ಹೊಟ್ಟೆಪಾಡಿಗಾಗಿ ದಿನಗೂಲಿ ಅರಸಿಕೊಂಡು, ಗಂಟು ಮೂಟೆ ಕಟ್ಟಿಕೊಂಡು ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗದಿಂದ ಜನರು ರಾಜ್ಯ ರಾಜಧಾನಿ ಬೆಂಗಳೂರಿಗೆ ಬರುತ್ತಾರೆ. ದಿನನಿತ್ಯದ ಕೂಲಿ ಮಾಡಿಕೊಂಡು ನಗರದಲ್ಲಿಯೇ ಕುಟುಂಬದ ಜತೆಗೆ ನೆಲೆಸಿದ್ದಾರೆ. ಮೂಲಭೂತ ಸೌಲಭ್ಯಗಳಿಲ್ಲದೆಯೇ ಗುಡಿಸಲು ಹಾಕಿಕೊಂಡು ಸಿಗುವ ದಿನಗೂಲಿಯಲ್ಲಿ ಜೀವನ ದೂಡುತ್ತಿದ್ದಾರೆ. ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಸಮಸ್ಯೆಗಳಲ್ಲಿರುವ ಜನರಿಗೆ ಸಹಾಯಹಸ್ತ ಚಾಚಿ, ಅವರ ಕಷ್ಟಗಳಿಗೆ ನೆರವಾಗಬೇಕಿದ್ದ ರಾಜಕಾರಣಿಗಳು ಬಡ ಜನರಿಗೆ ಮತ್ತಷ್ಟು ಕಷ್ಟ ನೀಡುತ್ತಿದ್ದಾರೆ. ಅಂಥದೊಂದು ಕೃತ್ಯವನ್ನು ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಎಸಗಿದ್ದಾರೆ. ಸುಮಾರು 70ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಬದುಕನ್ನು ಬೀದಿಪಾಲು ಮಾಡಿದ್ದಾರೆ.
ಈಗಾಗಲೇ ಜಾತಿನಿಂದನೆ, ಅತ್ಯಾಚಾರ, ಹನಿಟ್ರ್ಯಾಪ್, ಭ್ರಷ್ಟಾಚಾರ ಸೇರಿ ಹಲವು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಶಾಸಕ ಮುನಿರತ್ನ ಜಾಮೀನು ಪಡೆದು ಜೈಲಿನಿಂದ ಹೊರಬಂದ ಕೂಡಲೇ ಬೆಂಗಳೂರಿಗೆ ಕೆಲಸ ಅರಸಿ ಬಂದು ಜೀವನ ನಡೆಸುತ್ತಿರುವ ಅಮಾಯಕ ಜನರ ಮೇಲೆ ತನ್ನ ದರ್ಪವನ್ನ ತೋರಿದ್ದಾರೆ.
ಜನವರಿ 19ನೇ ತಾರೀಖು ಮಧ್ಯಾಹ್ನ 12 ಗಂಟೆಗೆ ಪೀಣ್ಯ ಪ್ರಥಮ ದರ್ಜೆ ಕಾಲೇಜು ಬಳಿಯಿರುವ ಅಕ್ಕಮಹಾದೇವಿ ಸ್ಲಂಗೆ ಏಕಾಏಕಿ ಮುನಿರತ್ನ ಮತ್ತು ಆತನ ಸಹಚರರಾದ ವಸಂತ್ ಕುಮಾರ್, ಚನ್ನಕೇಶವ, ನವೀನ್, ರಾಮ, ಕಿಟ್ಟಿ, ಗಂಗಾ ಎಂಬುವವರು ನುಗ್ಗಿದ್ದಾರೆ. ಜೆಸಿಬಿಗಳನ್ನು ತಂದು ಅಲ್ಲಿದ್ದ ಬಡ ಕೂಲಿ ಕಾರ್ಮಿಕರ ಸುಮಾರು 70 ಗುಡಿಸಲುಗಳನ್ನು ಧ್ವಂಸಗೊಳಿಸಿದ್ದಾರೆ.
