ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರ ಜೋರು ಮಳೆಯಾಗಿದೆ. ರಾಜಧಾನಿಯಲ್ಲಿ ಇಂದು ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ನಿರ್ಮಾನವಾಗಿತ್ತು. ಸಂಜೆ 5 ಗಂಟೆಗೆ ಆರಂಭವಾದ ಮಳೆ 8 ಗಂಟೆವರೆಗೂ ಸುರಿದಿದೆ.
ಮಳೆಯಿಂದಾಗಿ ಬೆಂಗಳೂರಿನ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಮಳೆಯಿಂದ ಇನ್ನೂ ಆರಂಭವಾಗಿಲ್ಲ.
ಶನಿವಾರ ಸಂಜೆ ಬೆಂಗಳೂರಿನ ಶಾಂತಿನಗರ, ರಿಚ್ಮಂಡ್ ಸರ್ಕಲ್, ಕಾರ್ಪೊರೇಷನ್, ಕಬ್ಬನ್ಪಾರ್ಕ್, ಚಿನ್ನಸ್ವಾಮಿ ಮೈದಾನ, ವಿಧಾನಸೌಧ, ಕೆ.ಆರ್.ಮಾರ್ಕೆಟ್, ಮೆಜೆಸ್ಟೆಕ್, ರಾಜಾಜಿನಗರ, ಲಾಲ್ಬಾಗ್, ಜಯನಗರ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದೆ.
ಇಂದು ರಾತ್ರಿ 7:30ಕ್ಕೆ ಆರ್‌ಸಿಬಿ ವರ್ಸಸ್ ಕೆಕೆಆರ್ ಪಂದ್ಯ ಆರಂಭವಾಗಲಿದೆ. ಆದರೆ, ಪಂದ್ಯ ಆರಂಭಕ್ಕೂ ಮುನ್ನ ಮಳೆಯಾಗುತ್ತಿರುವುದರಿಂದ ಆರ್‌ಸಿಬಿ ಅಭಿಮಾನಿಗಳಲ್ಲಿ ನಿರಾಶೆ ಮೂಡಿದೆ.
ಸಂಚಾರ ದಟ್ಟನೆ
ಭಾರಿ ಮಳೆಯಾಗುತ್ತಿರುವುದರಿಂದ ನಗರದ ಹಲವು ರಸ್ತೆಗಳ ಮೇಲೆ ನೀರು ನಿಂತಿದೆ. ಹೆಬ್ಬಾಳದಲ್ಲಿ ಮಳೆ ಬರುತ್ತಿರುವುದರಿಂದ ವೀರಣ್ಣಪಾಳ್ಯ ಕಡೆಯಿಂದ ಹೆಬ್ಬಾಳ ಕಡೆ ಹೋಗುವ ರಸ್ತೆಯಲ್ಲಿ ತೀವ್ರ ಸಂಚಾರದಟ್ಟಣೆ ಉಂಟಾಗಿದೆ.
ವರ್ತೂರು ಕಡೆಯಿಂದ, ವೈಟಫಿಲ್ಡ್ ಕಡೆಗೆ ಹೋಗುವ ಮಾರ್ಗದಲ್ಲಿ, ಕಸ್ತೂರಿನಗರ ಕಡೆಯಿಂದ ಹೆಬ್ಬಾಳ ಮುಖ್ಯ ರಸ್ತೆಯ ಕಡೆಗೆ ಹೋಗುವ ಮಾರ್ಗದಲ್ಲಿ, ಬಾಗಲೂರು ಕಡೆಯಿಂದ ನಗರ ಮತ್ತು ವಿಮಾನ ನಿಲ್ದಾಣದ ಕಡೆಗೆ ಸಂಚರಿಸುವ ರಸ್ತೆಯಲ್ಲಿ ಮತ್ತು ನ್ಯಾಷನಲ್ ಗೇಮ್ಸ್ ವಿಲೇಜ್ ಗೆಟ್ನಿಂದ ಸೋನಿ ವರ್ಲ್ಡ್ ಜಂಕ್ಷನ್ ಕಡೆಗೆ ಹೋಗುವ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ನಿಧಾನವಾಗಿ ಚಲಿಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
“ಸಂಚಾರ ಸಲಹೆ / Traffic advisory”
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) May 17, 2025
ಎಂಎಸ್ ಪಾಳ್ಯ ಜಂಕ್ಷನ್ನಲ್ಲಿ ವಾಹನ ಕೆಟ್ಟು ನಿಂತಿರುವುದರಿಂದ ಯಲಹಂಕ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ,
Due to Vehicle breakdown at MS Palya junction towards Yalahanka is having slow-moving traffic. pic.twitter.com/fBxzt8dFjl
ಬೀದರ್: ಭಾರೀ ಮಳೆ
ಬೀದರ್ ಜಿಲ್ಲೆಯ ಹಲವು ಕಡೆ ಇಂದು ಸಾಯಂಕಾಲ ಗುಡುಗು ಸಹಿತವಾಗಿ ಭಾರಿ ಮಳೆಯಾಗಿದೆ. ಜಿಲ್ಲೆಯಲ್ಲಿ ಇಂದು ಮುಂಜಾನೆಯಿಂದ ಮಧ್ಯಾಹ್ನದವರೆಗೆ ಬಿಸಿಲಿನ ವಾತಾವರಣವಿತ್ತು. ಸಾಯಂಕಾಲ ಸಮಯದಲ್ಲಿ ಮೋಡವಾಗಿ ಗುಡುಗು ಹಾಗೂ ಬಿರುಗಾಳಿ ಸಹಿತ ಮಳೆಯಾಗಿದೆ.
ಬೀದರ್ ನಗರ ಸೇರಿದಂತೆ ನೌಬಾದ್ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಭಾರಿ ಮಳೆಯಾಗಿದೆ. ಜಿಲ್ಲೆಯಲ್ಲಿ ಇಂದು ಸೇರಿದಂತೆ ರವಿವಾರ ಹಾಗೂ ಸೋಮವಾರ ಇದೆ ರೀತಿಯ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.