ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪ್ರಸ್ತಾಪಿಸಿರುವ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯ ಪ್ರಸ್ತಾಪವನ್ನು ಮರುಪರಿಶೀಲಿಸುವಂತೆ ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆ ಆಗ್ರಹಿಸಿದೆ. ಈ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮತ್ತು ಕರ್ನಾಟಕ ಸಾರಿಗೆ ಇಲಾಖೆಗೆ ಸಾರಿಗೆ ದರ ಏರಿಕೆಯ ಕುರಿತಂತೆ ಪತ್ರ ಬರೆದಿರುವ ಗ್ರೀನ್‌ಪೀಸ್ ಸಂಸ್ಥೆ ಮೆಟ್ರೋ ಮತ್ತು ರಾಜ್ಯ ಸಾರಿಗೆ ಇಲಾಖೆಯ ಬಸ್ಸುಗಳಲ್ಲಿ ಪ್ರಸ್ತಾವಿತ ಪ್ರಯಾಣ ದರ ಹೆಚ್ಚಳವನ್ನು ಹಿಂಪಡೆಯುವಂತೆ ಒತ್ತಾಯಿಸಿದೆ.
ಮೆಟ್ರೋ ರೈಲು ನಿಗಮವು ಪ್ರಸ್ತುತ ಪ್ರಯಾಣದರದಲ್ಲಿ ಶೇಕಡಾ 40 ರಿಂದ 45 ರಷ್ಟು ಹೆಚ್ಚಳವನ್ನು ಪ್ರಸ್ತಾಪಿಸಿದೆ. ಈ ಪ್ರಸ್ತಾಪವು ಜಾರಿಯಾದರೆ ಕನಿಷ್ಠ ದರವನ್ನು 15 ರೂ.ಗಳಿಗೆ ಮತ್ತು ಗರಿಷ್ಠ ದರವನ್ನು 85 ರೂ.ಗಳಿಗೆ ಹೆಚ್ಚಿಸಲಾಗುತ್ತದೆ. ಅದಲ್ಲದೆ ಜನವರಿ 5 ರಂದು ಏರಿಸಲಾಗಿರುವ ರಾಜ್ಯ ಸಾರಿಗೆ ಬಸ್ ದರವನ್ನು ವಾಪಸ್ ಪಡೆಯುವಂತೆ ಕೂಡ ಆಗ್ರಹಿಸಿದೆ.
ದರ ನಿಗದಿ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಹೆಚ್ಚಿಸಲಾಗುತ್ತಿರುವ ಈ ದರವನ್ನು, ಬೆಂಗಳೂರು ನಗರವು ತೀವ್ರ ಸಂಚಾರ ದಟ್ಟಣೆ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಕೈಗೆಟುಕುವ ಹಾಗೂ ಪರಿಣಾಮಕಾರಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಗತ್ಯವನ್ನು ಎದುರು ನೋಡುತ್ತಿರುವ ಸಮಯದಲ್ಲಿ, ಪ್ರಸ್ತಾಪಿಸಿರುವುದು ವಿಪರ್ಯಾಸ. ಈ ಮೊದಲೇ ಎಂದರೆ 2017 ರಲ್ಲಿ ಹೆಚ್ಚಿಸಲಾಗಿದ್ದ ಮೆಟ್ರೋ ಪ್ರಯಾಣ ದರವು ಕಡಿಮೆ ಆದಾಯದ ವರ್ಗಗಳಿಗೆ ಪ್ರಯಾಣವನ್ನು ಕೈಗೆಟಕದಂತೆ ಮಾಡಿತ್ತು. ಇದೀಗ ಮತ್ತೆ ಜನಸಾಮಾನ್ಯರಿಗೆ ಮೆಟ್ರೋ ದರ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಿದೆ. ನಮ್ಮ ಮೆಟ್ರೋ ನಗರದಲ್ಲಿನ ನಿವಾಸಿಗಳ ಜೀವನಾಡಿಯಾಗಿದೆ. ಇದು ಸಾಮಾನ್ಯರಿಗೆ ಸಮರ್ಥ, ಕೈಗೆಟುಕುವ ಮತ್ತು ಸುಸ್ಥಿರ ಸಾರ್ವಜನಿಕ ಸಾರಿಗೆ ಸೌಲಭ್ಯವನ್ನು ಕಲ್ಪಿಸಿದೆ. ಬೆಂಗಳೂರು ನಗರವು ಈಗಾಗಲೇ ತೀವ್ರ ಸಂಚಾರ ದಟ್ಟಣೆಯನ್ನು ಎದುರಿಸುತ್ತಿರುವುದರಿಂದ, ನಗರದ ಸುಸ್ಥಿರ ಭವಿಷ್ಯಕ್ಕಾಗಿ ಸಮರ್ಥ ಮತ್ತು ಎಲ್ಲರ ಕೈಗೆಟಕಬಲ್ಲ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅತ್ಯಗತ್ಯವಾಗಿ ಬೇಕಾಗಿದೆ ಎಂದು ಗ್ರೀನ್‌ಪೀಸ್ ಇಂಡಿಯಾದ ಪ್ರಚಾರಕರಾದ ಆಕಿಜ್ ಫಾರೂಕ್ ಆಗ್ರಹಿಸಿದ್ದಾರೆ.
