ಕವಿರಾಜಮಾರ್ಗದ ಪದ್ಯದಲ್ಲಿ ಕಾವೇರಿಯಿಂದ ಗೋದಾವರಿವರೆಗೆ ಕರ್ನಾಟಕ ನಾಡು ಇದೆ ಎಂದು ಹೇಳುತ್ತದೆ. ಕರ್ನಾಟಕಕ್ಕೆ ಕನ್ನಡ ನಾಡು ಎಂದು ಹೇಳುತ್ತದೆ. ಈ ಕನ್ನಡ ನಾಡಿಗೆ ಸಂವಿಧಾನ ಯಾವುದು? ಪರ ಧರ್ಮ, ಪರ ವಿಚಾರಗಳನ್ನು ಸಹಿಸುವುದೇ ಅದರ ನೀತಿ ಎಂದು ಪದ್ಯ ಹೇಳುತ್ತದೆ. ಆ ಒಂದು ಪದ್ಯ, ಕರ್ನಾಟಕದ ಭೂಮಿ, ಜನರು, ವಿಶಿಷ್ಟತೆ, ಹೆಸರು, ಇರಬೇಕಾದ ಪ್ರಮುಖ ನೀತಿಗಳ ಕುರಿತು ವ್ಯಾಖ್ಯಾನ ಮಾಡುತ್ತದೆ. ಭಾರತವು ಕೇಂದ್ರೀಯ ವ್ಯವಸ್ಥೆಯಲ್ಲ. ಒಕ್ಕೂಟ ವ್ಯವಸ್ಥೆ. ಯಾರೂ ಯಾರ ಮೇಲೂ ಯಾವುದನ್ನೂ ಹೇರಲು ಸಾಧ್ಯವಿಲ್ಲ ಎಂದು ಸಾಮಾಜಿಕ ಚಿಂತಕ ಪ್ರೊ. ರಹಮತ್ ತರೀಕೆರೆ ಹೇಳಿದ್ದಾರೆ.
ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ನೆನಪಿನಲ್ಲಿ ಆಯೋಜಿಸಲಾಗಿದ್ದ ‘ಗಂಡಾಂತರದಲ್ಲಿ ಗಣರಾಜ್ಯ’ ಚಿಂತನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕವು ಸದಸ್ಯವಾಗಿದೆ. ಪ್ರತಿ ಒಕ್ಕೂಟವು ನೈಸರ್ಗಿಕವಾದ ಹಕ್ಕುಗಳನ್ನು ಹೊಂದಿರುತ್ತದೆ. ಅದರಲ್ಲಿ ಭಾಷೆಯನ್ನ ಕೇಂದ್ರೀಕರಿಸಿ, ರಾಜ್ಯವು ಸಂಘಟಿತವಾಗಬಹುದು. ಹೀಗಾಗಿಯೇ, ಸ್ವಾತಂತ್ರ್ಯ ಹೋರಾಟದ ಜೊತೆಗೆ ನಮ್ಮ ಹಿರಿಕರು ಏಕೀಕರಣ ಚಳುವಳಿಯನ್ನೂ ನಡೆಸಿದರು ಎಂದು ವಿವರಿಸಿದರು.
“ರಾಜ್ಯದಲ್ಲಿನ ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ಏಕೀಕರಣ ಚಳುವಳಿಯಲ್ಲಿಯೂ ಭಾಗಿಯಾಗಿದ್ದರು. ಕರ್ನಾಟಕದ ರಾಷ್ಟ್ರೀಯತೆ ಬಗ್ಗೆ ನಮ್ಮ ಹಿರಿಯರು ದೇಶದ ಸ್ವಾತಂತ್ರ್ಯ ಮತ್ತು ರಾಜ್ಯದ ಏಕೀಕರಣ ಎರಡೂ ಒಟ್ಟಿಗೆ ನಡೆಯಬೇಕು ಎಂದು ಹೇಳಿದ್ದರು. ಆಲೂರು ವೆಂಕಟರಾಯರು ‘ಕರ್ನಾಟಕತ್ವದ ಸೂತ್ರಗಳು’ ಎಂದು ಪುಸ್ತಕವನ್ನು ಬರೆದಿದ್ದರು. ಅದರಲ್ಲಿ ಹಲವು ಸಮಸ್ಯೆಗಳಿದ್ದರೂ, ಅದು ಬಹಳ ಮಹತ್ವದ ಸಂಗತಿಗಳನ್ನು ಒಳಗೊಂಡಿದೆ. ಕರ್ನಾಟಕ ಏಕೀಕರಣದ ಬಳಿಕ ಅವರು ಕರ್ನಾಟಕತ್ವದ ಬಗ್ಗೆ ಬರೆದಿದದ್ದು ಮಹತ್ವದ್ದು. ಕರ್ನಾಟಕದ ಮೂಲಕವೇ ಜಗತ್ತನ್ನು ನೋಡಬೇಕೆಂದು ಅವರು ಹೇಳಿದ್ದರು. ನಮ್ಮ ಹಿರಿಯರೂ ಕೂಡ ಅದನ್ನೇ ಹೇಳಿದ್ದರು” ಎಂದು ತಿಳಿಸಿದರು.
