ಕರ್ನಾಟಕ ಲೋಕಸೇವಾ ಅಯೋಗ (ಕೆಪಿಎಸ್‌ಪಿ)ಯಲ್ಲಿ ಸದಸ್ಯತ್ವ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 4 ಕೋಟಿ ರೂ. ವಂಚಿಸಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಂಚಕ ಗುಂಪು ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಲೆಟರ್‌ಹೆಡ್‌ಅನ್ನು ನಕಲಿಯಾಗಿ ಸೃಷ್ಟಿಸಿ, ನಕಲಿ ಸಹಿ ಹಾಕಿ ಮಹಿಳೆಯೊಬ್ಬರಿಗೆ ವಂಚಿಸಿದೆ. ವಂಚಕ ಗುಂಪಿನ ರಿಯಾಜ್ ಅಹ್ಮದ್, ಯೂಸುಫ್, ಚಂದ್ರಪ್ಪ ಮತ್ತು ಇತರ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೆಪಿಎಸ್‌ಸಿ ಸದಸ್ಯತ್ವ ಕೊಡಿಸಲು ಆರೋಪಿಗಳು ಮಹಿಳೆ ಬಳಿ 5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಅದರಲ್ಲಿ, 4.10 ಕೋಟಿ ರೂ.ಗಳನ್ನು ಪಡೆದುಕೊಂಡಿದ್ದರು. ಬಳಿಕ, ಆರೋಪಿಗಳ ಚಲನವಲನವನ್ನು ಗಮನಿಸಿದ್ದ ಮಹಿಳೆ, ಸಂಶಯ ಬಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ಪಡೆದು ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆ ವೇಳೆ ನಕಲಿ ನೇಮಕಾತಿ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.