ʻʻಸಂಚಾರ ದಟ್ಟಣೆ, ಹವಾಮಾನ ಬಿಕ್ಕಟ್ಟು, ಗಾಳಿಯ ಗುಣಮಟ್ಟ ಸುಧಾರಣೆಗೆ ನೆರವಾಗುವುದರೊಂದಿಗೆ, ಜನಸಾಮಾನ್ಯರಿಗೆ ಎಟಕುವ ದರದಲ್ಲಿ ಸಾರಿಗೆ ಸೌಲಭ್ಯವನ್ನು ಒದಗಿಸುತ್ತ ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯು ಅವಿಭಾಜ್ಯ ಅಂಗವಾಗಿದೆ. ಆದರೆ ನಮ್ಮ ಮೆಟ್ರೋವನ್ನು ಹೆಚ್ಚು ದುಬಾರಿಯನ್ನಾಗಿಸುವ ಮೂಲಕ, ಸಾರಿಗೆಗಾಗಿ ಪ್ರಮುಖವಾಗಿ ಈ ಮೆಟ್ರೋ ರೈಲನ್ನು ಅವಲಂಬಿಸಿರುವ ಕಡಿಮೆ ಆದಾಯದ ವರ್ಗದ ಜನರನ್ನು ಈ ಸೌಲಭ್ಯದಿಂದ ವಂಚಿತರಾಗುವಂತೆ ಮಾಡಲಾಗುತ್ತಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಈ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಿ ಎಲ್ಲರ ಕೈಗೆಟಕುವ ದರದಲ್ಲಿ ಸಾರಿಗೆ ದರವನ್ನು ನಿಗದಿಗೊಳಿಸಬೇಕಾಗಿದೆʼʼ ಎಂದು ಆಕಿಜ್ ಫಾರೂಕ್ ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೂಪಾಯಿ ಮೌಲ್ಯ ಕುಸಿತವೂ, ವಿಶ್ವಗುರುವಿನತ್ತ ಮೋದಿ ಭಾರತವೂ
ಮೆಟ್ರೋ ದರದ ಹೆಚ್ಚಳ ವಿವಿಧ ಆದಾಯದ ವರ್ಗಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೆಚ್ಚಿನ ವರ್ಗಗಳಿಗೆ ಸಾರ್ವಜನಿಕ ಸಾರಿಗೆ ಕೇವಲ ಅನುಕೂಲತೆಯಲ್ಲ. ಮೆಟ್ರೋ ಅವರಿಗೆ ಅವಶ್ಯಕತೆಯಾಗಿದೆ. ಈ ಸಮುದಾಯಗಳು ಈಗಾಗಲೇ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದಾಗಿ ನಲುಗುತ್ತಿವೆ. ಇದರೊಂದಿಗೆ ಸಾರಿಗೆ ದರಗಳಲ್ಲಿನ ಯಾವುದೇ ಹೆಚ್ಚಳವು ಅವರ ಆರ್ಥಿಕ ಸಂಕಷ್ಟವನ್ನು ಇನ್ನಷ್ಟು ಹದಗೆಡಿಸುತ್ತದೆ. ಪ್ರಯಾಣ ದರದಲ್ಲಿ ಶೇ. 40-45 ರಷ್ಟು ಹೆಚ್ಚಳವು ಪ್ರಯಾಣಿಕರಿಗೆ ತೀವ್ರ ಆರ್ಥಿಕ ಹೊರೆಯನ್ನುಂಟು ಮಾಡುತ್ತದೆ. ಇದು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಪ್ರಮಾಣದ ಇಳಿಕೆಗೆ ಮತ್ತು ಖಾಸಗಿ ವಾಹನಗಳ ಬಳಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು. ಇದರಿಂದಾಗಿ ಇಲ್ಲಿಯೂ ದೆಹಲಿಯ ಪರಿಸ್ಥಿತಿ ಪುನರಾವರ್ತನೆಗೊಳ್ಳಬಹುದು. ಬೆಂಗಳೂರಿನಲ್ಲಿ ಮೆಟ್ರೋ ದರ ಹೆಚ್ಚಳವು ಮೆಟ್ರೋ ಪ್ರಯಾಣಿಕರ ಪ್ರಮಾಣದಲ್ಲಿ ಗಣನೀಯ ಕುಸಿತಕ್ಕೆ ಕಾರಣವಾಗಲಿದೆ ಎಂದು ಆಕಿಜ್ ಫಾರೂಕ್ ಆತಂಕ ವ್ಯಕ್ತಪಡಿಸಿದ್ದಾರೆ.
