ಪ್ರತಿ 'ನಮ್ಮ ಕ್ಲಿನಿಕ್' 10ರಿಂದ 20 ಸಾವಿರ ಜನರಿಗೆ ಸೇವೆ ಒದಗಿಸಲಿವೆ ಎಂದು ಬಿಜೆಪಿ ಸರ್ಕಾರ ಕ್ಲಿನಿಕ್ ಉದ್ಘಾಟನೆಗೂ ಮುನ್ನ ತಿಳಿಸಿತ್ತು. ಈಗ ನೋಡಿದರೆ, ಪ್ರತಿ ಕ್ಲಿನಿಕ್ಗಳು ಸಾವಿರ ಜನರಿಗಿರಲಿ, ನೂರಲ್ಲ, ಕನಿಷ್ಠ 10 ಜನಕ್ಕೂ ತನ್ನ ಸೇವೆ ಒದಗಿಸುವಲ್ಲಿ ವಿಫಲವಾಗಿವೆ.
ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ನಮ್ಮ ಕ್ಲಿನಿಕ್ ತೆರೆಯಲಾಗಿದೆ. ದೆಹಲಿ ‘ಮೊಹಲ್ಲಾ ಕ್ಲಿನಿಕ್’ ಮಾದರಿಯಲ್ಲಿ ರಾಜ್ಯದಲ್ಲಿ ನಮ್ಮ ಕ್ಲಿನಿಕ್ ಪ್ರಾರಂಭಿಸುವ ಯೋಜನೆಯನ್ನು ಬಿಜೆಪಿ ಸರ್ಕಾರ ರೂಪಿಸಿತ್ತು. ರಾಜ್ಯದೆಲ್ಲೆಡೆ ₹150 ಕೋಟಿ ವೆಚ್ಚದಲ್ಲಿ 438 ನಮ್ಮ ಕ್ಲಿನಿಕ್ ಆರಂಭ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಇವುಗಳನ್ನು ಬಿಜೆಪಿ ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಜಾರಿಗೆ ತರಲಾಗಿದೆಯೋ ಅಥವಾ ಚುನಾವಣಾ ದೃಷ್ಟಿಯಿಂದ ತರಾತುರಿಯಲ್ಲಿ ಆರಂಭಿಸಲಾಗಿದೆಯೋ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
2022 ಡಿ. 14ರಂದು ಬೆಂಗಳೂರು ಹೊರತು ಪಡಿಸಿ ರಾಜ್ಯದಾದ್ಯಂತ ಮೊದಲ ಹಂತದಲ್ಲಿ ಒಟ್ಟು 114 ನಮ್ಮ ಕ್ಲಿನಿಕ್ಗಳಿಗೆ ಚಾಲನೆ ನೀಡಲಾಗಿತ್ತು. ಬೆಂಗಳೂರಿನಲ್ಲಿ 110 ಕ್ಲಿನಿಕ್ಗಳಿಗೆ ಫೆ. 7ರಂದು ಚಾಲನೆ ನೀಡಲಾಗಿದ್ದು, ರಾಜ್ಯಾದ್ಯಂತ 224 ಕ್ಲಿನಿಕ್ಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಲ್ಲಿ 135 ಹಾಗೂ ರಾಜ್ಯದಲ್ಲಿ 81 ಸೇರಿದಂತೆ ಇನ್ನೂ 216 ಕ್ಲಿನಿಕ್ ಸ್ಥಾಪನೆ ಬಾಕಿ ಉಳಿದಿದೆ.
ರಾಜ್ಯ ಸರ್ಕಾರದ ಅನುದಾನದಲ್ಲಿ ಪ್ರತಿ ಕ್ಲಿನಿಕ್ಗೆ ವಾರ್ಷಿಕ ₹36 ಲಕ್ಷ ನೀಡಲಾಗುತ್ತದೆ. ಈ ಮೊತ್ತದಲ್ಲಿ ಸಿಬ್ಬಂದಿ ವೇತನ, ಕ್ಲಿನಿಕ್ ನಿರ್ವಹಣೆ, ಖಾಸಗಿ ಕಟ್ಟಡವಾಗಿದ್ದರೆ ಬಾಡಿಗೆ ಸೇರಿದಂತೆ ಎಲ್ಲವನ್ನೂ ನಿರ್ವಹಣೆ ಮಾಡಬೇಕು. ರಾಜ್ಯ ಸರ್ಕಾರವು ಈಗಾಗಲೇ ನಮ್ಮ ಕ್ಲಿನಿಕ್ಗೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡಿದೆ.
ಏನಿದು ‘ನಮ್ಮ ಕ್ಲಿನಿಕ್’?
