ರಾಜ್ಯದ ಶಕ್ತಿಸೌಧ ವಿಧಾನಸೌಧ ಇಂದಿನಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ. ಶಕ್ತಿಸೌಧವನ್ನು ದೂರದಿಂದಲೇ ನೋಡಿ, ಫೋಟೋ ಕ್ಲಿಕ್ಕಿಸಿ ಸಂತಸಪಟ್ಟುಕೊಳ್ಳುತ್ತಿದ್ದ ಜನರಿಗೆ ಹತ್ತಿರದಿಂದಲೇ ನೋಡುವ ಅವಕಾಶ ಸಿಕ್ಕಿದೆ. ಭವ್ಯ ವಿಧಾನಸೌಧ ವೀಕ್ಷಣೆಗೆ ರಾಜ್ಯ ಸರ್ಕಾರ ʻಮಾರ್ಗದರ್ಶಿ ಪ್ರವಾಸʼ ಹೆಸರಿನಲ್ಲಿ ಪ್ರವಾಸ ಭಾಗ್ಯ ಕಲ್ಪಿಸಿದೆ.
ನಿತ್ಯ 25 ರಿಂದ 30 ಸದಸ್ಯರ 10 ತಂಡಗಳಿಗೆ ವೀಕ್ಷಣೆಗೆ ಅವಕಾಶ ಇರುತ್ತದೆ. ಇಂದಿನಿಂದ ಪ್ರವಾಸ ಮಾರ್ಗದರ್ಶಿ ಶುರುವಾಗಿದ್ದು, ಪ್ರವಾಸಿಗರಿಗೆ ವಿಧಾನಸೌಧದ ಮಹತ್ವ, ಇತಿಹಾಸ, ಪರಂಪರೆ, ಅಧಿವೇಶನ ಸಭಾಂಗಣ, ಭವ್ಯ ಮೆಟ್ಟಿಲುಗಳ ವಿವರಣೆ ಕೊಡುವ ಕೆಲಸವನ್ನ ಮಾರ್ಗದರ್ಶಿಗಳು ಮಾಡುತ್ತಿದ್ದಾರೆ.
ವಿಧಾನಸೌಧದ ಮಹತ್ವವನ್ನು ಪ್ರವಾಸಿಗರಿಗೆ ತಿಳಿಸಿಕೊಡಲು ಸದ್ಯ 10 ಗೈಡ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ವಿವರಣೆ ನೀಡಲಾಗುತ್ತದೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ, ಹೊರ ದೇಶಗಳ ಪ್ರವಾಸಿಗರೂ ವಿಧಾನಸೌಧ ವೀಕ್ಷಣೆಗೆ ಬರುತ್ತಿದ್ದಾರೆ. ವಿಧಾನಸೌಧ ಪ್ರವಾಸಕ್ಕೆ ಪ್ರತಿ ತಂಡಕ್ಕೆ ಒಂದೂವರೆ ಗಂಟೆ ಸಮಯ, ಒಂದೂವರೆ ಕಿಮೀ ನಡಿಗೆ ಇರಲಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಡಬಲ್ ಇಂಜಿನ್ ಸರ್ಕಾರದಲ್ಲೂ ಬಿಹಾರ ಬಸವಳಿದಿದೆ
ವಿಕಾಸಸೌಧದ ಮೂರನೇ ಪ್ರವೇಶ ದ್ವಾರದ ಮೂಲಕ ಪ್ರವಾಸ್ ಆರಂಭವಾಗಲಿದೆ. 20 ನಿಮಿಷ ಮುಂಚೆ ಪ್ರವಾಸ ಆರಂಭಕ್ಕೂ ಮುನ್ನ ಹಾಜರಿರಬೇಕು. ಟಿಕೆಟ್ ಕಾಯ್ದಿರಿಸಿದವರು ಸರ್ಕಾರ ವಿತರಿಸಿರುವ ಯಾವುದಾದರೂ ಗುರುತಿನ ಚೀಟಿ ತರಬೇಕು. ವಿಧಾನಸೌಧ ಪ್ರವಾಸದ ವೇಳೆ ನಿಗದಿತ ಸ್ಥಳದಲ್ಲಿ ಮಾತ್ರ ಫೋಟೋ ತೆಗೆಯಲು ಅವಕಾಶ.
ಪ್ರತೀ ಪ್ರವಾಸಿಗರಿಗೂ ತಲಾ 50 ರೂ. ಟಿಕೆಟ್ ನಿಗದಿ ಮಾಡಲಾಗಿದೆ. ಇನ್ನೂ 15 ವರ್ಷದೊಳಗಿನ ಮಕ್ಕಳು, ಎಸ್‌ಎಸ್‌ಎಲ್‌ಸಿ ವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರಲಿದೆ.