ಆಫ್-ಪೀಕ್ ಸಮಯದಲ್ಲಿ ಮತ್ತು ಭಾನುವಾರದಂದು ಪ್ರಸ್ತಾಪಿಸಲಾದ ರಿಯಾಯಿತಿಗಳು, ಹಾಗೆಯೇ ಸ್ಮಾರ್ಟ್‌ಕಾರ್ಡ್ ಮತ್ತು QR ಕೋಡ್ ಬಳಕೆದಾರರಿಗೆ ನಿಯಮಿತವಾಗಿ ಶೇ. 5 ರಷ್ಟು ರಿಯಾಯಿತಿಗಳು ಶ್ಲಾಘನೀಯವಾಗಿದ್ದರೂ, ಹೆಚ್ಚಿನ ಪ್ರಮಾಣದ ಪ್ರಯಾಣಿಕರಿಗೆ ಒಟ್ಟಾರೆ ಪ್ರಯಾಣ ವೆಚ್ಚವನ್ನು ಸಮರ್ಪಕವಾಗಿ ಸರಿದೂಗಿಸಲು ಈ ಕೊಡುಗೆಗಳಿಗೆ ಸಾಧ್ಯವಾಗುವುದಿಲ್ಲ. ಬಿಎಂಆರ್‌ಸಿಎಲ್ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ವಾರ್ಷಿಕ ಅನುದಾನಗಳನ್ನು ಪಡೆದುಕೊಳ್ಳುವ ಮೂಲಕ ವಿಶೇಷ ಮೆಟ್ರೋ ನಿಧಿಯನ್ನು ಮೀಸಲಿರಿಸಬೇಕಾಗಿದೆ. ಈ ನಿಧಿಯನ್ನು ಮೆಟ್ರೋ ವ್ಯವಸ್ಥೆಯ ಕಾರ್ಯಾಚರಣೆ ಮತ್ತು ನಿರ್ವಹಣಾ ಅಗತ್ಯಗಳನ್ನು ಪೂರೈಸಲು ಬಳಸಬೇಕು. ಇದರಿಂದಾಗಿ ಪ್ರಯಾಣಿಕರ ಮೇಲೆ ಹೆಚ್ಚಿನ ಹೊರೆ ಬೀಳುವುದನ್ನು ತಡೆಯಬಹುದು. ನಮ್ಮ ಮೆಟ್ರೋದ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳನ್ನು ಭರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡರಿಂದಲೂ ಹೆಚ್ಚಿನ ಆರ್ಥಿಕ ನೆರವಿನ ಅಗತ್ಯವಿದೆ ಎಂದು ಆಕಿಜ್ ಫಾರೂಕ್ ತಿಳಿಸಿದ್ದಾರೆ.
ನಗರವು ಫ್ಲೈಓವರ್‌ಗಳು ಮತ್ತು ಸುರಂಗ ರಸ್ತೆಗಳಂತಹ ಹಲವಾರು ಬೃಹತ್ ಮೂಲಸೌಕರ್ಯ ಯೋಜನೆಗಳನ್ನು ಯೋಜಿಸುತ್ತಿದೆ. ಇದು ಬೆಂಗಳೂರಿನಂತಹ ಬೆಳೆಯುತ್ತಿರುವ ನಗರದಲ್ಲಿ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸಾರ್ವಜನಿಕ ಸಾರಿಗೆ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವುದು ಮತ್ತು ಎಲ್ಲ ವರ್ಗದವರಿಗೂ ಅದರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಹೆಚ್ಚು ಸುಸ್ಥಿರ ಮತ್ತು ಮುಂದಾಲೋಚನೆಯ ವಿಧಾನವಾಗಿದೆ. ಈ ಮೂಲಕ ಬೆಂಗಳೂರನ್ನು ಸ್ವಚ್ಛ, ದಟ್ಟಣೆ ಮುಕ್ತ ಮತ್ತು ಪರಿಸರ ಪ್ರಜ್ಞೆ ಹೊಂದಿರುವ ನಗರವನ್ನಾಗಿ ಪರಿವರ್ತಿಸಬಹುದು ಎಂದು ಆಕಿಜ್ ಫಾರೂಕ್ ಹೇಳಿದ್ದಾರೆ.
ಯಾವುದೇ ದರ ಹೆಚ್ಚಳವನ್ನು ಜಾರಿಗೆಗೊಳಿಸುವ ಮೊದಲು ಸಾರ್ವಜನಿಕ ಪ್ರತಿಕ್ರಿಯೆಯನ್ನು ಪಡೆದುಕೊಳ್ಳಲು ಸಾಕಷ್ಟು ಸಮಯವನ್ನು ಮೀಸಲಿಡಬೇಕು. ಶುಲ್ಕ ಹೆಚ್ಚಳವು ಹೆಚ್ಚಿನ ಜನಸಂಖ್ಯೆಯ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾಗರಿಕ ಸಮಾಜ ಸಂಸ್ಥೆಗಳು, ಹಕ್ಕು ಆಧಾರಿತ ಗುಂಪುಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಪಾಲುದಾರರೊಂದಿಗೆ ಸಾರ್ವಜನಿಕ ಸಮಾಲೋಚನೆಗಳನ್ನು ನಡೆಸಬೇಕೆಂದು ಗ್ರೀನ್‌ಪೀಸ್ ಇಂಡಿಯಾ ಆಗ್ರಹಿಸಿದೆ.