ಗುಡಿಸಲುಗಳಲ್ಲಿದ್ದ ಜನರನ್ನು ಹೊರಹೋಗುವಂತೆ ಸೂಚಿಸದೆಯೇ, ಅವರು ಗುಡಿಸಲಿನಲ್ಲಿದ್ದಾಗಲೇ ಅವುಗಳನ್ನು ಉರುಳಿಸಿದ್ದಾರೆ. ತಮ್ಮ ಗುಡಿಸಲುಗಳನ್ನು ಧ್ವಂಸಗೊಳಿಸುತ್ತಿರುವಾಗ ಜೆಸಿಬಿ ಶಬ್ದ ಕೇಳಿ ಮನೆಯಿಂದ ಹೊರಬಂದ ಹೆಣ್ಣುಮಕ್ಕಳು, ಬಾಣಂತಿಯರು, ಮಕ್ಕಳು ಮುನಿರತ್ನ ಬಳಿ ಪರಿಯಾಗಿ ಬೇಡಿಕೊಂಡಿದ್ದಾರೆ. ಮನೆಗಳನ್ನ ಕೆಡವಬೇಡಿ ಎಂದು ಮುನಿರತ್ನ ಕೈ ಕಾಲು ಹಿಡಿದಿದ್ದಾರೆ. ಆದರೆ, ಬಳಿ ಬಂದ ಜನರನ್ನು ಕಾಲಿಂದ ಒದ್ದು ಮುನಿರತ್ನ ದರ್ಪ ತೋರಿದ್ದಾರೆ. ಕ್ರೂರತ್ವವನ್ನ ಮೆರೆದಿದ್ದಾರೆ.
ಗುಡಿಸಲುಗಳನ್ನು ಕಳೆದುಕೊಂಡ ಸ್ಲಂ ಜನರ ಸ್ಥಿತಿ ಈಗ ನಿಜಕ್ಕೂ ಚಿಂತಾಜನಕವಾಗಿದೆ. ಸ್ಲಂನಲ್ಲಿರುವ 70 ಮನೆಗಳನ್ನ ಜೆಸಿಬಿ ಮೂಲಕ ಸಂಪೂರ್ಣವಾಗಿ ಕೆಡವಲಾಗಿದೆ. ತರಕಾರಿ, ರೊಟ್ಟಿ, ಅನ್ನ ಎಲ್ಲ ನೆಲಸಮವಾಗಿದೆ. ಸೂರಿಲ್ಲದೇ ಮಹಿಳೆಯರು, ಬಾಣಂತಿಯರು, ಗರ್ಭಿಣಿಯರು, ಮಕ್ಕಳು ಬೀದಿಪಾಲಾಗಿದ್ದಾರೆ. ಆಹಾರ ಸಾಮಗ್ರಿಗಳನ್ನೂ ಕಳೆದುಕೊಂಡು ಹೊಟ್ಟೆಗೆ ಹಿಟ್ಟಿಲ್ಲದೆ ಪರದಾಡುತ್ತಿದ್ದಾರೆ. ತಮ್ಮ ಪರಿಸ್ಥಿತಿಯ ಬಗ್ಗೆ ಅರಿವಿಲ್ಲದ ಪುಟ್ಟ ಮಕ್ಕಳು ತಮ್ಮ ಆಟಿಕೆಗಳನ್ನು ರಸ್ತೆಯಲ್ಲಿ ಹಾಕಿಕೊಂಡು ಆಟವಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕುಸಿಯುತ್ತಿರುವ ಸಾಮ್ರಾಜ್ಯದ ಹೊಸ ಅಧಿಪತಿ ಡೊನಾಲ್ಡ್ ಟ್ರಂಪ್
ಶಾಸಕ ಮುನಿರತ್ನ ತಮ್ಮ ರಾಜಕೀಯ ಪ್ರಭಾವ ಬಳಸಿ ಕೂಲಿ ಕಾರ್ಮಿಕರ ಮೇಲೆ ದರ್ಪ ತೋರಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು. ನಮಗೆ ನ್ಯಾಯ ಬೇಕು. ಮನೆಯಿಲ್ಲದೆ ಬೀದಿಯಲ್ಲಿ ಬದುಕುವಂತಾಗಿದೆ. ರಾತ್ರಿ ವೇಳೆ ಚಳಿ-ಗಾಳಿಯಲ್ಲಿ ಮಲಗಲು ಪರದಾಡುವ ಪರಿಸ್ಥಿತಿ ಎದುರಾಗಿದೆ. ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಜೀವನ ನಡೆಸುವುದು ಹೇಗೆ? ಎಲ್ಲಿ ಬದುಕುವುದು. ಬದುಕು ಮತ್ತಷ್ಟು ದುಸ್ಥರವಾಗಿದೆ ಎಂದು ಗುಡಿಸಲುಗಳನ್ನು ಕಳೆದುಕೊಂಡ ಜನರು ಅಳಲು ತೋಡಿಕೊಂಡಿದ್ದಾರೆ.
