“ಚನ್ನರಾಯಪಟ್ಟಣ ರೈತ ಹೋರಾಟದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಈ ನಾಡಿನ ಭವಿಷ್ಯ ಕಟ್ಟಿಕೊಡುವ ರೈತರ ಪರ ಹೋರಾಟ ನಡೀತಿದೆ. ಈ ಸಮಸ್ಯೆ ಹುಟ್ಟು ಹಾಕಿರುವ ಸರ್ಕಾರ ಸಮಸ್ಯೆಯನ್ನು ಪರಿಹಾರ ಮಾಡುವ ಬದಲು ಸಮಸ್ಯೆಯನ್ನ ಹೆಚ್ಚು ಮಾಡ್ತಿದ್ದಾರೆ” ಎಂದು ಹಿರಿಯ ಪತ್ರಕರ್ತ ಚಿಂತಕ ಇಂದೂಧರ ಹೊನ್ನಾಪುರ ಆರೋಪಿಸಿದರು.
ಫ್ರೀಡಂ ಪಾರ್ಕ್‌ನಲ್ಲಿ ಆರಂಭಗೊಂಡ ಚನ್ನರಾಯಪಟ್ಟಣದ ರೈತರ ಅಹೋರಾತ್ರಿ ಧರಣಿ ಉದ್ದೇಶಿಸಿ ಅವರು ಮಾತನಾಡಿದರು. “ಇವತ್ತು ರೈತರ ವಿರುದ್ಧ ನಿಂತಿರುವ ಅದೇ ಸಿದ್ದರಾಮಯ್ಯ ಅವರು ಅಂದು ರೈತರ ಪರ ಮಾತಾಡಿದ್ರು. ಪದೇ ಪದೇ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೀವಿ ಅಂತಾ ಹೇಳ್ತಿದ್ದೀರಿ, ಈ ಮಾತನ್ನು ಉಳಿಸಿಕೊಳ್ಳಿ. ಕಾರ್ಪೊರೇಟ್ ಗಳ ಪರ ನಿಂತು, ಸಾವಿರಾರು ಎಕರೆ ರೈತ ಭೂಮಿಯನ್ನ ಲಾಭಕೋರರಿಗೆ ಕೊಡಬೇಡಿ. ನೀವು ಜನಪರವಾಗಿಯೇ ಇರಿ” ಎಂದು ಹೇಳಿದರು.
“ಈ ಕಾರ್ಪೊರೇಟ್ ಸೆಕ್ಟರ್ ಎಲ್ಲಾ ನೊಂದವರನ್ನ ಬಳಸಿಕೊಳ್ತಿದೆ. ಅಭಿವೃದ್ಧಿ ಅಂದ್ರೆ ಬರೀ ಕಾರ್ಖಾನೆಗಳನ್ನು ಕಟ್ಟೋದಲ್ಲ, ಎಲ್ಲ ಜನರ ನೆಮ್ಮದಿ ಮುಖ್ಯ. ಎಲ್ಲರ ಜೊತೆ ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಅದು ಬಿಟ್ಟು ಸರ್ಕಾರ ಯಾಕೆ ಈ ದುಷ್ಟಕೂಟದ ಭಾಗವಾಗುತ್ತಿದೆ? ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಗೆ ಹೇಳ್ತಿದ್ದಾರೆ, ಕಾರ್ಪೊರೇಟ್ ಕಂಪನಿಗಳು ಒಳ್ಳೆ ಭೂಮಿಯನ್ನ ಕೇಳ್ತಾರೆ. ಅವರಿಗೆ ಅವರು ಕೇಳಿದ ಭೂಮಿ ಕೊಡಬೇಕು ಅಂತಾ. ಅವರಿಗೆ ನಾನು ಕೇಳ್ತೀನಿ, ನಾಳೆ ಕಾರ್ಪೊರೇಟ್ ಗಳು ವಿಧಾನಸೌಧ ಕೇಳಿದ್ರೆ ಕೊಡ್ತೀರಾ? ಯಾಕೆ ಮೂರ್ಖ ಹೇಳಿಕೆಗಳನ್ನ ಕೊಡ್ತಿದ್ದೀರಿ? ಇವತ್ತು ನೀವು ದುಷ್ಟಕೂಟದ ಭಾಗವಾಗಿ, ಕಾರ್ಪೊರೇಟ್ ಕಳ್ಳರ ಜೊತೆ ನಿಂತಿದ್ದೀರಿ. ನಮ್ಮನ್ನ ಉಳ್ಳವರ ಮನೆಗೆ ಜೀತಗಾರರನ್ನಾಗಿಸಬೇಡಿ, ಅವರ ಬಾಗಿಲು ಕಾಯುವ ಹಾಳುಗಳನ್ನಾಗಿಸಬೇಡಿ. ನಿಮಗೆ ಜನರ ಬಗ್ಗೆ ಕನಿಷ್ಠ ಕಾಳಜಿ ಇದ್ರೆ ಇದನ್ನು ಕೈ ಬಿಡಿ” ಎಂದು ಎಚ್ಚರಿಸಿದರು.
