ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿ ಮುಸ್ಲಿಂ ಆಟೋ ಚಾಲಕನ ಮೇಲೆ ದುರುಳರು ಹಲ್ಲೆ ನಡೆಸಿದ ಘಟನೆ ಬೆಂಗಳೂರು ನಗರದ ಹೆಗ್ಡೆ ನಗರ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಹಲ್ಲೆಗೆ ಒಳಗಾದ ಆಟೋ ಚಾಲಕ ವಸೀಮ್ ಸ್ನೇಹಿತ ಮೊಹಮ್ಮದ್ ಝಮೀರ್ ಪಾಶಾ ದೂರು ನೀಡಿದ್ದಾರೆ.
ಕಳೆದ ಭಾನುವಾರ ಈ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ದೂರುದಾರ ಝಮೀರ್ ಮತ್ತು ವಸೀಮ್ ಅವರು ಭಾನುವಾರ ಆಟೋದಲ್ಲಿ ಹೋಗುತ್ತಿದ್ದು, ಮೂತ್ರ ವಿಸರ್ಜನೆಗೆಂದು ಒಂದೆಡೆ ನಿಲ್ಲಿಸಿದ್ದರು. ಈ ವೇಳೆ ಅಪರಿಚಿತ ಗುಂಪು ಹಲ್ಲೆ ನಡೆಸಿದೆ ಎಂದು ದೂರು ನೀಡಲಾಗಿದೆ.
ಇದನ್ನು ಓದಿದ್ದೀರಾ? ಮಸೀದಿಯೊಳಗೆ ಜೈ ಶ್ರೀರಾಮ್ ಘೋಷಣೆ ಕೇಸ್ ರದ್ದು; ಸರ್ಕಾರದ ಜವಾಬ್ದಾರಿ ಏನು ?
5-6 ಜನರಿದ್ದ ಅಪರಿಚಿತರ ಗುಂಪು ಇಬ್ಬರನ್ನೂ, “ನೀವ್ಯಾಕೆ ಇಲ್ಲಿ ನಿಂತಿದ್ದೀರಿ, ಇಲ್ಲಿ ರಸ್ತೆ ಇಲ್ಲ” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ವಸೀಮ್ ನಿಮಗ್ಯಾಕೆ ಎಂದು ಮರುಪ್ರಶ್ನಿಸಿದ್ದಕ್ಕೆ ಈ ಗುಂಪು ಥಳಿಸಿದೆ. ಈ ವೇಳೆ ಝಮೀರ್ ಓಡಿಹೋಗಿದ್ದಾರೆ. ಆದರೆ ವಸೀಮ್‌ನನ್ನು ತಡೆದು ಹಿಡಿದ ಗುಂಪು ಮುಖಕ್ಕೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಗಳು ಹೊಡೆದಾಗ ವಸೀಮ್ ನೋವಿನಲ್ಲಿ ‘ಅಲ್ಲಾಹ್’ ಎಂದು ಕೂಗಿದ್ದಕ್ಕೆ ದುರುಳರು ಜೈ ಶ್ರೀರಾಮ್ ಎಂದು ಕೂಗುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಕೋಲಿನಿಂದ ಥಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಇನ್ನು ಅಧಿಕೃತ ಹೇಳಿಕೆಯಲ್ಲಿ ಯಾವುದೇ ಧಾರ್ಮಿಕ ಘೋಷಣೆಯ ಬಗ್ಗೆ ಉಲ್ಲೇಖಿಸಲಾಗಿಲ್ಲ ಎಂದು ಉಪ ಪೊಲೀಸ್ ಆಯುಕ್ತ (ಈಶಾನ್ಯ ವಿಭಾಗ) ಸಜೀತ್ ವಿಜೆ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ದೂರಿನ ಪ್ರತಿಯಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಗುಂಪು ಒತ್ತಾಯಿಸಿದೆ ಎಂದು ಉಲ್ಲೇಖಿಸಲಾಗಿದೆ.