ಸ್ಲಂ ಜನರು ಮುನಿರತ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಚುನಾವಣೆ ಸಮಯದಲ್ಲಿ ನಾವೇ ಮುಂದೆ ನಿಂತು ವೋಟ್ ಹಾಕಿ ಮುನಿರತ್ನ ಅವರನ್ನ ಗೆಲ್ಲಿಸಿದ್ದೇವೆ. ಈಗ ಗೆಲ್ಲಿಸಿದ್ದಕ್ಕೆ ನಮ್ಮನ್ನೇ ಮನೆಯಿಂದ ಹೊರಹಾಕಿದ್ದಾರೆ” ಎಂದು ಸ್ಥಳೀಯರು ಅಳಲನ್ನು ತೋಡಿಕೊಂಡಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಹನುಮಂತಿ, “ನಾನು ಮೂಲತಃ ಕಲಬುರಗಿ ಜಿಲ್ಲೆಯ ಶಾಂತಪೂರದವಳು. ಕಳೆದ ಹತ್ತು ವರ್ಷದಿಂದ ಬೆಂಗಳೂರಿನಲ್ಲಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ನಾವು ಕೆಲಸಕ್ಕೆ ಹೋದಾಗ ಮಕ್ಕಳು ಮನೆಯಲ್ಲಿ ಇದ್ದವು. ಮನೆಯಲ್ಲಿ ದೊಡ್ಡವರು ಇಲ್ಲದೇ, ಇರುವಾಗ ಏಕಾಏಕಿ ಸ್ಥಳಕ್ಕೆ ಬಂದ ಮುನಿರತ್ನ ನಮ್ಮ ಮನೆಗಳನ್ನ ಕೆಡವಿದ್ದಾರೆ. ಹೊಟ್ಟೆಪಾಡಿಗಾಗಿ ನಮ್ಮೂರು ಬಿಟ್ಟು ಇಲ್ಲಿಗೆ ಬಂದಿದ್ದೇವೆ. ಬಡವರಿಗೆ ಹೀಗೆ ಮಾಡುತ್ತಾರಾ? ನಮಗೆ ಹೊಲ-ಮನೆ ಇಲ್ಲ. ಮನೆ ಕೆಡವಿದ ಮೇಲೆ ಗಂಡಸಾಗಿದ್ದರೇ, ನೀನು ಇಲ್ಲಿಯೇ ಇರಬೇಕಿತ್ತು. ನಮ್ಮಿಂದನೇ ನೀನು ಗೆದ್ದಿದ್ದು, ನಮಗೆ ಹೀಗೆ ಮಾಡುತ್ತೀಯಾ. ಜನರಿಗೆ ಈ ರೀತಿ ಮಾಡಬಾರದು. ನಮ್ಮ ಜಾಗ ನಮಗೆ ಕೊಡಲಿಲ್ಲ ಅಂದರೆ, ನಿನ್ನ ಮನೆ ಎದುರು ಬಂದು ಕುಳಿತುಕೊಳ್ಳುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ದಿನ.