ಬೇಸಿಗೆ ಧಗೆಯ ನಡುವೆ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ ಉಂಟಾಗಿರುವ ಕಾರಣ ಮಳೆಯಾಗುತ್ತಿದೆ. ಕರ್ನಾಟಕವೂ ಸೇರಿದಂತೆ ಕರಾವಳಿ ರಾಜ್ಯಗಳಲ್ಲಿ ಇನ್ನೂ ಎರಡು ದಿನ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರ್ನಾಟಕದ 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಒಡಿಶಾ ಕರಾವಳಿ ಭಾಗದ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಪರಿಣಾಮ, ಚಂಡಮಾರುತ ಬೀಸುತ್ತಿದೆ. ಗಂಟೆಗೆ 40-50 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಒಡಿಶಾ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಮಳೆಯಾಗಿದೆ ಎಂದು ಇಲಾಖೆ ಹೇಳಿದೆ.
ಕರ್ನಾಟಕದ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರಿನ ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ದಾವಣಗೆರೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಇತರ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಈ ವರದಿ ಓದಿದ್ದೀರಾ?: ಗಚ್ಚಿಬೌಲಿ ಅರಣ್ಯದಲ್ಲಿ ಐಟಿ ಪಾರ್ಕ್: ವಿದ್ಯಾರ್ಥಿಗಳ ಹೋರಾಟಕ್ಕೆ ಬಿಆರ್‌ಎಸ್ ಬೆಂಬಲ; ರಾಹುಲ್ ಗಾಂಧಿ ಮೌನ
ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ರಾಜಾಜಿನಗರ, ವಿಧಾನಸೌಧ, ಶಿವಾಜಿ ನಗರ, ಹೆಚ್ಎಸ್ ಆರ್ ಲೇಔಟ್, ಕೆಆರ್ ಮಾರುಕಟ್ಟೆ, ಚಾಮರಾಜಪೇಟೆ, ಬಸವನಗುಡಿ, ಜಯನಗರ, ಹೊರ ವರ್ತುಲ ರಸ್ತೆ ಸೇರಿದಂತೆ ಹಲವೆಡೆ ಗುರುವಾರ ಮಳೆಯಾಗಿದೆ. ಈ ಪ್ರದೇಶಗಳಲ್ಲಿ ಸುರಿದ ಸಾಧಾರಣ ಮಳೆಗೆ ನಗರವಾಸಿಗಳು ಹೈರಾಣಾಗಿದ್ದಾರೆ. ನಗರದ ಹಲವೆಡೆ ಮರಗಳು ಧರೆಗುರುಳಿವೆ. ಮನೆಗಳು, ಕಾರುಗಳು ಜಖಂಗೊಂಡಿವೆ. ಶುಕ್ರವಾರವೂ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ.