ಬೆಂಗಳೂರು ನಿವಾಸಿಗಳ ಕೋರಿಕೆಯಂತೆ ನಗರದಾದ್ಯಂತ ಎಲ್ಲ ಪ್ರದೇಶಗಳಲ್ಲೂ ರೈತ ಸಂತೆ ನಡೆಸಲು ಯೋಜಿಸುತ್ತಿದ್ದೇವೆ. ಆಸಕ್ತ ಗ್ರಾಹಕರು ಮತ್ತು ನಿವಾಸಿಗಳ ಸಂಘಗಳು ನಮ್ಮನ್ನು ಸಂಪರ್ಕಿಸಿದರೆ, ಅವರ ಪ್ರದೇಶಗಳಲ್ಲಿ ಸಂತೆಗಳನ್ನು ನಡೆಸುತ್ತೇವೆ...
ರೈತರು ತಮ್ಮ ಉತ್ಪನ್ನಗಳನ್ನು ತಾವೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ನೆರವು ನೀಡಲು ಕರ್ನಾಟಕ ರಾಜ್ಯ ರೈತ ಸಂಘ (ಕೆಆರ್‌ಆರ್‌ಎಸ್) ಉತ್ಸುಕತೆಯಿಂದ ಕೆಲಸ ಮಾಡುತ್ತಿದೆ. ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ ರೈತ ಸಂತೆಗಳನ್ನು ಆಯೋಜಿಸುತ್ತಿದೆ. ರೈತರೇ ಮಳಿಗೆಗಳನ್ನು ತೆರೆದು, ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡಲು ಅವಕಾಶ ಮಾಡಿಕೊಡುತ್ತಿದೆ.
ಏಪ್ರಿಲ್ 12ರಿಂದ 14ರವರೆಗೆ, ಬೆಂಗಳೂರಿನ ರಾಜರಾಜೇಶ್ವರಿನಗರದ ಮುನಿವೆಂಕಟಯ್ಯ ಸ್ಮಾರಕ ಓಪನ್ ಏರ್ ಥಿಯೇಟರ್‌ನಲ್ಲಿ ಪ್ರಾಯೋಗಿಕವಾಗಿ ರೈತ ಸಂತೆಯನ್ನು ನಡೆಸಿದೆ. ಹಲವಾರು ರೈತರು ತಾವು ಬೆಳೆದ ತರಕಾರಿ, ಹಣ್ಣು, ಆಹಾರ ಧಾನ್ಯಗಳನ್ನು ರೈತ ಸಂತೆಯಲ್ಲಿ ಮಾರಾಟ ಮಾಡಿದ್ದಾರೆ. ರೈತ ಸಂತೆಗೆ ರೈತರು ಮತ್ತು ಬೆಂಗಳೂರು ನಿವಾಸಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಪ್ರಾಯೋಗಿಕ ರೈತ ಸಂತೆ ಯಶಸ್ಸು ಕಂಡಿದ್ದು, ಏಪ್ರಿಲ್ 26 ಮತ್ತು 27ರಂದು ಮೊದಲ ಪೂರ್ಣ ಪ್ರಮಾಣದ ರೈತ ಸಂತೆಯನ್ನು ಅದೇ ಸ್ಥಳದಲ್ಲಿ ನಡೆಸಲಿದೆ.
ಈ ರೈತ ಸಂತೆಗೆ ‘ನೇರ ಮಾರಾಟದ ಮುಲಕ ನಮ್ಮ ಹೋರಾಟ’, ‘ನಮ್ಮ ಬೆಳೆಗೆ ನಮ್ಮ ಬೆಲೆ’ ಎಂಬ ಘೋಷ ವಾಕ್ಯವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ನಗರಗಳಲ್ಲಿಯೂ ರೈತ ಸಂತೆಯನ್ನು ಆಯೋಜಿಸುವುದಾಗಿ ರೈತ ಸಂಘ ಹೇಳಿಕೊಂಡಿದೆ.
