ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ 11 ಮಂದಿ ಮೃತಪಟ್ಟ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿಎಂ ಜೋಷಿ ಅವರ ವಿಭಾಗೀಯ ಪೀಠ ಸರ್ಕಾರಕ್ಕೆ ನೋಟಿಸ್ ನೀಡಿದೆ.
ವಿಚಾರಣೆ ವೇಳೆ ಸರ್ಕಾರಕ್ಕೆ ಹೈಕೋರ್ಟ್ ಪೀಠ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದೆ. ಯಾವ ರೀತಿಯ ವೈದ್ಯಕೀಯ ಸೌಲಭ್ಯ ಮಾಡಲಾಗಿತ್ತು? ಇಂತಹ ಘಟನೆ ಆದಾಗ ಏನೆಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿತ್ತು? ಏನಾದರೂ ಎಸ್‌ಓಪಿ ಮಾಡಿಕೊಳ್ಳಲಾಗಿತ್ತಾ? ಹಿಂದಿನ ದಿನ ಸಂಭ್ರಮದ ವೇಳೆ ಬೆಳಗಿನ ಜಾವ 4 ಗಂಟೆವರೆಗೆ ಕೆಲಸ ಮಾಡಿದ್ದ ಪೊಲೀಸರು ಮತ್ತೆ ಬೆಳಗ್ಗೆ 11 ಗಂಟೆಯಿಂದ ಬಂದೋಬಸ್ತ್ ನೀಡಲು ಆಗುತ್ತಿತ್ತಾ? ಇಂತಹ ಕಾರ್ಯಕ್ರಮಗಳನ್ನು ಮಾಡುವಾಗ ನಿಯಮಗಳು ಇರಬೇಕು ತಾನೆ ಎಂದು ಪ್ರಶ್ನೆ ಮಾಡಿದೆ.
ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಮ್ಯಾಜಿಸ್ಟ್ರೇಟ್ ತನಿಖೆ ನಡೆಸುತ್ತಿರುವುದಾಗಿ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ನ್ಯಾಯಾಲಯಕ್ಕೆ ತಿಳಿಸಿದರು. ಈ ವೇಳೆ ಈ ಘಟನೆಗೆ ಯಾರು ಹೊಣೆ? ಕ್ರಿಕೆಟ್ ಮಂಡಳಿಯಾ? ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಾ? ಅಂತ ಪೀಠ ಪ್ರಶ್ನಿಸಿದೆ.
ಇದಕ್ಕೆ ಕೋರ್ಟ್‌ಗೆ ಮಾಹಿತಿ ನೀಡಿದ ಅಡ್ವೊಕೇಟ್ ಜನರಲ್ ಶಶಿಕಿರಣ್, ಜೂನ್ 4 ರಂದು 1 ಸಾವಿರ ಪೊಲೀಸರ ಜೊತೆ ಬಂದೋಬಸ್ತ್ ಮಾಡಲಾಗಿತ್ತು. ನಗರ ಪೊಲೀಸ್ ಆಯುಕ್ತ, ಡಿಸಿಪಿ ಸೇರಿ ಎಲ್ಲ ಬಂದೋಬಸ್ತ್ ಮಾಡಲಾಗಿತ್ತು. 1,643 ಪೊಲೀಸರ ನಿಯೋಜನೆ ಆಗಿತ್ತು, ಮೂರು ಅಂಬುಲೆನ್ಸ್ ಇತ್ತು ಎಂದು ಕೋರ್ಟ್‌ಗೆ ತಿಳಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಭಿಮಾನಿಗಳ ಅತಿರೇಕ ಮತ್ತು ಸರ್ಕಾರದ ಅವಿವೇಕ
