ಸಿಲಿಂಡರ್ ಬದಲಿಸುವ ವೇಳೆ, ಬೆಂಕಿ ಹೊತ್ತಿಕೊಂಡಿದ್ದರಿಂದ ಸಿಲಿಂಡರ್‌ಅನ್ನು ಹೋಟೆಲ್ ಮಾಲೀಕ ರಸ್ತೆಗೆ ದೂಡಿದ್ದು, ರಸ್ತೆ ಬದಿಯಲ್ಲಿದ್ದ ವಾಹನಗಳು ಸುಟ್ಟು ಕರಕಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ವಿವೇಕನಗರದ ಈಜಿಪುರ ರಸ್ತೆಯಲ್ಲಿ ಘಟನೆ ನಡೆದಿದ್ದು, ಒಂದು ಆಟೋ ಹಾಗೂ ಐದು ಬೈಕ್‌ಗಳು ಹೊತ್ತಿ ಉರಿದಿವೆ.
ಈಜಿಪುರ ರಸ್ತೆಯಲ್ಲಿದ್ದ ಬಿರಿಯಾನಿ ಅಂಗಡಿಯಲ್ಲಿ ಅಡುಗೆ ಮಾಡುವ ವೇಳೆ ಸಿಲಿಂಡರ್ ಖಾಲಿಯಾಗಿದ್ದು, ಹೋಟೆಲ್ ಮಾಲೀಕ ಸಿಲಿಂಡರ್ ಬದಲಿಸುತ್ತಿದ್ದರು. ಈ ವೇಳೆ, ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಗಾಬರಿಗೊಂಡ ಮಾಲೀಕ, ಸಿಲಿಂಡರ್‌ಅನ್ನು ರಸ್ತೆಗೆ ದೂಡಿದ್ದಾರೆ. ಆಗ, ರಸ್ತೆ ಬದಿಯಲ್ಲಿ ನಿಂತಿದ್ದ ಆಟೋಗೆ ಬೆಂಕಿ ಹೊತ್ತಿಕೊಂಡಿದ್ದು, ಪಕ್ಕದಲ್ಲೇ ಇದ್ದ ಬೈಕ್‌ಗಳಿಗೂ ಬೆಂಕಿ ಹರಡಿಕೊಂಡಿದೆ.
ತಕ್ಷಣವೇ ಅಲ್ಲಿದ್ದ ಹಲವು ಅಂಗಡಿಗಳ ಮಾಲೀಕರು, ಸಿಬ್ಬಂದಿಗಳು ಬೆಂಕಿ ನಂದಿಸಲು ನೀರು ಸುರಿದಿದ್ದಾರೆ. ಅಗ್ನಿಶಾಮಕ ವಾಹನವೂ ಸ್ಥಳಕ್ಕೆ ಧಾವಿಸಿದೆ. ಅದಾಗ್ಯೂ, ಆಟೋ ಮತ್ತು ಐದು ಬೈಕ್‌ಗಳು ಸಂಪೂರ್ಣ ಸುಟ್ಟು ಹೋಗಿವೆ. ಸದ್ಯ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.