- ಕಳೆದ ಆರು ದಿನಗಳಿಂದ 20,000 ಕ್ಕೂ ಹೆಚ್ಚು ಮೀನುಗಳು ಸಾವು
- ಅಂಬಲಿಪುರ ಕೆರೆಯಲ್ಲಿ ಇಂತಹ ಪ್ರಮಾಣದ ಘಟನೆ ವರದಿಯಾಗಿರುವುದು ಇದೇ ಮೊದಲು
ಬೆಂಗಳೂರಿನ ಮಹದೇವಪುರ ವಲಯದ ಅಂಬಲಿಪುರ ಕೆರೆಯಲ್ಲಿ ಈ ವರ್ಷ ನೀರಿನ ಮಾಲಿನ್ಯದ ಕಾರಣದಿಂದ ಅತಿ ಹೆಚ್ಚು ಮೀನುಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.
ಮೀನು ಗುತ್ತಿಗೆದಾರ ಕೆ ನಾರಾಯಣ್ ಮಾತನಾಡಿ, “ಕಳೆದ ಆರು ದಿನಗಳಿಂದ 20,000 ಕ್ಕೂ ಹೆಚ್ಚು ಮೀನುಗಳು ಸಾವನ್ನಪ್ಪಿವೆ. ಬಿಬಿಎಂಪಿ ಕೆರೆಯಲ್ಲಿ ಮೀನುಗಾರಿಕೆಗಾಗಿ ಹೂಡಿಕೆ ಮಾಡಿದ್ದು ಇದು ನಾಲ್ಕನೇ ಬಾರಿ. ಇದೇ ಮೊದಲ ಬಾರಿಗೆ ಭಾರಿ ನಷ್ಟ ಅನುಭವಿಸಿದ್ದೇನೆ. ₹3.60 ಲಕ್ಷ ಹೂಡಿಕೆ ಮಾಡಿದ್ದೇನೆ. ಒಂದು ರೂಪಾಯಿಯೂ ಸಿಗುವುದಿಲ್ಲ. ಏಕೆಂದರೆ, ಬಹುತೇಕ ಎಲ್ಲ ಮೀನುಗಳು ಸತ್ತಿವೆ. ಅಧಿಕಾರಿಗಳು ಕೆರೆಯ ನೀರಿನ ಮಾಲಿನ್ಯದ ಸಮಸ್ಯೆಯನ್ನು ಪರಿಹರಿಸಬೇಕು. ಸಮಸ್ಯೆ ಪರಿಹಾರವಾದ ಬಗ್ಗೆ ಖಚಿತ ಮಾಹಿತಿ ಪಡೆಯಬೇಕು” ಎಂದರು.
“ಬಿಬಿಎಂಪಿ ಅಧಿಕಾರಿಗಳು ನೀರಿನ ಗುಣಮಟ್ಟ ಮತ್ತು ಮಳೆ ನೀರು ಚರಂಡಿಗಳ ಬಗ್ಗೆ ಸರಿಯಾಗಿ ಪರಿಶೀಲನೆ ಮಾಡಿದ್ದರೆ, ಈಗಾಗಿರುವ ಹಾನಿ ಕಡಿಮೆ ಮಾಡಬಹುದಿತ್ತು. ದಶಕದ ಹಿಂದೆ ಬಿಬಿಎಂಪಿ ವತಿಯಿಂದ ಕೆರೆಗೆ ಕಾಯಕಲ್ಪ ನೀಡಲಾಗಿದೆ. ಸ್ಥಳೀಯರು ಕೆರೆಯನ್ನು ಕಾಪಾಡಿಕೊಂಡು ಬಂದಿದ್ದಾರೆ” ಎಂದು ತಿಳಿಸಿದರು.