ಪ್ರತಿ ನಮ್ಮ ಕ್ಲಿನಿಕ್ನಲ್ಲಿಯೂ ವೈದ್ಯಕೀಯ ಅಧಿಕಾರಿ, ನರ್ಸ್, ಲ್ಯಾಬ್ ಟೆಕ್ನೀಷಿಯನ್ ಮತ್ತು ಗ್ರೂಪ್ ಡಿ ನೌಕರ ಇರುತ್ತಾರೆ. ಬಡತನ ರೇಖೆಗಿಂತ ಕೆಳಗಿರುವ ಜನರಿಗಾಗಿ ಬಿಜೆಪಿ ಸರ್ಕಾರ ಈ ನಮ್ಮ ಕ್ಲಿನಿಕ್ಗಳನ್ನು ಆರಂಭಿಸಿದೆ. ಕೊಳಗೇರಿ ನಿವಾಸಿಗಳು, ದಿನಗೂಲಿ ಕಾರ್ಮಿಕರು ಮತ್ತು ಸಮಾಜದಲ್ಲಿರುವ ಇತರ ದುರ್ಬಲ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೇವೆ ದೊರಕಿಸಬೇಕು ಎನ್ನುವ ದೃಷ್ಟಿಯಿಂದ ಕಾರ್ಯಾರಂಭ ಮಾಡಿವೆ. ಪ್ರತಿ ನಮ್ಮ ಕ್ಲಿನಿಕ್ 10ರಿಂದ 20 ಸಾವಿರ ಜನರಿಗೆ ಸೇವೆ ಒದಗಿಸಲಿವೆ ಎಂದು ಬಿಜೆಪಿ ಸರ್ಕಾರ ಕ್ಲಿನಿಕ್ ಉದ್ಘಾಟನೆಗೂ ಮುನ್ನ ತಿಳಿಸಿತ್ತು. ಈಗ ಪ್ರತಿ ವಾರ್ಡ್ನ ನಮ್ಮ ಕ್ಲಿನಿಕ್ಗಳು ಕನಿಷ್ಠ 10 ಜನಕ್ಕೂ ತನ್ನ ಸೇವೆ ಒದಗಿಸುವಲ್ಲಿ ವಿಫಲವಾಗಿವೆ.
ಪ್ರತಿನಿತ್ಯ ಬೆಳಗ್ಗೆ 9 ರಿಂದ ಸಂಜೆ 4:30ರ ವರೆಗೆ ನಮ್ಮ ಕ್ಲಿನಿಕ್ ತೆರೆದಿರಲಿದೆ. ಸೋಮವಾರದಿಂದ ಶನಿವಾರದ ವರೆಗೆ ಜನರಿಗೆ ಸೇವೆ, ಭಾನುವಾರ ರಜೆ ಇರಲಿದೆ ಎಂದು ಮೊದಲಿಗೆ ಸಮಯ ನಿಗದಿ ಮಾಡಲಾಗಿತ್ತು. ಇದೀಗ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 110 ನಮ್ಮ ಕ್ಲಿನಿಕ್ಗಳು ಒಂದೆ ಸಮಯಕ್ಕೆ ತೆರೆಯುವುದಿಲ್ಲ. ಒಂದೊಂದು ವಾರ್ಡ್ನಲ್ಲಿ ಒಂದೊಂದು ರೀತಿಯಲ್ಲಿ ಸಮಯ ನಿಗದಿಯಾಗಿದೆ. ಸಾರ್ವಜನಿಕರಿಗೆ 24 ಗಂಟೆ ಸೇವೆ ಒದಗಿಸಬೇಕಿದ್ದ ಕ್ಲಿನಿಕ್ಗಳು ಇದೀಗ ಸಮಯದ ನಿಗದಿ ಇಲ್ಲದೇ ಕಾರ್ಯನಿರ್ವಹಿಸುತ್ತಿವೆ.
ನಗರದ ಒಂದು ವಾರ್ಡ್ನಲ್ಲಿ ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ಸಂಜೆ 4 ರಿಂದ 8 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿವೆ. ಇನ್ನೊಂದೆಡೆ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಿರ್ವಹಿಸುತ್ತಿದ್ದರೆ, ಕೆಲವೆಡೆ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ರವೆರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದುಬಂದಿದೆ.
