ಪ್ರತ್ಯೇಕ ಬಸ್ ಪಥ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಮೂಲಸೌಕರ್ಯ ಸುಧಾರಣೆಗೆ ಆಗ್ರಹಿಸಿ, ನಗರದ ಮಹಿಳಾ ಗಾರ್ಮೆಂಟ್ ನೌಕರರ ಸಮುದಾಯ ಮತ್ತು ಗ್ರೀನ್‌ಪೀಸ್ ಇಂಡಿಯಾ ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಕ್ಕೆ 28,995 ಸಾರ್ವಜನಿಕರ ಸಹಿಯುಳ್ಳ ಅಹವಾಲು ಸಲ್ಲಿಸಿದೆ. ಈ ಅಹವಾಲಿನಲ್ಲಿ ನಗರದ ಸಮಗ್ರ ಸಂಚಾರ ಯೋಜನೆಯಲ್ಲಿ (ಸಿಎಂಪಿ) ಪ್ರಸ್ತಾಪಿಸಿದಂತೆ ಬೆಂಗಳೂರಿನಲ್ಲಿ 11 ಬಸ್ ಆದ್ಯತಾ ಪಥಗಳನ್ನು ಕಾರ್ಯಗತಗೊಳಿಸಬೇಕು ಮತ್ತು ಹೊರವರ್ತುಲ ರಸ್ತೆಯಲ್ಲಿದ್ದ ಬಸ್ಸು ಆದ್ಯತಾ ಪಥವನ್ನು ಪುನರಾರಂಭಿಸಬೇಕು ಎಂಬುದಾಗಿ ಆಗ್ರಹಿಸಲಾಗಿದೆ.
”ತುಮಕೂರು ರಸ್ತೆಯಲ್ಲಿರುವ ನಾಗಸಂದ್ರದಿಂದ ನಗರದ ಕೇಂದ್ರ ಪ್ರದೇಶವಾಗಿರುವಂತಹ ಕೆ.ಆರ್.ಮಾರುಕಟ್ಟೆಯಂತಹ ಸ್ಥಳಗಳಿಗೆ ತಲುಪಲು ಪ್ರಸ್ತುತ ಬಸ್ಸಿನಲ್ಲಿ ಸುಮಾರು ಎರಡು ಗಂಟೆಗಳ ಅವಧಿ ಬೇಕಾಗಿದೆ. ಅದೇ ಪ್ರತ್ಯೇಕ ಬಸ್ ಮಾರ್ಗ ಮೀಸಲಿಟ್ಟರೆ ಕಡಿಮೆ ಸಮಯದಲ್ಲಿ ಈ ಸ್ಥಳಗಳನ್ನು ತಲುಪಬಹುದು. ಇದರಿಂದಾಗಿ ನಾವು ಮೆಟ್ರೋದ ಬದಲು, ಬಸ್ಸನ್ನೇ ಬಳಸಬಹುದು ಮತ್ತು ಪ್ರಯಾಣದ ವೆಚ್ಚವನ್ನು ಉಳಿಸಲೂಬಹುದು” ಎಂದು ತುಮಕೂರು ರಸ್ತೆಯ ಗಾರ್ಮೆಂಟ್ಸ್ ಕಾರ್ಖಾನೆಯ ಜಯಮಾಲಾ ಅಭಿಪ್ರಾಯಪಟ್ಟರು.