“ಸಿದ್ದರಾಮಯ್ಯ ಅವರೇ, ನೀವೆಲ್ಲರೂ ವಿವೇಚನೆ ಇರೋರು ಅಂತಾ ನಾವು ನಂಬಿದ್ದೇವೆ. ಈ ನೆಲ, ಜಲವನ್ನ ಉಳಿಸೋದು ಅನಿವಾರ್ಯ. ನಿಮಗೆ ಒತ್ತಡ ಇದೆ ಅಂತಾ ಗೊತ್ತು, ನೀವು ನಿಮ್ಮ ಬದ್ಧತೆಯನ್ನು ಈ ಮೂಲಕ ತೋರಿಸಬೇಕು. ಈ ಹೋರಾಟದ ಮೂಲಕ ನಾವು ಒಂದು ಎಚ್ಚರಿಕೆ ನೀಡುತ್ತಿದ್ದೇವೆ. ಎಲ್ಲಾ ಚಳವಳಿಗಳಿಗೂ ಪುನಶ್ಚೇತನ ಆಗುವಂಥ ಹೋರಾಟಗಳ ಮೊಳಕೆ ಇವತ್ತು ಇಲ್ಲಿ ಚಿಗುರೊಡೆಯುತ್ತಿದೆ. ನಿಮ್ಮೆಲ್ಲರನ್ನು ಕಿತ್ತು ಎಸೆಯುವ ಹೋರಾಟದ ಮೊಳಕೆ ಫ್ರೀಡಂ ಪಾರ್ಕಿನಲ್ಲಿ ಹುಟ್ಟುತ್ತಿದೆ. ದಲಿತ ಸಂಘಟನೆ, ಕಾರ್ಮಿಕ ಸಂಘಟನೆ, ರೈತ ಸಂಘಟನೆಗಳು ಇಲ್ಲಿ ಮೊಳಕೆ ಹೊಡೆಯುತ್ತಿವೆ. ಕರ್ನಾಟಕದ ಎಲ್ಲಾ ಚಳವಳಿಗಳು, ಕಾರ್ಮಿಕರು, ರೈತರು ಎಲ್ಲರೂ ಕರ್ನಾಟಕದ ಮೂಲೆ ಮೂಲೆಯಲ್ಲೂ ಈ ಹೋರಾಟಕ್ಕೆ ಜೊತೆಯಾಗ್ತಿದ್ದಾರೆ. ಇದು ಎಚ್ಚರಿಕೆ… ಈ ವಿಚಾರದಲ್ಲಿ ನೀವು ರೈತಪರ ನಿಲುವನ್ನು ತೆಗೆದುಕೊಳ್ಳುತ್ತೀರಿ ಎಂದು ನಾವು ನಂಬಿದ್ದೇವೆ, ಆ ನಂಬಿಕೆಯನ್ನು ಉಳಿಸಿಕೊಳ್ಳಿ. ಒಳ್ಳೆ ತೀರ್ಮಾನವನ್ನು ತೆಗೆದುಕೊಂಡು ನಮಗೆ ಇಲ್ಲಿಂದ ಮುಕ್ತಿ ಕೊಡಿ” ಎಂದರು.