”ಕಳೆದ ವಾರ ನಡೆದ ಪ್ರಾಯೋಗಿಕ ರೈತ ಸಂತೆಯಲ್ಲಿ ಒಟ್ಟು 20 ಲಕ್ಷ ರೂ. ಮೌಲ್ಯದ ತರಕಾರಿ/ಧಾನ್ಯಗಳು ಮಾರಾಟವಾಗಿದೆ. 5,000ಕ್ಕೂ ಹೆಚ್ಚು ಜನರು ರೈತ ಸಂತೆಗೆ ಬಂದಿದ್ದು, ರೈತರ ಕೃಷಿ ಉತ್ಪನ್ನಗಳನ್ನು ಖರೀದಿಸಿದ್ದಾರೆ. ನಿರೀಕ್ಷೆಗೂ ಮೀರಿದ ಗ್ರಾಹಕರು ಸಂತೆಯಲ್ಲಿ ಭಾಗಿಯಾಗಿದ್ದು, ಜನರ ಸ್ಪಂದನೆಯನ್ನು ತೋರಿಸುತ್ತದೆ” ಎಂದು ಸಂಘಟನೆಯ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಹೇಳಿದ್ದಾರೆ.
ಗುಣಮಟ್ಟ ಮತ್ತು ತಾಜಾ ಕೃಷಿ ಉತ್ಪನ್ನಗಳನ್ನು ಗ್ರಾಹಕರು ಖರೀದಿಸಿದ್ದಾರೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಉತ್ತಮ ಆಹಾರ ಧಾನ್ಯಗಳು ದೊರೆತದ್ದು, ಗ್ರಾಹಕರಿಗೆ ಸಂತೋಷ ತಂದಿದೆ. ಅಂತೆಯೇ, ಎಪಿಎಂಸಿ ಅಥವಾ ಇತರ ಕೃಷಿ ಮಾರುಕಟ್ಟೆಗಳಿಂದ ಹೆಚ್ಚಿನ ಬೆಲೆಗೆ ರೈತರು ಕೂಡ ತಮ್ಮ ಆಹಾರ ಧಾನ್ಯಗಳನ್ನು ಮಾರಾಟ ಮಾಡಿದ್ದಾರೆ. ಪಪಾಯ ಹಣ್ಣನ್ನು ಎಪಿಎಂಸಿಯಲ್ಲಿ ಕೆ.ಜಿ ಸರಾಸರಿ 6-8 ರೂ.ಗೆ ರೈತರು ಮಾರಾಟ ಮಾಡುತ್ತಿದ್ದರು. ಅದೇ ಹಣ್ಣು ಗ್ರಾಹಕರಿಗೆ 25-30 ರೂ.ಗೆ ಮಾರಾಟವಾಗುತ್ತಿದೆ. 8 ರೂ.ನಿಂದ 25 ರೂ. ನಡುವಿನ ಮೊತ್ತವು ಮಧ್ಯವರ್ತಿಗಳ ಪಾಲಾಗುತ್ತಿತ್ತು. ಈಗ, ರೈತ ಸಂತೆಯಲ್ಲಿ ರೈತರೇ ನೇರವಾಗಿ ಪರಂಗಿ ಹಣ್ಣನ್ನು 20 ರೂ.ಗೆ ಮಾರಾಟ ಮಾಡಿದ್ದಾರೆ. ಇದರಿಂದ, ರೈತರಿಗೂ-ಗ್ರಾಹಕರಿಗೂ ಲಾಭವಾಗಿದೆ.