12 ರೀತಿಯ ಸೌಲಭ್ಯಗಳಿವೆ ಎಂದಿದ್ದ ಬಿಜೆಪಿ ಸರ್ಕಾರ
ಗರ್ಭಿಣಿಯರ ತಪಾಸಣೆ ಮತ್ತು ಆರೈಕೆ, ನವಜಾತ ಶಿಶುಗಳ ಆರೈಕೆ, ಶಿಶುಗಳಿಗೆ ಚಿಕಿತ್ಸೆ, ಮಕ್ಕಳು ಮತ್ತು ಹದಿಹರೆಯದವರ ಆರೋಗ್ಯ ಕಾಳಜಿ, ಲಸಿಕೆ ಸೇವೆ, ಕುಟುಂಬ ನಿಯಂತ್ರಣ, ಸೋಂಕು ರೋಗಗಳ ನಿರ್ವಹಣೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿರ್ವಹಣೆ, ಸಣ್ಣಪುಟ್ಟ ಗಾಯಗಳಿಗೆ ಆರೈಕೆ, ಥೈರಾಯಿಡ್ ತಪಾಸಣೆ ಸೇರಿದಂತೆ ನಮ್ಮ ಕ್ಲಿನಿಕ್ಗಳಲ್ಲಿ ಒಟ್ಟು 12 ರೀತಿಯ ವೈದ್ಯಕೀಯ ಸೇವೆಗಳು ಲಭ್ಯವಿದೆ ಎಂದು ರಾಜ್ಯ ಸರ್ಕಾರ ಈ ಹಿಂದೆ ಹೇಳಿತ್ತು. ಆದರೆ, ಇದೀಗ ಬಹುಪಾಲು ನಮ್ಮ ಕ್ಲಿನಿಕ್ಗಳನ್ನು ಸುಸಜ್ಜಿತವಾದ ಕಟ್ಟಡಗಳಲ್ಲಿ ನಿರ್ಮಾಣ ಮಾಡಿಲ್ಲ.
ಕ್ಲಿನಿಕ್ಗೆ ಒದಗಿಸಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ. ಥೈರಾಯಿಡ್ ತಪಾಸಣೆ ಕಿಟ್ ಸೇರಿದಂತೆ ಹಲವಾರು ಚಿಕಿತ್ಸಾ ಪರಿಕರಗಳನ್ನು ಒದಗಿಸಿಲ್ಲ ಎಂಬ ಆರೋಪಗಳಿವೆ.
ಕ್ಲಿನಿಕ್ಗಳು ಬೆಳಗ್ಗೆ ಮತ್ತು ಸಂಜೆಯಷ್ಟೇ ತೆರೆಯುವುದರಿಂದ ಹೆಚ್ಚಿನವರಿಗೆ ಕ್ಲಿನಿಕ್ ಸೇವೆ ದೊರೆಯುತ್ತಿಲ್ಲ. ಬೆಳಗ್ಗಿನ ವೇಳೆ 10 ಗಂಟೆಗೆ ಕ್ಲಿನಿಕ್ ಮುಚ್ಚುವುದರಿಂದ ಜನರು ಕ್ಲಿನಿಕ್ಗೆ ಬರಲಾಗುತ್ತಿಲ್ಲ. ಜನರು ತಮ್ಮ ಅಗತ್ಯ ಕೆಲಸಗಳನ್ನು ಮುಗಿಸಿಕೊಂಡು ಕ್ಲಿನಿಕ್ನತ್ತ ಬರೋಣವೆನ್ನುವಷ್ಟದಲ್ಲಿ ಕ್ಲಿನಿಕ್ಗಳ ಬಾಗಿಲು ಮುಚ್ಚಿರುತ್ತದೆ. ಕ್ಲಿನಿಕ್ಗಳ ಸೇವೆ ಪಡೆದುಕೊಳ್ಳಬೇಕೆಂದರೆ, ಮುಖವನ್ನೂ ತೊಳೆಯದೆ, ಉಪಾಹಾರವನ್ನೂ ಸೇವಿಸದೆ, ಎದ್ದ ಕೂಡಲೇ ಬರಬೇಕು ಎಂಬ ಅಸಮಾಧಾನದ ಮಾತುಗಳೂ ಕೇಳಿಬಂದಿವೆ.
ಒಂದು ವೇಳೆ ಹಾಗೂ ಹೀಗೂ ಮಾಡಿ ಕ್ಲಿನಿಕ್ಗೆ ಬಂದರೂ, ಇನ್ನೂ ಹಲವು ಆರೋಗ್ಯ ಉಪಕರಣಗಳು ಕ್ಲಿನಿಕ್ನಲ್ಲಿ ಇಲ್ಲದೇ ಇರುವುದರಿಂದ ಉತ್ತಮ ಸೇವೆ ದೊರೆಯುತ್ತಿಲ್ಲ ಎಂದು ಆರೋಪಿಸಲಾಗಿದೆ.