ಕಾಮ್ ಜತೆಗೆ ಮಾತನಾಡಿದ ಮಂಜುನಾಥ್, “ನಾವು ಹುಟ್ಟಿದಾಗಿನಿಂದ ಬೆಂಗಳೂರಿನಲ್ಲಿಯೇ ಇದ್ದೇವೆ. ನಮಗೆ ಸ್ವಂತ ಮನೆಯಿಲ್ಲ. ನಮ್ಮ ವೋಟರ್ ಐಡಿ ಹಳ್ಳಿಲಿ ಇಲ್ಲ. ಬೆಂಗಳೂರು ವೋಟರ್ ಐಡಿ ಇದೆ. ಚುನಾವಣೆ ಸಮಯದಲ್ಲಿ ನಮ್ಮಿಂದ ವೋಟ್ ಹಾಕಿಸಿಕೊಳ್ಳುತ್ತಾರೆ. ಈಗ ನಮ್ಮ ಮನೆಯನ್ನೇ ಕೆಡವುತ್ತಾರೆ. ಯಾವುದಕ್ಕೋಸ್ಕರ ನಮ್ಮ ಮನೆಯನ್ನ ಇವರು ಕೆಡವುತ್ತಾರೆ. ನಾವೇನು ಕಿತ್ತುಕೊಂಡು ತಿನ್ನುತ್ತಿದ್ದೀವಾ? ಯಾಕೆ ನಾವು ಬಡವರು ಅಂತ ನಮ್ಮ ಮೇಲೆ ಇಷ್ಟೊಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ನಮಗೆ ನ್ಯಾಯ ಬೇಕು. ನ್ಯಾಯ ಸಿಗುವರೆಗೂ ನಾವು ಈ ಜಾಗವನ್ನು ಖಾಲಿ ಮಾಡುವುದಿಲ್ಲ. ಇದು ಸರ್ಕಾರಿ ಜಾಗ, ಈ ಜಾಗವನ್ನ ಖಾಲಿ ಮಾಡಿಸಿ, ಪಾರ್ಕ್ ಮಾಡುತ್ತಾರಂತೆ, ಬಡವರಿಗೆ ನೆಲೆ ಇಲ್ಲದಂತೆ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಚುನಾವಣೆ ಸಮಯದಲ್ಲಿ ಮುನಿರತ್ನ ಅವರು ಬಂದು ಕರೆಂಟ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನ ಒದಗಿಸಿಕೊಡುತ್ತೇವೆ ಎಂದು ಹೇಳಿದ್ದರು. ಆದರೆ, ಅದನ್ನ ಏನು ಮಾಡಲಿಲ್ಲ. ಅವರು ಏನೂ ಮಾಡಿಕೊಡಲಿಲ್ಲ ಅಂದರೂ ಕೂಡ ನಾವು ಚೆನ್ನಾಗಿಯೇ ಇದ್ದೀವಿ. ಬೀದಿಲಿ ಇದ್ದರೂ ಚೆನ್ನಾಗಿಯೇ ಇದ್ದೀವಿ. ಮನೆಯಲ್ಲಿ ಮಕ್ಕಳು ಇದ್ದಾಗ ಜೆಸಿಬಿ ತಂದು ಏಕಾಏಕಿ ಹೀಗೆ ಮಾಡಿದ್ದಾರೆ. ಈ ಸಮಯದಲ್ಲಿ ಮಕ್ಕಳಿಗೆ ಏನು ಆಗಿಲ್ಲ. ಅದೇ, ನಮ್ಮ ಪುಣ್ಯ. ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಜನ ಸೂಪರ್ ಅನ್ನುತ್ತಾರೆ. ಆದರೆ, ಈಗ ನಮಗೆ ಯಾರೂ ಸಪೋರ್ಟ್ ಮಾಡುತ್ತಿಲ್ಲ. ಇವರಿಗೆ ಪಾರ್ಕ್ ಮುಖ್ಯನಾ, ಬಡವರು ಮುಖ್ಯನಾ?” ಎಂದು ಶಿವ ಪ್ರಶ್ನಿಸಿದ್ದಾರೆ.
