ರಾಜ್ಯದ ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆ ಎಚ್‌ಸಿಜಿ ವಿರುದ್ಧ ಅಕ್ರಮ ಕ್ಲಿನಿಕಲ್ ಟ್ರಯಲ್ ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಹಾಗೂ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ ಸಿಒ)ಗೆ ಅವರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಕೋರಿದೆ.
ಎಚ್‌ಸಿಜಿಯ ನೈತಿಕ ಸಮಿತಿ ಮಾಜಿ ಮುಖ್ಯಸ್ಥರಾದ ನ್ಯಾಯಮೂರ್ತಿ ಪಿ ಕೃಷ್ಣಭಟ್ ಅವರು ಕ್ಲಿನಿಕಲ್ ಟ್ರಯಲ್ ಚಟುವಟಿಕೆಗಳಲ್ಲಿ ನ್ಯಾಯೋಚಿತವಲ್ಲದ ನಿಯಮ ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
ಪಿ ಕೃಷ್ಣಭಟ್ ಅವರು ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕ್ಲಿನಿಕಲ್ ಟ್ರಯಲ್ ಚಟುವಟಿಕೆಗಳ ಕುರಿತು ಆಡಳಿತ ಮಂಡಳಿಯ ಗಮನಕ್ಕೆ ತಂದು ಸರಿಪಡಿಸುವ ಕೆಲಸವನ್ನು ಪ್ರಯತ್ನಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಆ ವಿಚಾರವನ್ನೇ ಮುಚ್ಚಿಹಾಕುವ ಪ್ರಯತ್ನ ನಡೆದ ಕಾರಣ ಇದರಿಂದ ಬೇಸತ್ತ ಕೃಷ್ಣಭಟ್ ನೈತಿಕ ಸಮಿತಿ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅತ್ತ ಮೋದಿ ಕೃಷಿಕರ ಕತ್ತು ಹಿಸುಕಿದ್ದಾರೆ, ಇತ್ತ ಸಿದ್ದು ಕೈ ಜೋಡಿಸಿದ್ದಾರೆ!
ಗಂಭೀರ ಆರೋಪಗಳ ಬೆನ್ನಲ್ಲೇ ಆಸ್ಪತ್ರೆಯ ಸಿಇಓ, ನಿರ್ದೇಶಕರು ಪದತ್ಯಾಗ ಮಾಡಿದ್ದಾರೆ. ಸಾಲು ಸಾಲಾಗಿ ವೈದ್ಯರು ಕೂಡ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಕ್ಯಾನ್ಸರ್ ಚಿಕಿತ್ಸೆಗೆ ಹಣ ಹೊಂದಿಸಲು ಆಗದ ಬಡ ರೋಗಿಗಳನ್ನೇ ಕ್ಲಿನಿಕಲ್ ಟ್ರಯಲ್‌ಗೆ ಗುರಿ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇಂತಹ ರೋಗಿಗಳನ್ನು ಟ್ರಯಲ್‌ಗೆ ಶಿಫಾರಸು ಮಾಡಿ ಎಂದು ಕ್ಲಿನಿಕಲ್ ಟ್ರಯಲ್ ನಿರ್ದೇಶಕ ಡಾ.ಸತೀಶ್ ಕೆಲವು ತಿಂಗಳ ಹಿಂದೆ ಬೆಂಗಳೂರು ಆಂಕಾಲಜಿ ಗ್ರೂಪ್ ವಾಟ್ಸಾಪ್ ಗ್ರೂಪ್ನಲ್ಲಿ ಸಂದೇಶ ಕಳುಹಿಸಿದ್ದರು. ಇದಕ್ಕೆ ಅದೇ ಗ್ರೂಪ್ನಲ್ಲಿದ್ದ ಕೆಲವು ವೈದ್ಯರು ತೀಕ್ಷ್ಣ ತಿರುಗೇಟು ಕೊಟ್ಟಿದ್ದರು ಎನ್ನಲಾಗಿದೆ.