“ಕ್ಲಿನಿಕ್ಗೆ ಬೇಕಾದ ಇನ್ನು ಕೆಲವೊಂದು ತಪಾಸಣಾ ಕಿಟ್ಗಳನ್ನು ನೀಡಿಲ್ಲ. ದಿನಕ್ಕೆ 10 ರಿಂದ 15 ಜನ ಚಿಕಿತ್ಸೆ ಪಡೆದುಕೊಳ್ಳಲು ಬರುತ್ತಾರೆ” ಎಂದು ನಮ್ಮ ಕ್ಲಿನಿಕ್ನ ವೈದ್ಯರೊಬ್ಬರು ಈ ದಿನ.ಕಾಮ್ಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿಗೆ ‘ಇಂದಿರಾ ಕ್ಯಾಂಟೀನ್’ ಮೇಲೆ ಯಾಕಿಷ್ಟು ದ್ವೇಷ!
ಸಾರ್ವಜನಿಕರು ಏನಂತಾರೆ?
ಈ ದಿನ.ಕಾಮ್ ಜತೆಗೆ ಮಾತನಾಡಿದ ಪ್ರಕಾಶನಗರ ನಿವಾಸಿ ಶಂಕರ, “ಕ್ಲಿನಿಕ್ಗಳು ಸೀಮಿತ ಅವಧಿಗೆ ಮಾತ್ರ ತೆರೆದಿದ್ದರೆ ಅದರಿಂದ ಏನು ಪ್ರಯೋಜನವಿಲ್ಲ. ರೋಗಿಗಳು ಆಸ್ಪತ್ರೆಗಳಿಗೆ ಅಥವಾ ಚಿಕಿತ್ಸಾಲಯಗಳಿಗೆ ತುರ್ತುಸ್ಥಿತಿಯ ಆಧಾರದ ಮೇಲೆ ತೆರಳುತ್ತಾರೆ. ಸರ್ಕಾರ ಈ ನಮ್ಮ ಕ್ಲಿನಿಕ್ಗಳನ್ನು ತೆರೆಯುತ್ತಾರೆ ಎಂದು ಹೇಳುದಾಗ ನಾವು ಈ ಕ್ಲಿನಿಕ್ಗಳು 24 ಗಂಟೆಯೂ ಕಾರ್ಯ ನಿರ್ವಹಿಸುತ್ತವೆ ಎಂದು ಭಾವಿಸಿದ್ದೆವು. ಆದರೆ ಇದೀಗ ಈ ಕ್ಲಿನಿಕ್ ಯಾರಿಗೂ ಉಪಯೋಗವಾಗುತ್ತಿಲ್ಲ””ಎಂದು ತಿಳಿಸಿದರು.
ನಮ್ಮ ಕ್ಲಿನಿಕ್ಗಳ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ರಾಜಾಜಿನಗರದ ನಿವಾಸಿ ಮನೋಜ್, “ಬೆಳಗ್ಗೆ 10 ಗಂಟೆಗೆ ನಮ್ಮ ಕ್ಲಿನಿಕ್ ತೆರೆಯುತ್ತದೆ. ನನಗೆ ಶುಗರ್ ಇದ್ದು, ಶುಗರ್ ತಪಾಸಣೆ ಮಾಡಿಸಬೇಕಾದರೆ ಉಪವಾಸ ಇರಬೇಕಾಗುತ್ತದೆ. ಕ್ಲಿನಿಕ್ ತೆಗೆಯುವ ಸಮಯದವರೆಗೂ ಉಪವಾಸ ಇದ್ದು ಚೆಕ್ ಮಾಡಿಸಲು ಸಾಧ್ಯವಿಲ್ಲ. ಇದರಿಂದ ನಮಗೆ ಯಾವುದೇ ಉಪಯೋಗವಿಲ್ಲ” ಎಂದರು.
ಮಲ್ಲೇಶ್ವರಂ ನಿವಾಸಿ ಕುಸುಮಾ ಈ ದಿನ.ಕಾಮ್ ಜತೆಗೆ ಮಾತನಾಡಿ, “ನನಗೆ ಥೈರಾಯಿಡ್ ಇದೆ ನಮ್ಮ ಕ್ಲಿನಿಕ್ನಲ್ಲಿ ಚೆಕ್ ಮಾಡಿಸಲು ತೆರಳುವ ಎಂದರೆ ಅಲ್ಲಿ ಕೇಳಿದರೇ ಇನ್ನೂ ಕಿಟ್ ಬಂದಿಲ್ಲ ಎನ್ನುತ್ತಾರೆ” ಎಂದು ಹೇಳಿದರು.