ಲಕ್ಷ್ಮಣ ಮಾತನಾಡಿ, “ನಾವು ಇಲ್ಲಿಗೆ ದುಡಿದುಕೊಂಡು ತಿನ್ನೋಕೆ ಬಂದಿದ್ದೀವಿ. ನಾವು ಕೆಲಸಕ್ಕೆ ಹೋದಾಗ ಈ ರೀತಿ ಮಾಡಿದ್ದಾರೆ. ನಮ್ಮ ಮನೆಯಲ್ಲಿ 60 ರಿಂದ 70 ಸಾವಿರ ಹಣ ಇತ್ತು. 5 ಗ್ರಾಂ ಚಿನ್ನ ಇತ್ತು. ಅದು ಕಾಣಿಸುತ್ತಿಲ್ಲ. ಮಕ್ಕಳನ್ನ ಕಟ್ಟಿಕೊಂಡು ಈಗ ಎಲ್ಲಿ ಹೋಗಬೇಕು. ಹೇಗೆ ಜೀವನ ಮಾಡಬೇಕು ಎಂಬುದು ತಿಳಿಯುತ್ತಿಲ್ಲ” ಎಂದು ಅಳಲನ್ನ ತೋಡಿಕೊಂಡಿದ್ದಾರೆ.
“ನಮಗೆ ಮನೆ ಖಾಲಿ ಮಾಡು ಎಂದು ಹೇಳಿಲ್ಲ. ಸಮಯ ಕೂಡ ಕೊಟ್ಟಿಲ್ಲ. ಏಕಾಏಕಿ, ದುಡ್ಡು ರೇಷನ್ ಎಲ್ಲವನ್ನು ಮಣ್ಣುಪಾಲು ಮಾಡಿದ್ದಾರೆ. ಎರಡು ದಿನ ಆಯಿತು ಇಲ್ಲೇ ಬೀದಿಲಿ ಬಿದ್ದಿದ್ದಿವಿ. ಮಲಗೋದಕ್ಕೆ ಜಾಗ ಇಲ್ಲ, ಈ ಚಳಿಯಲ್ಲಿ ಟೆಂಟ್‌ನಲ್ಲಿಯೇ ಮಲಗಿದ್ದೇವೆ. ಅಡುಗೆ ಮಾಡಿಕೊಂಡು ತಿನ್ನಲು ಪಾತ್ರೆ ಇಲ್ಲ. ಸ್ನಾನ ಮಾಡಿಲ್ಲ ಎರಡು ದಿನ ಆಯಿತು. ನಮಗೆ ಬಟ್ಟೆಯೂ ಇಲ್ಲ. ಪಾತ್ರೆ ಪಗಡ ಸೇರಿದಂತೆ ನಮ್ಮ ಪ್ರತಿಯೊಂದು ವಸ್ತುಗಳು ಮಣ್ಣು ಪಾಲಾಗಿವೆ” ಎಂದು ಐಯಮ್ಮ ಹೇಳಿದರು.
ಇದನ್ನೂ ಓದಿ ದಿನಗೂಲಿ ಕಾರ್ಮಿಕರ ಮನೆ ನೆಲಸಮ ಆರೋಪ: ಶಾಸಕ ಮುನಿರತ್ನ ವಿರುದ್ದ ಮತ್ತೊಂದು ಎಫ್‌ಐಆರ್
ಶಾಸಕನಾಗಿರುವ ಮುನಿರತ್ನ ಜನಪ್ರತಿನಿಧಿಯಾಗಿ ಜನರ ರಕ್ಷಣೆ ಮಾಡಬೇಕಾದವರೇ ಮುಂದೆ ನಿಂತು 70 ಕುಟುಂಬಗಳ ಬದುಕನ್ನು ಬೀದಿಗೆ ತಂದಿದ್ದಾರೆ. ಇದು ನಿಜಕ್ಕೂ ಶೋಚನೀಯವಾಗಿದೆ. ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ವಲಸೆ ಬಂದು ಚಿಕ್ಕದಾಗಿ ಬದುಕು ಕಟ್ಟಿಕೊಂಡಿದ್ದ ಜನರು ಇದೀಗ ಇದ್ದ ಶೆಡ್ ಮನೆಯನ್ನೂ ಕೂಡ ಕಳೆದುಕೊಂಡು ಕಣ್ಣಿರಿಡುತ್ತಿದ್ದಾರೆ. ಮುನಿರತ್ನಗೆ ಶಪಿಸುತ್ತಿದ್ದಾರೆ.