ಬೆಂಗಳೂರಿನ ತುಮಕೂರು ರಸ್ತೆಯು ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ. ಈ ರಸ್ತೆಯು ವಾಣಿಜ್ಯ ವ್ಯವಹಾರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆ, ನಗರದ ಉತ್ತರ ಭಾಗದಲ್ಲಿರುವ ಉಪನಗರಗಳು ಮತ್ತು ಕೈಗಾರಿಕಾ ಪ್ರದೇಶಗಳನ್ನು ಸಂಪರ್ಕಿಸಲು ಇರುವ ಪ್ರಮುಖ ಮಾರ್ಗವಾಗಿದೆ. ಹೀಗಾಗಿ ಈ ರಸ್ತೆಯು ಸದಾ ವಾಹನಗಳಿಂದ ಗಿಜಿಗುಡುತ್ತಿರುತ್ತದೆ. ಅದರಲ್ಲೂ ವಿಶೇಷವಾಗಿ ಪೀಕ್ ಸಮಯದಲ್ಲಿ ಈ ಮಾರ್ಗವು ಗಾರ್ಮೆಂಟ್ ಕಾರ್ಖಾನೆಗಳಿಗೆ ಪ್ರಯಾಣಿಸುವ ಕಾರ್ಮಿಕರು, ಇತರ ವಾಹನಗಳು ಮತ್ತು ಭಾರೀ ಗಾತ್ರದ ಟ್ರಕ್‌ಗಳೂ ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿ ಸಾರಿಗೆ ದಟ್ಟಣೆಯಿಂದ ಕೂಡಿರುತ್ತದೆ. ಇದಲ್ಲದೆ, ಈ ರಸ್ತೆಯಲ್ಲಿ ಹಲವಾರು ಟ್ರಾಫಿಕ್ ಸಿಗ್ನಲ್‌ಗಳನ್ನು ಹಾದುಹೋಗಬೇಕಾಗಿರುವುದರಿಂದ ವಾಹನಗಳನ್ನು ಆಗಾಗ ಅಲ್ಲಲ್ಲಿ ನಿಲ್ಲಿಸಬೇಕಾಗುತ್ತದೆ. ಹೀಗಾಗಿ ಈ ಮಾರ್ಗದಲ್ಲಿ ವಿಶೇಷ ಬಸ್ ಆದ್ಯತಾ ಪಥಗಳ ಅವಶ್ಯಕತೆ ಇದೆ ಎಂದು ಇಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
2023 ರಲ್ಲಿ ಕರ್ನಾಟಕ ಸರ್ಕಾರವು ಜಾರಿಗೊಳಿಸಿದ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ ಯೋಜನೆ ಶಕ್ತಿಯಿಂದಾಗಿ ಬೆಂಗಳೂರಿನ ಸಾರ್ವಜನಿಕ ಸಾರಿಗೆಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ. 2020 ರಲ್ಲಿ ಹೊರ ವರ್ತುಲ ರಸ್ತೆಯಲ್ಲಿ ಅಳವಡಿಸಲಾದ ಪ್ರತ್ಯೇಕ ಬಸ್ ಪಥ ಸೌಲಭ್ಯದಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ತಿಂಗಳಿಗೆ ಸುಮಾರು 3,727 ರಷ್ಟು ಏರಿಕೆ ಕಂಡುಬಂದಿತ್ತು ಎಂದು ಬಿಎಂಟಿಸಿ ಮೂಲಗಳು ಸ್ಪಷ್ಟಪಡಿಸಿದ್ದವು. ಆದರೆ ಪ್ರಸ್ತುತ ಪ್ರತ್ಯೇಕ ಬಸ್ ಲೇನ್‌ಗಳ ಅಲಭ್ಯತೆ ತಮ್ಮ ದೈನಂದಿನ ಸಂಚಾರಕ್ಕಾಗಿ ಬಸ್ಸುಗಳನ್ನೇ ಅವಲಂಬಿಸಿರುವ ಮಹಿಳೆಯರ ಸುಗಮ ಸಂಚಾರಕ್ಕೆ ಅಡ್ಡಿಯಾಗಿವೆ.
.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಬಸ್ಸು ಪ್ರಯಾಣಿಕರು ಮತ್ತು ಗ್ರೀನ್‌ಪೀಸ್ ಇಂಡಿಯಾ ಸದಸ್ಯರು ನಗರದಲ್ಲಿ ಪ್ರಸ್ತುತ ಸಂಚರಿಸುತ್ತಿರುವ ಬಸ್ಸುಗಳೊಂದಿಗೆ 15,000 ಹೆಚ್ಚುವರಿ ಬಸ್ಸುಗಳ ಬೇಡಿಕೆಯೊಂದಿಗೆ, ನಗರದ ಎಲ್ಲಾ ಭಾಗಗಳಿಗೂ ಬಸ್ಸುಗಳ ಓಡಾಟ, ಸುವ್ಯವಸ್ಥಿತ, ಸುರಕ್ಷಿತ ಮತ್ತು ಉತ್ತಮ ಸಂಪರ್ಕ ಸಾರಿಗೆ ಇವೇ ಮೊದಲಾದ ಸಾರಿಗೆ ಮೂಲಸೌಕರ್ಯಗಳ ಅಭಿವೃದ್ಧಿಯ ಬೇಡಿಕೆಯನ್ನು ಇಟ್ಟಿದ್ದಾರೆ.