ಸಂತೆಯಲ್ಲಿ ರೈತರು ನಿಗದಿ ಮಾಡಿದ್ದ ಬೆಲೆಗಿಂತಲೂ ಹೆಚ್ಚಿನ ಬೆಲೆಯನ್ನು ಪಾವತಿಸಿ ಗ್ರಾಹಕರು ತರಕಾರಿ/ಧಾನ್ಯಗಳನ್ನು ಖರೀದಿಸಿದ್ದೂ ಕಂಡುಬಂದಿದೆ. ಹಲವಾರು ಗ್ರಾಹಕರು ಆಗಾಗ್ಗೆ ತಮ್ಮ ಅಪಾರ್ಟ್‌ಮೆಂಟ್ ಸಮುಚ್ಚಯಗಳು ಹಾಗೂ ತಾವು ವಾಸಿಸುವ ಪ್ರದೇಶಗಳಲ್ಲಿಯೂ ರೈತ ಸಂತೆಗಳನ್ನು ನಡೆಸುವಂತೆ ರೈತ ಸಂಘವನ್ನು ಕೇಳಿದ್ದಾರೆ. ರೈತ ಸಂತೆಗೆ ಬೆಂಗಳೂರಿನಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ.
”ಸಂತೆಯಲ್ಲಿ ಸುಮಾರು 70 ರೈತರು ಮಳಿಗೆಗಳನ್ನು ತೆರೆದಿದ್ದರು. ತರಕಾರಿಗಳು, ಆಹಾರ ಧಾನ್ಯಗಳು, ಬೆಲ್ಲ ಹಾಗೂ ಎಣ್ಣೆ ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿದ್ದಾರೆ. ತಾಜಾ ಮತ್ತು ಗುಣಮಟ್ಟದ ಆಹಾರ ಪದಾರ್ಥಗಳನ್ನು ಕಂಡು ಗ್ರಾಹಕರು ಸಂತೋಷಗೊಂಡಿದ್ದಾರೆ. ರೈತರು ತಂದಿದ್ದ ಎಲ್ಲ ತರಕಾರಿ/ಧಾನ್ಯಗಳು ಮಾರಾಟವಾಗದೇ ಉಳಿದುಬಿಟ್ಟರೆ ಎಂಬ ಆತಂಕವಿತ್ತು. ಆದರೆ, ಎಲ್ಲವೂ ಸಂಪೂರ್ಣವಾಗಿ ಮಾರಾಟವಾಗಿದ್ದು, ಆಶ್ಚರ್ಯ ತಂದಿತು” ಎಂದು ಚುಕ್ಕಿ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಕೃಷಿ ಸಂಬಂಧಿತ ಹಲವಾರು ವಿಚಾರಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವ, ತರಬೇತಿ ನೀಡುವ ಕಾರ್ಯಕ್ರಮಗಳನ್ನೂ ರೈತ ಸಂತೆ ಒಳಗೊಳ್ಳಲು ರೈತಸಂಘ ಮುಂದಾಗಿದೆ. ಜೊತೆಗೆ, ರೈತರನ್ನು ನೈಸರ್ಗಿಕ ಕೃಷಿ ಮಾಡುವುದಕ್ಕೆ ಪ್ರೋತ್ಸಾಹಿಸಲು ಬಯಸಿದೆ. ಅದಕ್ಕಾಗಿ, ತಮ್ಮ ಒಟ್ಟು ಕೃಷಿ ಭೂಮಿಯನ್ನು ಕನಿಷ್ಠ 10 ಗುಂಟೆ ಭೂಮಿಯನ್ನು ನೈಸರ್ಗಿಕ ಕೃಷಿಗಾಗಿ ಮೀಸಲಿಡುವ ರೈತರಿಗೆ ಮಾತ್ರವೇ ರೈತ ಸಂತೆಯಲ್ಲಿ ಭಾಗವಹಿಸಲು ಅವಕಾಶ ನೀಡಲು ರೈತ ಸಂಘ ನಿರ್ಧರಿಸಿದೆ.
ಈ ವರದಿ ಓದಿದ್ದೀರಾ?: ನೈಸ್ ಯೋಜನೆ | ಸಂಪುಟ ಉಪಸಮಿತಿ ರಚನೆ, ಸರ್ಕಾರದಿಂದ ಕಣ್ಣೊರೆಸುವ ತಂತ್ರವೇ?
