ತಮ್ಮ ಹೆಸರು ದುರುಪಯೋಗಪಡಿಸಿಕೊಂಡು ಹಲವು ಜನರಿಗೆ ಚಿನ್ನಾಭರಣ ಹಾಗೂ ಹಣ ವಂಚನೆ ಮಾಡುತ್ತಿರುವ ಐಶ್ವರ್ಯಾ ಗೌಡ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ಸಂಸದ ಡಿ ಕೆ ಸುರೇಶ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಡಿ ಕೆ ಸುರೇಶ್ ಅವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಐಶ್ವರ್ಯಾ ಗೌಡ ಉರುಫ್ ನವ್ಯಶ್ರೀ ಎಂಬುವವರು ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡು ಹಲವಾರು ಜನರಿಗೆ ಚಿನ್ನಾಭರಣ ಹಾಗೂ ಹಣ ವಂಚನೆ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗುತ್ತಿವೆ.
ಹೀಗಾಗಿ, ನನ್ನ ಹೆಸರು ಬಳಸಿಕೊಂಡು ವಂಚನೆ ನಡೆಸಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಜನರಿಗೆ ಇಂತಹ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ದೂರು ಪತ್ರದಲ್ಲಿ ಸುರೇಶ್ ಅವರು ಮನವಿ ಮಾಡಿದ್ದಾರೆ.
ಮಂಡ್ಯದ ಉದ್ಯಮಿಗೂ ಮೋಸ
ಆರೋಪಿ ಸ್ಥಾನದಲ್ಲಿರುವ ಐಶ್ವರ್ಯಗೌಡ ಬಿಲ್ಡರ್, ಚಿನ್ನದ ವ್ಯಾಪಾರಿ ಕಮ್ ಕಾಂಗ್ರೆಸ್ ಮುಖಂಡನಿಗೂ ಸಹ ಕೋಟ್ಯಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಆ ಉದ್ಯಮಿ ತನ್ನ ಹೆಸರು ಬಹಿರಂಗಪಡಿಸಬೇಡಿ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿರುವ ವಾಸವಿರುವ ಆತ ಮೈಸೂರು, ಮಂಡ್ಯ, ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಾ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾನೆ. ಐಶ್ವರ್ಯ ಗೌಡ ಈ ವ್ಯಕ್ತಿಯಿಂದ 6.5 ಕೋಟಿ ಹಣ ಹಾಗೂ ಒಂದಷ್ಟು ಚಿನ್ನವನ್ನು ಪಡೆದಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿಗೆ ಸಂಸದೀಯ ವ್ಯವಸ್ಥೆಯ ಇತಿಹಾಸ ತಿಳಿಸುವ ತುರ್ತು ಅಗತ್ಯವಿದೆ
ಒಂದೂವರೆ ವರ್ಷದ ಹಿಂದೆ ಈ ಉದ್ಯಮಿ ಕಮ್ ಕಾಂಗ್ರೆಸ್ ಮುಖಂಡನಿಗೆ ಐಶ್ವರ್ಯ ಗೌಡ ಪರಿಚಯವಾಗಿದ್ದಾರೆ. ಐಷಾರಾಮಿ ಕಾರು, ಬೌನ್ಸರ್, ಗನ್‌ಮ್ಯಾನ್ ಜೊತೆಗೆ ಬಂದು ಆ ಉದ್ಯಮಿಯನ್ನು ಪರಿಚಯ ಮಾಡಿಕೊಂಡಿದ್ದಾರೆ. ನಂತರ ಇವರಿಬ್ಬರು ಸೇರಿ ರಿಯಲ್ ಎಸ್ಟೇಟ್ ವ್ಯವಹಾರವನ್ನು ಮಾಡಿದ್ದಾರೆ. ಆರಂಭದಲ್ಲಿ ಎಲ್ಲ ವ್ಯವಹಾರ ಸರಿಯಾಗುವಂತೆ ಈ ವಂಚಕಿ ಐಶ್ವರ್ಯ ಗೌಡ ಮಾಡಿದ್ದಾರೆ.
ಇದಾದ ಬಳಿಕ ಆ ವ್ಯಕ್ತಿಯಿಂದ ಚಿನ್ನ ಹಾಗೂ ನಗದು ರೂಪದಲ್ಲಿ 6.5 ಕೋಟಿ ರೂ. ಹಣವನ್ನು ಪಡೆದಿದ್ದಾರೆ. ಬಳಿಕ ಹಣವನ್ನು ಆತ ವಾಪಸ್ ಕೇಳಿದರೆ ಇಂದು, ನಾಳೆ ಎಂದು ಕಥೆ ಹೇಳುತ್ತಾ ಬಂದಿದ್ದಾರೆ ಆಗ ರಾಜ್ಯದ ಪ್ರಭಾವಿ ರಾಜಕಾರಣಿ ಮಧ್ಯಸ್ಥಿಕೆ ವಹಿಸಿ ಸಮಯ ನೀಡುವಂತೆ ಹೇಳಿದ್ದಾರೆ. ಇದೀಗ ಈಕೆಯ 9 ಕೋಟಿ ಗೋಲ್ಡ್ ಮೋಸದ ಕತೆ ಹೊರಬಂದ ಬಳಿಕ ಕಾಂಗ್ರೆಸ್ ಮುಖಂಡನಿಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಹೀಗಾಗಿ ಆತ ಐಶ್ವರ್ಯ ಗೌಡ ಮೇಲೆ ಮಂಡ್ಯ ಅಥವಾ ಬೆಂಗಳೂರಿನಲ್ಲಿ ದೂರು ದಾಖಲಿಸಲು ದಾಖಲೆ ಸಮೇತ ಸಿದ್ಧರಾಗಿದ್ದಾರೆ ಎನ್ನಲಾಗಿದೆ.
