“ಕರ್ನಾಟಕದ ಹಿರಿಯ ರಂಗಕರ್ಮಿಗಳ ಪ್ರಾಮಾಣಿಕ ಪ್ರಯತ್ನಗಳಿಂದ ಬೆಂಗಳೂರಿಗೆ NSD ಬಂತು. ಕಳೆದ 10 ವರ್ಷಗಳಲ್ಲಿ 9 ಬ್ಯಾಚ್ ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆದಿದ್ದಾರೆ. ಆದರೆ ಈಗ 3 ವರ್ಷಗಳಿಂದ, ದೆಹಲಿ ಎನ್ ಎಸ್ ಡಿಯು ಬೆಂಗಳೂರು ಕೇಂದ್ರದ ನಿರ್ದೇಶಕರನ್ನು ಗುಮಾಸ್ತರಂತೆ ನಡೆಸಿಕೊಳ್ಳುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಕಟ್ಟಿಕೊಂಡಿರುವ ನಾಟಕವನ್ನು 09 ಫೆಬ್ರವರಿ 2025ರಂದು ಯಾವುದೇ ಸಂಭಾವನೆ ಇಲ್ಲದೆ, ಟಿಕೆಟ್ ಇಡದೆ, ಹಳೆಯ ವಿದ್ಯಾರ್ಥಿಗಳ ಸಂಘದ ಮೂಲಕ ಬೆಂಗಳೂರು ಕೇಂದ್ರದ ತಾಲೀಮು ಕೊಠಡಿಯಲ್ಲಿ ಮಾಡಿಸಲು ನಿರ್ಧರಿಸಲಾಗಿತ್ತು. ಇದಕ್ಕೆ ಬೆಂಗಳೂರು ಕೇಂದ್ರದ ನಿರ್ದೇಶಕರ ಒಪ್ಪಿಗೆ ಇದ್ದರೂ ಬೆಂಗಳೂರು ಕೇಂದ್ರದ ತಾಲೀಮು ಕೊಠಡಿಯನ್ನು ಬಳಸಿಕೊಳ್ಳಲು ದೆಹಲಿ NSDಯ ಅನುಮತಿ ಕೇಳಬೇಕಾದ ಅನಿವಾರ್ಯತೆ ಇದೆ. ಅಷ್ಟೆ ಅಲ್ಲ, ಬೆಂಗಳೂರು ರಾಷ್ಟ್ರೀಯ ನಾಟಕ ಶಾಲಾ ಕೇಂದ್ರಕ್ಕೆ ಒಬ್ಬ ವಾರ್ಡನ್ ಕೂಡ ಇಲ್ಲ.
ಬೆಂಗಳೂರು ಕೇಂದ್ರದ ಪ್ರಸ್ತುತ ನಿರ್ದೇಶಕರು ಸಂಸಾರ ಸಮೇತರಾಗಿ ಕೇಂದ್ರದ ವಿದ್ಯಾರ್ಥಿಗಳ ಹಾಸ್ಟೆಲ್ ನಲ್ಲಿ ವಸತಿ ಮಾಡಿಕೊಂಡಿದ್ದಾರೆ. ತರಕಾರಿ, ಕಿರಾಣಿ, ನಾಟಕದ ಕಾಸ್ಟ್ಯೂಮ್ಸ್ ಯಾವುದನ್ನೇ ಆಗಲಿ ಕೊಳ್ಳಲು ನಿರ್ದೇಶಕರೇ ಮಾರುಕಟ್ಟೆಗೆ ಹೋಗಿ ತರಬೇಕಾದ ಸ್ಥಿತಿ ಇದೆ. ಹೊರಗಿನ ನಿರ್ದೇಶಕರು ಬಂದು ನಿರ್ದೇಶನ ಮಾಡಿದರೆ, ಬಜೆಟ್ ಮೀರಿ ಹೋಗುತ್ತದೆ ಎಂಬ ಕಾರಣಕ್ಕಾಗಿ ಪ್ರತಿ ವರ್ಷ ಬೆಂಗಳೂರು ಕೇಂದ್ರದ ನಿರ್ದೇಶಕರೇ ವರ್ಷದ ಕೊನೆಯ ಮೇಜರ್ ಪ್ರೊಡಕ್ಷನ್ ನಾಟಕವನ್ನು ನಿರ್ದೇಶಿಸುತ್ತಾ ಬಂದಿದ್ದಾರೆ.