“ನಮ್ಮ ‘ಜನಗಣಮನ’ ಭಾರತವನ್ನು ಒಂದು ಒಕ್ಕೂಟ ಎಂದೇ ಹೇಳುತ್ತದೆ. ಭಾರತದ ಎಲ್ಲ ರಾಜ್ಯಗಳು, ಭೂಪ್ರದೇಶದ ಬಗ್ಗೆ ಠಾಗೂರ್ ಬರೆದಿದ್ದಾರೆ. ಭಾರತದ ಸರ್ಕಾರ ಕೇಂದ್ರ ಸರ್ಕಾರವಲ್ಲ. ಒಕ್ಕೂಟ ಸರ್ಕಾರ. ಯಾರೂ ಯಾವುದೇ ರಾಜ್ಯದ ಮೇಲೆ ಯಾವುದನ್ನೂ ಹೇರಲು ಸಾಧ್ಯವಿಲ್ಲ. ಹಾಗೆ ಹೇರಲು ಯತ್ನಿಸಿದಾಗ, ನಾವು ಅದನ್ನು ವಿರೋಧಿಸುತ್ತೇವೆ. ವಿರೋಧಿಸುವ ಹಕ್ಕು ನಮಗಿದೆ. ಕರ್ನಾಟಕವಾಗಲೀ, ಭಾರತವಾಗಲೀ ಎರಡೂ ಬೇರೆ-ಬೇರೆ ಎಂಟಿಟಿಯನ್ನು ಹೊಂದಿವೆ. ಅವುಗಳಲ್ಲಿರುವ ಸಮಾನ ಸಂಗತಿ ಎಂದರೆ, ಬಹು ಧರ್ಮೀಯ, ಬಹು ಭಾಷಿಕ, ಬಹು ಸಾಂಸ್ಕೃತಿಕ ಹಾಗೂ ಬಹು ಒಳ ಪ್ರಾಂತೀಯತೆಯನ್ನು ಹೊಂದಿವೆ. ಬಹುತ್ವವು ಶಾಪವಲ್ಲ. ಅದು ಪ್ರಜಾಪ್ರಭುತ್ವದ ಮೂಲವಾಗಿದೆ. ಬಹುತ್ವವನ್ನು ಕಳೆದುಕೊಂಡಾಗ ದೇಶವು ಸಮಸ್ಯೆಯನ್ನು ಎದುರಿಸುತ್ತದೆ” ಎಂದು ರಹಮತ್ ತರೀಕೆರೆ ಹೇಳಿದರು.
