ಬೆಸ್ಕಾಂ ವ್ಯಾಪ್ತಿಯಲ್ಲಿನ ಹೊಸ ವಿದ್ಯುತ್ ಸ್ಥಾಪನಗಳಲ್ಲಿ ಅಳವಡಿಸಲಾಗುತ್ತಿರುವ ಸ್ಮಾರ್ಟ್ ಮೀಟರ್ ದರ ವೈಜ್ಞಾನಿಕವಾಗಿದ್ದು, ಅದರ ಪೂರೈಕೆದಾರರ ಜತೆಗಿನ ಟೆಂಡರ್ ಪ್ರಕ್ರಿಯೆಯೂ ಪಾರದರ್ಶಕವಾಗಿ ನಡೆದಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್.ಶಿವಶಂಕರ್ ಹೇಳಿದ್ದಾರೆ.
ರಾಜ್ಯದ ವಿದ್ಯುತ್ ಪರಿಸ್ಥಿತಿ ಹಾಗೂ ವಿದ್ಯುತ್ ಪೂರೈಕೆಗೆ ಇಂಧನ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಲು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹಾಗೂ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಅವರ ನೇತೃತ್ವದಲ್ಲಿ ಸೋಮವಾರ ಬೆಸ್ಕಾಂ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
“ಸ್ಮಾರ್ಟ್ ಮೀಟರ್ ಅಳವಡಿಕೆ ಕುರಿತು 2024ರ ಮಾರ್ಚ್ 06 ರಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ, ಹಂತ ಹಂತವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಹಾಗೂ ಬದಲಾವಣೆ ಕಾರ್ಯ ಕೈಗೊಳ್ಳಲಾಗುವುದು. ಹಾಲಿ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಐಚ್ಛಿಕ. ಹೊಸ ಹಾಗೂ ತಾತ್ಕಾಲಿಕ ಸಂಪರ್ಕಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬೇಕಾಗುತ್ತದೆ” ಎಂದರು.
“ನೈಜ ಸಮಯದ ವಿದ್ಯುತ್ ಬಳಕೆ ಮಾಹಿತಿ ಜತೆಗೆ ವಿದ್ಯುತ್ ಬಿಲ್ ಪಾವತಿಗೆ ಡಿಜಿಟಲ್ ಸ್ಪರ್ಶ ನೀಡಲು ಮುಂದಾಗಿರುವ ಇಂಧನ ಇಲಾಖೆಯು ಸ್ಮಾರ್ಟ್ ಮೀಟರ್ ಯೋಜನೆ ಜಾರಿಗೊಳಿಸಿದೆ. ಮೀಟರ್ ಹಾಗೂ ಬಿಲ್ ಲೋಪದೋಷಗಳನ್ನು ಸರಿಪಡಿಸಲು ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡುತ್ತಿದೆ. ಟಿಓಡಿ (Time of the day) ಸೌಲಭ್ಯ, ರಿಮೋಟ್ ರೀಡಿಂಗ್, ಆಟೋ ಕನೆಕ್ಷನ್ ಮತ್ತು ಆಟೋ ಡಿಸ್‌ಕನೆಕ್ಷನ್ ಇದರಿಂದ ಸಾಧ್ಯವಾಗಲಿದೆ. ವಿದ್ಯುತ್ ಕಡಿತವಾದಾಗ ವಿದ್ಯುತ್ ವಿತರಣಾ ಕಂಪನಿಗೆ ಕ್ಷಿಪ್ರ ಮಾಹಿತಿ ತಲುಪಿ, ವಿದ್ಯುತ್ ಮರು ಸ್ಥಾಪನೆ ಪ್ರಕ್ರಿಯೆ ಸುಲಭ ಮತ್ತು ತ್ವರಿತಗೊಳ್ಳುವುದು” ಎಂದು ಹೇಳಿದರು.
“ಕೇಂದ್ರ ಸರ್ಕಾರದ ಸಬ್ಸಿಡಿ ಸೇರಿ 10 ವರ್ಷಗಳ ಕಾಲ ಪ್ರತಿ ಸ್ಮಾರ್ಟ್ ಮೀಟರ್‌ಗೆ ಪ್ರತಿ ತಿಂಗಳು ತಗಲುವ ವೆಚ್ಚ -ಮಹಾರಾಷ್ಟ್ರದಲ್ಲಿ 120.34 ರೂ., ಪಶ್ಚಿಮ ಬಂಗಾಳದಲ್ಲಿ 117.81 ರೂ., ಸಿಕ್ಕಿಂ ರಾಜ್ಯದಲ್ಲಿ 148.88 ರೂ., ಮಣಿಪುರದಲ್ಲಿ 130.30 ರೂ., ಮಧ್ಯಪ್ರದೇಶದಲ್ಲಿ 115.84 ರೂ. ಆಗುತ್ತದೆ. ಇದನ್ನು ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ಬಿಲ್‌ಗೆ ಹೊಂದಾಣಿಕೆ ಮಾಡಿ ಗ್ರಾಹಕರಿಂದ ಪಡೆಯುತ್ತವೆ. ಅಲ್ಲದೇ, ಈ ರಾಜ್ಯಗಳಲ್ಲಿ ಏಕಕಾಲದಲ್ಲಿ (Bulk replacement) ಎಲ್ಲಾ ಗ್ರಾಹಕರ ಸ್ಥಾಪನಗಳಿಗೂ ಸ್ಮಾರ್ಟ್ ಮೀಟರ್ ಅಳವಡಿಸುತ್ತಿವೆ” ಎಂದು ವಿವರಿಸಿದರು.
“2025ರ ಫೆಬ್ರವರಿ 15ರಿಂದ ನಗರ ಪ್ರದೇಶಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಕ್ರಿಯೆ ಆರಂಭವಾಗಲಿದೆ. ಬೆಸ್ಕಾಂನಲ್ಲಿ ಸದ್ಯ, 30,600 ಸ್ಮಾರ್ಟ್ ಮೀಟರ್‌ಗಳ ದಾಸ್ತಾನು ಇದೆ” ಎಂದು ತಿಳಿಸಿದರು.
ನಿಯಮಾನುಸಾರ ಟೆಂಡರ್ ಪ್ರಕ್ರಿಯೆ
“ಕೇಂದ್ರ ವಿದ್ಯುತ್ ಸಚಿವಾಲಯ ನಿಗದಿಪಡಿಸಿರುವ ಸಾಮಾನ್ಯ ಬಿಡ್ಡಿಂಗ್ ದಾಖಲೆ (Standard Bidding Document)ಗಳ ಪ್ರಕಾರ ಹಾಗೂ ಕೆಟಿಪಿಪಿ ಕಾಯ್ದೆ ಅನುಸಾರ 2024ರ ಸೆ. 26ರಂದು ಟೆಂಡರ್ ಕರೆಯಲಾಗಿತ್ತು. ಬೆಸ್ಕಾಂ ನಿರ್ದೇಶಕರ ಮಂಡಳಿಯ ಅನುಮೋದನೆ ಮೇರೆಗೆ, ಕಡಿಮೆ ದರ ಬಿಡ್ ಮಾಡಿದ್ದ ರಾಜಶ್ರೀ ಎಲೆಕ್ಟ್ರಿಕಲ್ಸ್ ಸಂಸ್ಥೆಗೆ 2024ರ ಡಿ.23ರಂದು ಗುತ್ತಿಗೆ ನೀಡಲಾಯಿತು”ಎಂದು ವಿವರಿಸಿದರು.