ಕ್ಲಿನಿಕಲ್ ಟ್ರಯಲ್ ಮಾಡುವುದರಿಂದ ಆಸ್ಪತ್ರೆಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ಹರಿದು ಬರಲಿದೆ. ಇದೇ ಉದ್ದೇಶದಿಂದ ಆಘಾತಕಾರಿ ಕ್ಲಿನಿಕಲ್ ಟ್ರಯಲ್ಗಳನ್ನು ಆಸ್ಪತ್ರೆ ನಡೆಸುತ್ತಿತ್ತು. ಹೆಚ್ಚಿನ ಲಾಭದ ಉದ್ದೇಶಕ್ಕಾಗಿ ಕ್ಲಿನಿಕಲ್ ಟ್ರಯಲ್‌ಗೆ ರೋಗಿಗಳ ಸೇರ್ಪಡೆ ವಿಚಾರದಲ್ಲಿ ಹೆಚ್ಚು ವಿನಾಯತಿ ನೀಡುತ್ತಿತ್ತು ಎಂದು ಆಸ್ಪತ್ರೆ ವಿರುದ್ಧ ಆರೋಪಿಸಲಾಗಿದೆ.
2023ರಲ್ಲಿ ಅಮೆರಿಕ ಮೂಲದ ಔಷಧೀಯ ದಿಗ್ಗಜ ಎಲಿ ಲಿಲ್ಲಿ ಸಂಸ್ಥೆ, ಕ್ಲಿನಿಕಲ್ ಟ್ರಯಲ್‌ಗೆ ಆರ್ಥಿಕವಾಗಿ ಹಿಂದುಳಿದಿರುವ ಬಡ ರೋಗಿಗಳನ್ನು ಬಳಸುತ್ತಿರುವ ಕುರಿತು ಶಿಷ್ಟಾಚಾರ ಉಲ್ಲಂಘನೆ ಉಲ್ಲೇಖಿಸಿ, ಎಚ್‌ಸಿಜಿಯೊಂದಿಗಿನ ಕ್ಲಿನಿಕಲ್ ಅಧ್ಯಯನ ಸ್ಥಗಿತಗೊಳಿಸಿತ್ತು. ಈ ಬೆಳವಣಿಗೆ ನಂತರ, ಎಚ್‌ಸಿಜಿಯಲ್ಲಿ ನಡೆಸಲಾಗುತ್ತಿರುವ ಪ್ರಯೋಗಗಳ ಸ್ಥಿತಿಗತಿ, ನಿಯಮಾನುಸಾರ ಪ್ರಕ್ರಿಯೆಗಳ ಪ್ರಾಮಾಣಿಕತೆ ಹಾಗೂ ರೋಗಿಗಳ ಸುರಕ್ಷತೆ ಕುರಿತು ಕಳವಳಗಳು ಹೆಚ್ಚಾಗಿವೆ.
ಕ್ಲಿನಿಕಲ್ ಟ್ರಯಲ್ ವೇಳೆ ಸಂಭವಿಸುವ ರೋಗಿಗಳ ಸಾವಿಗೆ ಸಂಬಂಧಿಸಿದ ವರದಿ ಮಾಡುವ ವಿಚಾರದಲ್ಲಿ ಮಾರ್ಗಸೂಚಿಗಳಿಗೆ ಆಸ್ಪತ್ರೆ ಬದ್ಧವಾಗಿಲ್ಲ. ಇದು ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಗೆ ವಿರುದ್ಧ ಎಂದು ನ್ಯಾ. ಕೃಷ್ಣ ಭಟ್ ಎತ್ತಿ ತೋರಿಸಿದ್ದರು. ಇಂತಹ ನಿಯಮ ಉಲ್ಲಂಘನೆಗಳು ಆಸ್ಪತ್ರೆಯ ಪ್ರತಿಷ್ಠೆಗೆ ಕುಂದು ತರುತ್ತವೆ. ಔಷಧ ಕಂಪನಿಗಳು ಸಹಯೋಗದಿಂದ ಹಿಂದೆ ಸರಿಯಬಹುದು ಎಂದು ಎಚ್ಚರಿಸಿದ್ದರು.