“ಅಂಬಲಿಪುರ ಕೆರೆಯಲ್ಲಿ ಇಂತಹ ಪ್ರಮಾಣದ ಘಟನೆ ವರದಿಯಾಗಿರುವುದು ಇದೇ ಮೊದಲು. 7 ಎಕರೆ ವಿಸ್ತೀರ್ಣದ ಕೆರೆಯು ಐದು ದೊಡ್ಡ ಅಪಾರ್ಟ್ಮೆಂಟ್ ಸಂಕೀರ್ಣಗಳಿಂದ ಸುತ್ತುವರಿದಿದೆ. ಎಲ್ಲ ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಹೊಂದಿರುವುದರಿಂದ ಕೊಳಚೆ ನೀರನ್ನು ಒಮ್ಮೆಯೂ ಹೊರಹಾಕಲಾಗಿಲ್ಲ. ಮಳೆನೀರು ಚರಂಡಿ, ರಾತ್ರಿಯ ಸಮಯದಲ್ಲಿ ಚರಂಡಿ ಒಳಹರಿವು ಕಾಣುತ್ತದೆ. ಅಂಬಲಿಪುರ ಕೆರೆಗೆ ಕೊಳಚೆ ನೀರು ಬರುತ್ತಿದೆ ಮೀನುಗಳ ಸಾವಿಗೆ ಇದು ಕೂಡ ಒಂದು ಕಾರಣವಾಗಿರಬಹುದು. ಬಿಬಿಎಂಪಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಕೆರೆಯ ಸಂರಕ್ಷಣಾ ಗುಂಪು ಕೆರೆಯ ನೀರಿನ ಮಾದರಿ ಸಂಗ್ರಹಿಸಿದ್ದು, ಪರೀಕ್ಷಿಸಲಾಗುತ್ತಿದೆ. ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ” ಎಂದು ಕೆರೆ ಹೋರಾಟಗಾರ್ತಿ ಕವಿತಾ ಕಿಶೋರ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಶಂಕಿತ ಉಗ್ರನ ಪತ್ತೆಗೆ ಲುಕ್ ಔಟ್ ನೋಟಿಸ್ ಹೊರಡಿಸಲು ಸಿದ್ಧತೆ ನಡೆಸಿದ ಬೆಂಗಳೂರು ಪೊಲೀಸರು
“ಕಳೆದ ಎರಡು ವರ್ಷಗಳಿಂದ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದು, ಈ ಪ್ರದೇಶದ ಸುತ್ತಲೂ ಹೋಟೆಲ್ಗಳು ಮತ್ತು ಅಂಗಡಿಗಳು ನಾಯಿ ಕೊಡೆಗಳಂತೆ ಹುಟ್ಟಿಕೊಂಡಿವೆ. ಈ ಸಂಸ್ಥೆಗಳು ತಮ್ಮ ಕೊಳಚೆ ನೀರನ್ನು ಎಲ್ಲಿಗೆ ಬಿಡುತ್ತಿವೆ ಎಂಬುದು ಅಸ್ಪಷ್ಟವಾಗಿದೆ. ಬಹುಶಃ ಹೋಟೆಲ್ ಮತ್ತು ಅಂಗಡಿ ಮಾಲೀಕರು ರಾತ್ರಿಯಲ್ಲಿ ಚರಂಡಿ ನೀರನ್ನು ಕೆರೆಗೆ ಬಿಡುತ್ತಿರಬಹುದು. ಇದು ಮಾಲಿನ್ಯಕ್ಕೆ ಕಾರಣವಾಗಿರಬಹುದು” ಎಂದು ಕೆರೆ ಹೋರಾಟಗಾರರೊಬ್ಬರು ಹೇಳಿದರು
ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್ ವಿಜಯಕುಮಾರ್ ಹರಿದಾಸ್ ಮಾತನಾಡಿ, “ಘಟನೆಯ ಬಗ್ಗೆ ನಮಗೆ ಮಾಹಿತಿ ಇಲ್ಲ. ಕಳೆದ ತಿಂಗಳು ಕೆರೆಗೆ ಒಳಚರಂಡಿ ನೀರಿನ ಪ್ರವೇಶವಾಗುವುದರ ಬಗ್ಗೆ ತನಿಖೆ ನಡೆಸಲಾಗಿತ್ತು” ಎಂದು ತಿಳಿಸಿದರು.