2.5 ಲಕ್ಷಕ್ಕೂ ಹೆಚ್ಚು ಜನ ಕ್ರೀಡಾಂಗಣದ ಬಳಿ ಬಳಿ ಸೇರಿಕೊಂಡಿದ್ದರು. ಘಟನೆಯಲ್ಲಿ 11 ಜನ ಸಾವನ್ನಪ್ಪಿದ್ದಾರೆ. 56 ಜನ ಗಾಯಾಳುಗಳಾಗಿದ್ದಾರೆ. ಕೆಲವರು ನಾಳೆ ಸಂಜೆ ಒಳಗೆ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಲಿದ್ದಾರೆ. ಮೃತಪಟ್ಟವರಲ್ಲಿ 6 ಜನ ಪುರುಷರು, 5 ಮಹಿಳೆಯರಾಗಿದ್ದಾರೆ. ವಿಜಯೋತ್ಸವಕ್ಕೆ ಕೋಲಾರ, ಯಾದಗಿರಿ, ತುಮಕೂರು ಎಲ್ಲ ಕಡೆಯಿಂದ ಬಂದಿದ್ದರು. ಹೊರ ರಾಜ್ಯದಿಂದಲೂ ಜನ ಬಂದಿದ್ದರೆಂದು ಶಶಿಕಿರಣ್ ಅವರು ಕೋರ್ಟ್ ಗಮನಕ್ಕೆ ತಂದರು.
ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿಗಳು, ಹೆಚ್ಚಿನ ಜನ ಸೇರಿದ್ದಾಗ ಎಚ್ಚರಿಕೆ ಹೇಗೆ ವಹಿಸುತ್ತೀರಿ? ಎಸ್ಓಪಿ ಇರಬೇಕಿತ್ತಲ್ಲವೆ ಎಂದು ಪ್ರಶ್ನಿಸಿದರು. ಇದಕ್ಕೆ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಎಜಿ ಸ್ಪಷ್ಟಪಡಿಸಿದರು.
ವಕೀಲ ಹೇಮಂತ್, ರಂಗನಾಥ್ ರೆಡ್ಡಿ ವಾದ ಮಂಡಿಸಿ ಸರ್ಕಾರದಿಂದ ನಾಲ್ಕು ಸ್ಪಷ್ಟನೆ ಬೇಕು ಅಂತ ಕೇಳಿದರು. ಯಾರು ಕಾರ್ಯಕ್ರಮ ಮಾಡಿದ್ದು? ಅವರು ಯಾವ ದೇಶಕ್ಕೆ ಆಡಿದ್ದರು? ಏಕಕಾಲಕ್ಕೆ ಎರಡೂ ಕಡೆ ಕಾರ್ಯಕ್ರಮ ಮಾಡಲು ಸೂಚನೆ ಕೊಟ್ಟವರು ಯಾರು? ಯಾವ ಮುಂಜಾಗ್ರತೆ ಇತ್ತು? ಸರ್ಕಾರದ ಕಾರ್ಯಪಡೆಯ ಯೋಜನೆ ಏನಿತ್ತು? ಇದೆಲ್ಲದರ ಬಗ್ಗೆ ಸ್ಪಷ್ಟನೆ ಕೊಡಲು ಸೂಚಿಸುವಂತೆ ಕೋರ್ಟ್‌ಗೆ ಮನವಿ ಮಾಡಿಕೊಂಡರು.
ಸಾಮಾಜಿಕ ಮಾಧ್ಯಮದಲ್ಲಿ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಎಂದು ಹೇಳಿದ್ದಾರೆ. ಅದರ ಬಗ್ಗೆ ಸ್ಪಷ್ಟನೆ ಇಲ್ಲ. ಬಿಸಿಸಿಐ ಹಾಗೂ ಐಪಿಎಲ್‌ಗೂ ನೋಟಿಸ್ ಜಾರಿ ಮಾಡಬೇಕು ಎಂದು ರಂಗನಾಥ್ ರೆಡ್ಡಿ ವಾದ ಮಂಡಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಮಂಗಳವಾರಕ್ಕೆ ವಿಚಾರಣೆ ಮುಂದೂಡಿದರು.