“ಕುವೆಂಪುಅವರ ‘ಸರ್ವರಿಗೂ ಸಮ ಪಾಲು – ಸರ್ವರಿಗೂ ಸಮ ಬಾಳು’ ಎಂಬುದು ಆರ್ಥಿಕವಾದ ಫೆಡರಲಿಸಂಅನ್ನು ವಿವರಿಸುತ್ತದೆ. ಅಂತೆಯೇ, ‘ಇಲ್ಲಿ ಯಾರೂ ಮುಖ್ಯರಲ್ಲ’ ಎಂದು ಹೇಳುವಾಗ – ಕೇವಲ ಮನುಷ್ಯರಷ್ಟೆ ಮುಖ್ಯವಲ್ಲ. ಮನುಷ್ಯೇತರ ಜೀವಿಗಳಿಗೂ ಭೂಮಿಯಲ್ಲಿ ಹಕ್ಕಿದೆ ಎಂದು ಹೇಳುತ್ತಾರೆ. ರಾಮಯಣ, ಮಹಾಭಾರತದಂತಹ ಗ್ರಂಥಗಳು ಭಾರತಕ್ಕಿರಬಹುದು. ಆದರೆ, ಕರ್ನಾಟಕಕ್ಕೆ ಅಂತಹ ಗ್ರಂಥಗಳನ್ನು ನೀಡಿದವರಲ್ಲಿ ಮೊದಲಿಗರು ಪಂಪ. ಸ್ವಂತಿಕೆಯ ಬಗ್ಗೆ ಕನ್ನಡವು ಯಾವಾಗಲೂ ಯೋಚಿಸಿದೆ. ನಮ್ಮ ತನವನ್ನು ನಾವು ಕಾಪಾಡಿಕೊಳ್ಳಬೇಕೆಂದು ಹಲವಾರು ಚಿಂತಕರು ಹೇಳಿದ್ದಾರೆ” ಎಂದು ತಿಳಿಸಿದರು.
“ಹಲವಾರು ಸಂದರ್ಭಗಳಲ್ಲಿ, ರಾಜರ ಆಳ್ವಿಕೆ ಇದ್ದಾಗ, ಬ್ರಿಟಿಷ್ ಆಳ್ವಿಕೆ ಇದ್ದಾಗ ಕನ್ನಡಿಗರ ಮೇಲೆ ಹಲವಾರು ರೀತಿಯ ಹೇರಿಕೆಗಳು ಕಂಡುಬಂದಿವೆ. ಈಗ, ಸಂಸ್ಕೃತ, ಹಿಂದಿ ಹೇರಿಕೆ ನಡೆಯುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂಬ ಬೋರ್ಡು ಕೆಳಗಿಳಿದು, ಎಸ್‌ಬಿಐ ಬೋರ್ಡು ಮೇಲೇರುವಾಗಲೂ ನಮ್ಮ ಮೇಲಿನ ಹೇರಿಕೆ ಕಾಣಸಿಗುತ್ತಿತ್ತು. ಇಂತಹ ಹೇರಿಕೆಗಳನ್ನು ಕನ್ನಡಿಗರು ನಿರಂತವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಈಗಲೂ ವಿರೋಧಿಸುವುದು ನಡೆಯುತ್ತಲೇ ಇದೆ” ಎಂದು ವಿವರಿಸಿದರು.
“ನಮ್ಮದೆರು ಇರುವ ಈ ಸಂದರ್ಭದಲ್ಲಿ ನಾವು ಎದುರಿಸಬೇಕಿರುವ ಬಿಕ್ಕಟ್ಟಿನ ಕುರಿತು ಹೆಚ್ಚು ಚಿಂತನೆ ನಡೆಸಿದವರು ಗೌರಿ ಮತ್ತು ಕಲ್ಬುರ್ಗಿ ಅವರು. ಈ ಇಬ್ಬರೂ ಫೆಡರಲಿಸಂನ ಪ್ರತಿಪಾದಕರು. ಅವರು ಒಂದು ಧರ್ಮ, ಒಂದು ರಾಷ್ಟ್ರ, ಒಂದು ಭಾಷೆಯಂತೆ ಒಂದು ಎಂಬುದನ್ನು ನಿರಂತರವಾಗಿ ವಿರೋಧಿಸುತ್ತಾ ಬಂದವರು. ಅವರ ಆಲೋಚನೆಗಳು ಅರ್ಥಪೂರ್ಣ ಪ್ರಜಾಪ್ರಭುತ್ವವನ್ನು, ಅರ್ಥಪೂರ್ಣ ಭಾರತವನ್ನು ಹಾಗೂ ಆರ್ಥಪೂರ್ಣ ಸಂವಿಧಾನದ ವ್ಯಾಖ್ಯಾನವನ್ನು ಹುಡುಕುತ್ತಿದ್ದವು. ಆ ಕಾರಣಕ್ಕಾಗಿಯೇ ಗೌರಿ ಹತ್ಯೆಯಾದರು. ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ನಾವು ಚರ್ಚಿಸುವ ಅಗತ್ಯವಿದೆ” ಎಂದರು.