ಗ್ರೀನ್‌ಪೀಸ್ ಇಂಡಿಯಾವು ಮೇಲೆ ಹೇಳಲಾದ ಎಲ್ಲಾ ಬೇಡಿಕೆಗಳಿಗೂ ಸಾರ್ವಜನಿಕರ ಸಹಿಯನ್ನು ಸಂಗ್ರಹಿಸಿದ್ದು ಒಟ್ಟು 28,995 ನಾಗರಿಕರು ಈ ಬೇಡಿಕೆಗಳಿಗೆ ತಮ್ಮ ಸಹಮತವನ್ನು ಸೂಚಿಸಿದ್ದಾರೆ. ನಾಗರಿಕರ ಸಹಿಯನ್ನು ಒಳಗೊಂಡ ಮನವಿಯನ್ನು ಗ್ರೀನ್‌ಪೀಸ್ ಇಂಡಿಯಾ ನಗರ ಭೂ ಸಾರಿಗೆ ಇಲಾಖೆಗೆ ಸಲ್ಲಿಸಿತು.
.
ಇದೇ ಸಂದರ್ಭದಲ್ಲಿ ಮಾತಾಡಿದ ಗ್ರೀನ್‌ಪೀಸ್ ಇಂಡಿಯಾದ ಕ್ಯಾಂಪೇನರ್ ಶರತ್ ಎಂ ಎಸ್ “ಪ್ರತ್ಯೇಕ ಬಸ್ ಪಥಗಳು ಯಾವುದೇ ಸಾರ್ವಜನಿಕ ಬಸ್ ವ್ಯವಸ್ಥೆಯ ಪ್ರಮುಖ ಭಾಗ. ಇದು ಸಾರ್ವಜನಿಕ ಸಾರಿಗೆಯ ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಮುದಾಯದೊಂದಿಗೆ ಕೈ ಜೋಡಿಸಿ ನಗರ ಭೂ ಸಾರಿಗೆ ಇಲಾಖೆಗೆ (DULT) ಮನವಿಯನ್ನು ಸಲ್ಲಿಸುವ ಮೂಲಕ ನಾವು ನಾಗರಿಕರ ಧ್ವನಿಯನ್ನು ನೀತಿ ನಿರೂಪಕರಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದೇವೆʼ ಎಂದರು.
ಬೆಂಗಳೂರು ನಗರದಲ್ಲಿ ಹೊರ ವರ್ತುಲ ರಸ್ತೆಯ ಬಸ್ ಪಥದ ಪುನರಾರಂಭ ನಗರದ ಸಾರಿಗೆ ದಟ್ಟಣೆಯನ್ನು ನಿವಾರಿಸಲು ಮತ್ತು ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇತರೆ ಉದ್ದೇಶಿತ ಬಸ್ ಪಥಗಳ ಯೋಜನೆಯನ್ನು ಯಶಸ್ವಿಯಾಗಿಸಲು ಮತ್ತು ಅದನ್ನು ದೀರ್ಘಾವಧಿಯವರೆಗೆ ಮುಂದುವರೆಸಲು ಸೂಕ್ತ ಯೋಜನೆಯೊಂದನ್ನು ರೂಪಿಸಲು ನಾವು ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಶರತ್ ತಿಳಿಸಿದರು.
ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಕೇವಲ 6,073 ಬಸ್‌ಗಳನ್ನು ಒಳಗೊಂಡಿದ್ದು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಈಗಿರುವ ಬಸ್ಸುಗಳಿಗೆ ಪ್ರಸ್ತುತ ಬಸ್ಸು ಪ್ರಯಾಣಿಕರ ಸಂಖ್ಯೆಯನ್ನು ಸೂಕ್ತವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ನಗರದ ರಸ್ತೆಗಳಲ್ಲಿ ಅಂದಾಜು ಒಂದು ಕೋಟಿ ಖಾಸಗಿ ವಾಹನಗಳು ಸಂಚರಿಸುತ್ತಿದ್ದು, ಅವು ನಗರವು ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಮತ್ತು ವಾಯು ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯೊಂದಿಗೆ ಹೋರಾಡುವಂತೆ ಮಾಡಿದೆ.
I am really interest I will happy