“ಬೆಂಗಳೂರು ನಿವಾಸಿಗಳ ಕೋರಿಕೆಯಂತೆ ನಗರದಾದ್ಯಂತ ಎಲ್ಲ ಪ್ರದೇಶಗಳಲ್ಲೂ ರೈತ ಸಂತೆ ನಡೆಸಲು ಯೋಜಿಸುತ್ತಿದ್ದೇವೆ. ಗ್ರಾಹಕರು ಮತ್ತು ನಿವಾಸಿಗಳ ಕಲ್ಯಾಣ ಸಂಘಗಳ ಸಹಕಾರದೊಂದಿಗೆ ರೈತ ಸಂತೆಗಳನ್ನು ಏರ್ಪಡಿಸುತ್ತೇವೆ. ಆಸಕ್ತ ಗ್ರಾಹಕರು ಮತ್ತು ನಿವಾಸಿಗಳ ಸಂಘಗಳು ನಮ್ಮನ್ನು ಸಂಪರ್ಕಿಸಿದರೆ, ಅವರ ಪ್ರದೇಶಗಳಲ್ಲಿ ಸಂತೆಗಳನ್ನು ನಡೆಸುತ್ತೇವೆ” ಎಂದು ಚುಕ್ಕಿ ಹೇಳಿದ್ದಾರೆ.
“ಕೃಷಿ ಮಾರುಕಟ್ಟೆ ವಿರೂಪಗೊಂಡಿದೆ. ಅದು ರೈತರಿಗೆ ನ್ಯಾಯಯುತ ಬೆಲೆಗಳನ್ನು ಖಾತರಿಪಡಿಸುವುದಿಲ್ಲ. ಅಂತೆಯೇ, ಗ್ರಾಹಕರಿಗೂ ಪ್ರಯೋಜನ ನೀಡುವುದಿಲ್ಲ. ಕೃಷಿ ಮಾರುಕಟ್ಟೆಗಳು ರೈತರನ್ನು ಬಿಕ್ಕಟ್ಟಿಗೆ ತಳ್ಳಿವೆ. ಭಾರತದಲ್ಲಿ ದಿನಕ್ಕೆ ಸುಮಾರು 30 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 2001 ಮತ್ತು 2011ರ ನಡುವೆ ದೇಶದಲ್ಲಿ ಸುಮಾರು 85 ಲಕ್ಷ ಜನರು ಕೃಷಿ ಮಾಡುವುದನ್ನು ಬಿಟ್ಟಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಕೃಷಿಗೆ ಬೆಂಬಲ ಮತ್ತು ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗದೇ ಇರುವುದು” ಎಂದು ಅವರು ಹೇಳಿದ್ದಾರೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಅದಕ್ಕೆ ಕಾನೂನು ಖಾತರಿಗಾಗಿ ರೈತರು ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ಸರ್ಕಾರಗಳು ಸ್ಪಂದಿಸುತ್ತಿಲ್ಲ. ರೈತರು ಕಂಗಾಲಾಗಿದ್ದಾರೆ. ಇಂತಹ ಸಮಯದಲ್ಲಿ, ‘ರೈತರಿಂದ ಗ್ರಾಹಕರಿಗೆ’ ನೇರ ಮಾರುಕಟ್ಟೆ ರಚಿಸುವ ಬಗ್ಗೆ ಚಿಂತಿಸದೆ ನಮಗೆ ಬೇರೆ ದಾರಿಯಿಲ್ಲ. ಇಂತಹ ಸಂತೆಗಳು ರೈತರ ಸಮಸ್ಯೆಗಳ ಬಗ್ಗೆ ಗ್ರಾಹಕರನ್ನು ಜಾಗೃತಗೊಳಿಸುತ್ತವೆ. ರೈತರನ್ನು ಉಳಿಸುತ್ತವೆ ಎಂದು ರೈತ ಸಂಘ ಆಶಿಸಿದೆ.