ಕಳೆದ ವಾರವಷ್ಟೇ ಸ್ಪೀಕರ್ ಯು ಟಿ ಖಾದರ್ ಹಾಗೂ ಸಭಾಪತಿ ಬಸವರಾಜ ಹೊರಟ್ಟಿಯವರು ಪ್ರವಾಸ ಮಾರ್ಗದರ್ಶಿಗೆ ಚಾಲನೆ ನೀಡಿದ್ದರು. ಬೆಂದಕಾಳೂರಿನ ಹೆಗ್ಗುರುತು, ರಾಜ್ಯದ ಆಡಳಿತ ಶಕ್ತಿಸೌಧ ಅಂತನೇ ಕರೆಯಿಸಿಕೊಳ್ಳುವ ವಿಧಾನಸೌಧ ಈಗ ಪ್ರವಾಸಿ ತಾಣ. ಇಲ್ಲಿಯವರೆಗೂ ಕೇವಲ ಗೇಟ್ ಹೊರಭಾಗದಿಂದ, ರಸ್ತೆಯಿಂದ ಕಾಣಿಸುತ್ತಿದ್ದ ವಿಧಾನಸೌಧ ಇನ್ನು ಮುಂದೆ ಪ್ರವಾಸಿ ಸ್ಥಳ ಆಗಲಿದೆ. ಪ್ರವಾಸಿ ಮಾರ್ದರ್ಶಿ ಹೆಸರಲ್ಲಿ ಸಾರ್ವಜನಿಕರ ವೀಕ್ಷಣೆಗೆ ಸರ್ಕಾರ ಅವಕಾಶ ನೀಡಿದೆ.
ವಿಧಾನಸೌಧದ ಇತಿಹಾಸ
ಕರ್ನಾಟಕದ ವಿಧಾನಸೌಧದ ಇತಿಹಾಸ ಮೈಸೂರು ರಾಜ್ಯದ (ಈಗಿನ ಕರ್ನಾಟಕ) ಎರಡನೇ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರೊಂದಿಗೆ ಬೆಸೆದುಕೊಂಡಿದೆ. ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುವ ಒಂದು ಶಾಸಕಾಂಗ ಕಟ್ಟಡದ ಕನಸು ಕಂಡಿದ್ದ ಕೆಂಗಲ್ ಹನುಮಮಂತಯ್ಯ, ಅದರಂತೆ ಇಡೀ ದೇಶವೇ ತಿರುಗಿ ನೋಡುವಂತಹ ಭವ್ಯ ಕಟ್ಟಡವನ್ನು ಕಟ್ಟುವ ಮೂಲಕ ಇತಿಹಾಸ ನಿರ್ಮಿಸಿದರು.
1951 ರಲ್ಲಿ ಆರಂಭವಾದ ವಿಧಾನಸೌಧ ನಿರ್ಮಾಣ ಕಾಮಗಾರಿ, 1956ರಲ್ಲಿ ಪೂರ್ಣಗೊಂಡಿತು. ಇದು ಆ ಕಾಲಕ್ಕೆ ವಾಸ್ತುಶಿಲ್ಪ ಕ್ಷೇತದಲ್ಲಿ ಗಮನಾರ್ಹ ಸಾಧನೆಯಾಗಿತ್ತು. ವಾಸ್ತುಶಿಲ್ಪದ ದೃಷ್ಟಿಯಿಂದ ವಿಧಾನಸೌಧವು ಇಂಡೋ-ಸಾರ್ಸೆನಿಕ್, ರಾಜಸ್ಥಾನಿ ಮತ್ತು ಬ್ರಿಟಿಷ್ ವಸಾಹತುಶಾಹಿ ವಾಸ್ತುಶಿಲ್ಪದ ಅಂಶಗಳನ್ನು ಒಳಗೊಂಡಿರುವ ನವ-ದ್ರಾವಿಡ ಶೈಲಿಯ ಅದ್ಭುತ ಉದಾಹರಣೆಯಾಗಿದೆ.
ಪ್ರತೀ ಭಾನುವಾರ ಹಾಗೂ ತಿಂಗಳಿನ ಎರಡನೇ ಮತ್ತು ನಾಲ್ಕನೇ ಶನಿವಾರ, ವಿಧಾನಸೌಧ ಮಾರ್ಗದರ್ಶಿ ಪ್ರವಾಸ ಇರಲಿದೆ. ವಿಧಾನಸೌಧವನ್ನು ನೋಡಲು ಬಯಸುವ ಜನರು, ಟಿಕೆಟ್‌ಗಳನ್ನು https://kstdc.co/activities ವೆಬ್‌ಸೈಟ್‌ನಲ್ಲಿ ಬುಕ್ ಮಾಡಿಕೊಳ್ಳಬೇಕು.