ಸರ್ಕಾರಿ ಕೆಲಸ ಕೊಡಿಸುತ್ತೇನೆಂದು ಆಮಿಷವೊಡ್ಡಿ ಹಲವರಿಂದ ಹಣ ಪಡೆದು ವಂಚಿಸಿದ್ದ ಆರೋಪದ ಮೇಲೆ ಮಾಜಿ ಪಿಡಿಒ ಯೋಗೇಂದ್ರ ಎಂಬವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಯೇಂಗೇಂದ್ರ ವಿರುದ್ಧ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ, ಜೆ.ಸಿ ನಗರ ಪೊಲೀಸ್ ಠಾಣೆ ಹಾಗೂ ವಿಶ್ವೇಶ್ವರಪುರ ಪೊಲೀಸ್ ಠಾಣೆಗಳಲ್ಲಿ 2023ರಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಆತನನ್ನು ಚೆನ್ನಪ್ಪನಕೆರೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಗ್ರಾಮ ಪಂಚಾಯತಿಯಲ್ಲಿ ಪಿಡಿಒ ಆಗಿದ್ದ ಯೋಗೇಂದ್ರ ಅವರನ್ನು ಕರ್ತವ್ಯಲೋಪದ ಆರೋಪದ ಮೇಲೆ 2020ರಲ್ಲಿ ವಜಾಗೊಳಿಸಲಾಗಿತ್ತು. ಸೇವೆಯಿಂದ ವಜಾಗೊಂಡ ಬಳಿಕ, ಬೆಂಗಳೂರಿಗೆ ಬಂದು ನೆಲೆಸಿದ್ದರು.
ಬೆಂಗಳೂರಿಗೆ ಬಂದ ಬಳಿಕ, ಸರ್ಕಾರಿ ಕೆಲಸ ಕೊಡಿಸುವುದಾಗಿ ಹಾಗೂ ಚಿನ್ನದ ಉದ್ಯಮ ಮತ್ತು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಬರುತ್ತದೆಯೆಂದೂ ಹಲವರಿಂದ ಹಣ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸರ್ಕಾರಿ ಕೆಲಸ ಕೊಡಿಸುವುದಾಗಿ 17 ಲಕ್ಷ ರೂ. ಮತ್ತು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂದು 1.35 ಕೋಟಿ ರೂ.ಗಳನ್ನು ಸುಲಿಗೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತನ ವಿರುದ್ಧ ಹಲವರು ದೂರು ದಾಖಲಿಸಿದ್ದರು. ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಯೋಗೇಂದ್ರ ವಿದೇಶಕ್ಕೆ ಪರಾರಿಯಾಗಿದ್ದ. ಆತನ ವಿರುದ್ಧ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದರು. ಆತ ಶ್ರೀಲಂಕಾದಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿದ್ದು, ಏರ್‌ಪೋರ್ಟ್‌ನ ಭದ್ರತಾ ಸಿಬ್ಬಂದಿ ಆತನನ್ನು ಗುರುತಿಸಿ, ವಶಕ್ಕೆ ಪಡೆದಿದ್ದಾರೆ. ಬಳಿಕ, ಪೊಲೀಸರಿಗೆ ಒಪ್ಪಿಸಿದ್ದಾರೆ.