- ಕಾಮಗಾರಿ ಪೂರ್ಣಗೊಳ್ಳುವ ಮುನ್ನ ಎಕ್ಸ್‌ಪ್ರೆಸ್ ವೇ ಉದ್ಘಾಟನೆ
- ಅಪಘಾತಗಳನ್ನು ತಡೆಗಟ್ಟಲು ಸುರಕ್ಷತಾ ಕ್ರಮ ಕೈಗೊಳ್ಳಬೇಕು
“ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಸಾಕಷ್ಟು ಅಪೂರ್ಣ ಕಾಮಗಾರಿಗಳನ್ನು ಹೊಂದಿದ್ದು, ಅಪಘಾತಗಳು ಮತ್ತು ಸಾವುಗಳನ್ನು ಕಡಿಮೆ ಮಾಡಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಬೇಕು” ಎಂದು ಎಡಿಜಿಪಿ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ಹೇಳಿದ್ದಾರೆ.
ಮೈಸೂರು ಜಿಲ್ಲಾ ಪೊಲೀಸ್, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮತ್ತು ಎನ್‌ಎಚ್‌ಎಐ ಅಧಿಕಾರಿಗಳೊಂದಿಗೆ ಬುಧವಾರ ಮೈಸೂರಿನಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಎಕ್ಸ್‌ಪ್ರೆಸ್ ವೇಯಲ್ಲಿನ ಬಹಳಷ್ಟು ಕೆಲಸಗಳು ಇನ್ನೂ ಅಪೂರ್ಣವಾಗಿವೆ. ಬೆಂಗಳೂರಿನಿಂದ ಮೈಸೂರುವರೆಗಿನ 118.6 ಕಿಮೀ ವ್ಯಾಪ್ತಿಯಲ್ಲಿ 20ರಿಂದ 25 ಅಪಘಾತ ಸ್ಥಳಗಳನ್ನು ಗಮನಿಸಿದ್ದೇನೆ. ಎನ್‌ಎಚ್‌ಎಐ ಪ್ರಾಯೋಗಿಕ ಆಧಾರದ ಮೇಲೆ ಸ್ವಯಂಚಾಲಿತ ಸಂಖ್ಯೆ-ಪ್ಲೇಟ್ ಗುರುತಿಸುವಿಕೆ ಕ್ಯಾಮೆರಾವನ್ನು ಸ್ಥಾಪಿಸಿದೆ. ಆದರೆ, ಅದು ಸಾಕಾಗುವುದಿಲ್ಲ. ಅಪಘಾತಗಳನ್ನು ತಡೆಗಟ್ಟಲು ಅವರು ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ” ಎಂದರು.
“ಇತ್ತೀಚೆಗೆ ಮೂರು ದಿನಗಳ ಕಾಲ ಎಕ್ಸ್‌ಪ್ರೆಸ್ ವೇ ಪರಿಶೀಲಿಸಿದ ಎನ್‌ಎಚ್‌ಐಎ ತಜ್ಞರ ತಂಡವು ವರದಿ ಸಲ್ಲಿಸಲಿದೆ. ವರದಿ ಆಧರಿಸಿ ಎನ್‌ಎಚ್‌ಎಐ ಕಾಮಗಾರಿ ಕೈಗೆತ್ತಿಕೊಳ್ಳಲಿದೆ” ಎಂದು ಎಡಿಜಿಪಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಇನ್ಸ್‌ಪೆಕ್ಟರ್ ಮೇಲೆ ಜಾತಿ ದೌರ್ಜನ್ಯ ಆರೋಪ; ಡಿಸಿಪಿ ವಿರುದ್ಧ ಕ್ರಮಕ್ಕೆ ಆಗ್ರಹ
“ಎಕ್ಸ್‌ಪ್ರೆಸ್ ವೇಯಲ್ಲಿ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಲು ಎನ್‌ಎಚ್‌ಎಐ ಅಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದೇವೆ. ಅವರು ವಿಫಲವಾದರೆ ಮತ್ತೆ ದೊಡ್ಡ ಅಪಘಾತ ಸಂಭವಿಸಿದಲ್ಲಿ ಅವರನ್ನು ನಿರ್ಲಕ್ಷ್ಯದ ಅಡಿಯಲ್ಲಿ ಬಂಧಿಸಲಾಗುತ್ತದೆ” ಎಂದು ಹೇಳಿದರು.
“ಎಕ್ಸ್‌ಪ್ರೆಸ್ ವೇ ಉದ್ಘಾಟನೆಗೂ ಮುನ್ನವೇ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಬೇಕಿತ್ತು. ಆದರೆ, ಈ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶವಿರುವುದರಿಂದ ಎನ್‌ಎಚ್‌ಎಐ ಕೂಡಲೇ ಕಾಮಗಾರಿ ಆರಂಭಿಸಬೇಕು” ಎಂದರು.