ಕೇಂದ್ರ ಸರ್ಕಾರವು ಕಾರ್ಮಿಕರ ರಾಜ್ಯ ವಿಮಾ ಯೋಜನೆ(ಇಎಸ್ಐ)ಯನ್ನು ನಾಶ ಮಾಡಿ ಖಾಸಗಿ ಆರೋಗ್ಯ ವಿಮಾ ಕಂಪನಿಗಳನ್ನು ಬೆಳೆಸುವ ಹುನ್ನಾರ ನಡೆಸುತ್ತಿದೆ. ಕೇಂದ್ರದ ಕಾರ್ಮಿಕ ವಿರೋಧಿ ಧೋರಣೆಯನ್ನು ಖಂಡಿಸಿ ಹಾಗೂ ಇಎಸ್ಐ ಯೋಜನೆ ಪ್ರಯೋಜನ ಪಡೆಯಲು ಇರುವ ಕಾರ್ಮಿಕರ ವೇತನ ಮಿತಿಯನ್ನು ₹21,000 ನಿಂದ ₹50,000 ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
“ಕಾರ್ಮಿಕರು, ಇಎಸ್ಐ ಯೋಜನೆಗೆ ಒಳಪಡಲು ಹಾಲಿ ಇರುವ ವೇತನ ಮಿತಿ ₹21,000 ಮಾತ್ರ ಇದೆ. ಇಎಸ್ಐ ಯೋಜನೆಗೆ ಒಳಪಡದ ಕಾರ್ಮಿಕರು ಬಹುತೇಕ ಖಾಸಗಿ ಆರೋಗ್ಯ ವಿಮಾ ಕಂಪನಿಗಳ ಮೆಡಿಕ್ಲೈಮ್ ಪಾಲಿಸಿ ಸೌಲಭ್ಯ ಹೊಂದಿರುತ್ತಾರೆ. ಆದರೆ, ಈ ಸೌಲಭ್ಯ ಕಾರ್ಮಿಕರು 24 ಗಂಟೆಗಳ ಕಾಲ ಒಳರೋಗಿಯಾಗಿ ಚಿಕಿತ್ಸೆ ಪಡೆದರೆ ಮಾತ್ರ ಲಭ್ಯವಿದೆ” ಎಂದು ಕರ್ನಾಟಕ ವರ್ಕರ್ಸ್ ಯೂನಿಯನ್ನ ಪ್ರಧಾನ ಕಾರ್ಯದರ್ಶಿ ಕೆ.ಎನ್ ರಾಜನ್ ಹೇಳಿದ್ದಾರೆ.
“ಕಾರ್ಮಿಕರ ಪೋಷಕರಿಗೆ ಖಾಸಗಿ ಮೆಡಿಕ್ಲೈಮ್ ಅಡಿಯಲ್ಲಿ ಚಿಕಿತ್ಸಾ ಸೌಲಭ್ಯವಿಲ್ಲ. ಎಲ್ಲ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ದೊರೆಯುವುದಿಲ್ಲ. ಖಾಸಗಿ ವಿಮಾ ಕಂಪನಿಗಳು ಹಾಗೂ ಖಾಸಗಿ ಆಸ್ಪತ್ರೆಗಳು ಶಾಮೀಲಾಗಿ ಮೆಡಿಕ್ಲೈಮ್ ಹೆಸರಿನಲ್ಲಿ ಹಣ ಕೊಳ್ಳೆ ಹೊಡೆಯುತ್ತಿವೆ” ಎಂದು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚೈತ್ರಾ ಪ್ರಕರಣ | ಸಮಗ್ರ ತನಿಖೆ ನಡೆಸಿ, ಕಾಣದ ಕೈ ಪತ್ತೆ ಹಚ್ಚಲು ಜನಪರ ಸಂಘಟನೆಗಳ ಆಗ್ರಹ
“ಕೇಂದ್ರ ಸರ್ಕಾರ ಸಹ ಖಾಸಗಿ ವಿಮಾ ಕಂಪನಿಗಳ ಜೊತೆ ಶಾಮೀಲಾಗಿದೆ. ಆರೋಗ್ಯ ಚಿಕಿತ್ಸೆ ಖರ್ಚುಗಳು, ವಿಪರೀತವಾಗಿರುವ ಇಂದಿನ ದಿನಗಳಲ್ಲಿ ಎಲ್ಲ ಕಾರ್ಮಿಕರು ಇಎಸ್ಐ ಯೋಜನೆಗೆ ಒಳಪಡುವುದು ಅತ್ಯಂತ ಅವಶ್ಯವಾಗಿದೆ. ಹಾಗಾಗಿ, ಇಎಸ್ಐ ಯೋಜನೆಗೆ ಒಳಪಡಲು ಕಾರ್ಮಿಕರ ವೇತನ ಮಿತಿಯನ್ನು ₹21,000 ರಿಂದ ₹50,000 ಕ್ಕೆ ಏರಿಸಲು ಕೇಂದ್ರ ಸರ್ಕಾರ ಕ್ರಮವಹಿಸಬೇಕು” ಎಂದು ಮನವಿ ಮಾಡಿದ್ದಾರೆ.
“ಸೆ.21 ರಂದು ಇಎಸ್ಐ ಪ್ರಾದೇಶಿಕ ಕಛೇರಿ ಮುಂದೆ ಶಾಂತಿಯುತ ಧರಣಿ ನಡೆಸಿ, ಇಎಸ್ಐ ಪ್ರಾದೇಶಿಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು. ಅವರು ಈ ಮನವಿಯನ್ನು ಕೆಂದ್ರ ಸರ್ಕಾರಕ್ಕೆ ತಲುಪಿಸಲಾಗುವುದು ಎಂದು ತಿಳಿಸಿದ್ದಾರೆ” ಎಂದು ಈ ದಿನ.ಕಾಮ್ಗೆ ಕಾರ್ಮಿಕರೊಬ್ಬರು ತಿಳಿಸಿದರು.